ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ಗಳ ಪುನರ್ ವಿಂಗಡಣೆಯಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಜೆಡಿಎಸ್ಗೆ ಉಡುಗೊರೆ ನೀಡಿ, ಕಾಂಗ್ರೆಸ್ ಆಘಾತ ಕೊಟ್ಟಿದೆ. ಪಾಲಿಕೆಗಳಲ್ಲಿ ವಾರ್ಡ್ ಸಂಖ್ಯೆಯನ್ನು ಹೆಚ್ಚಳ ಮಾಡಿರುವ ಬಿಜೆಪಿ ಕೆಲವೇ ತಿಂಗಳಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲಲು ವಿಂಗಡಣೆಯಲ್ಲೇ ತಂತ್ರ ಮಾಡಿದೆ.
198 ವಾರ್ಡ್ ಗಳ ಪಾಲಿಕೆಯನ್ನು ಈಗ ಮರು ವಿಂಗಡಣೆ ಮಾಡಿ 243ಕ್ಕೆ ಏರಿಸಿ ಆಕ್ಷೇಪಣೆಗಳಿದ್ದರೆ ಸಲ್ಲಿಸಿ ಎಂದು ಸರ್ಕಾರ ಸಾರ್ವಜನಿಕರಲ್ಲಿ ಹೇಳಿದೆ.
ಆದರೆ ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲಿ ವಾರ್ಡ್ ಗಳ ಸಂಖ್ಯೆ ಹೆಚ್ಚಳ ಮಾಡಿಕೊಂಡಿರುವ ರಾಜ್ಯ ಸರ್ಕಾರ, ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ವಾರ್ಡ್ಗಳನ್ನು ಇಳಿಸಿದೆ.
ಬಿಜೆಪಿ ಶಾಸಕರಿರುವ ಕ್ಷೇತ್ರಗಳು:
ಬೊಮ್ಮನಹಳ್ಳಿ – 14 (6 ವಾರ್ಡ್ ಗಳು ಹೆಚ್ಚಳ)
ಆರ್ ಆರ್ ನಗರ – 14 (5 ವಾರ್ಡ್ ಗಳು ಹೆಚ್ಚಳ)
ಬೆಂಗಳೂರು ದಕ್ಷಿಣ – 12 (5 ವಾರ್ಡ್ ಗಳ ಹೆಚ್ಚಳ)
ಕೆ ಆರ್ ಪುರಂ – 13 (4 ವಾರ್ಡ್ ಗಳು ಹೆಚ್ಚಳ)
ಮಹದೇವಪುರ – 13 (5 ವಾರ್ಡ್ ಗಳ ಹೆಚ್ಚಳ)
ಪದ್ಮನಾಭನಗರ – 10 (2 ವಾರ್ಡ್ ಗಳ ಹೆಚ್ಚಳ)
ಗೋವಿಂದರಾಜನಗರ – 10 (1 ವಾರ್ಡ್ ಹೆಚ್ಚಳ)
ಮಹಾಲಕ್ಷಿö್ಮÃಲೇಔಟ್ – 09 (2 ವಾರ್ಡ್ ಹೆಚ್ಚಳ)
ಯಶವಂತಪುರ – 8 (3 ವಾರ್ಡ್ ಗಳ ಹೆಚ್ಚಳ)
ಬಸವನಗುಡಿ 7 (1 ವಾರ್ಡ್ ಹೆಚ್ಚಳ)
ಯಲಹಂಕ – 5 (1 ವಾರ್ಡ್ ಹೆಚ್ಚಳ)
ಸಿವಿ ರಾಮನ್ನಗರ – 9 (2 ವಾರ್ಡ್ ಹೆಚ್ಚಳ)
ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ 37 ವಾರ್ಡ್ ಗಳ ಹೆಚ್ಚಳ
ಕಾಂಗ್ರೆಸ್ ಶಾಸಕರಿರುವ ವಾರ್ಡ್ ಗಳ ಸಂಖ್ಯೆ:
ಸರ್ವಜ್ಞನಗರ – 10 (2 ವಾರ್ಡ್ ಹೆಚ್ಚಳ)
ಬ್ಯಾಟರಾಯನಪುರ – 10 (3 ವಾರ್ಡ್ ಹೆಚ್ಚಳ)
ಬಿಟಿಎಂ ಲೇಔಟ್ – 9 (1 ವಾರ್ಡ್ ಹೆಚ್ಚಳ)
ವಿಜಯನಗರ – 9 (1 ವಾರ್ಡ್ ಹೆಚ್ಚಳ)
ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲಿ 7 ವಾರ್ಡ್ಗಳಷ್ಟೇ ಹೆಚ್ಚಳ ಮಾಡಲಾಗಿದೆ.
ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲಿ ವಾರ್ಡ್ ಗಳ ಕಡಿತ
ಚಾಮರಾಜಪೇಟೆ – 6 (-1)
ಶಿವಾಜಿನಗರ – 6 (-1)
ಜಯನಗರ – 6 (-1)
ಜೆಡಿಎಸ್ ಶಾಸಕರಿರುವ ಕ್ಷೇತ್ರ:
ದಾಸರಹಳ್ಳಿ : 12 (4 ವಾರ್ಡ್ ಗಳ ಹೆಚ್ಚಳ)
ಕಾಂಗ್ರೆಸ್ ಶಾಸಕರಿರುವ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ 7 ವಾರ್ಡ್ ಗಳನ್ನಷ್ಟೇ ಹೆಚ್ಚಿಸಿ, ಕಾಂಗ್ರೆಸ್ ಶಾಸಕರಿರುವ ಉಳಿದ ಮೂರು ಕ್ಷೇತ್ರಗಳಲ್ಲಿ ಮೂರು ವಾರ್ಡ್ ಕಡಿತಗೊಳಿಸಿದೆ. ಅಂದರೆ 7-3 ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ವಾರ್ಡ್ ಸಂಖ್ಯೆ ಹೆಚ್ಚಳ ಆಗಿದ್ದೇ ಕೇವಲ 4. ಆದರೆ ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲಿ 37 ಹೊಸ ವಾರ್ಡ್ ಗಳನ್ನು ಸೃಷ್ಟಿಸಲಾಗಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿರುವ ಸೃಷ್ಟಿ ಆಗಿರುವ ಹೊಸ ವಾರ್ಡ್ಗಳಿಗಿಂತ 33 ವಾರ್ಡ್ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಹೆಚ್ಚು.
ಪ್ರತಿ ವಾರ್ಡ್ನಲ್ಲಿ 34 ಸಾವಿರದ 500 ಜನಸಂಖ್ಯೆ ಇರಬೇಕು ಎಂಬ ಲೆಕ್ಕಾಚಾರದಡಿ 2011ರ ಜನಗಣತಿ ಆಧರಿಸಿ ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆ ಮಾಡಲಾಗಿದೆ.
ಚುನಾವಣಾ ಪರಿಣಾಮಗಳು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರುವುದು ಮೂರು ಪಕ್ಷಗಳಾದ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಅನಿವಾರ್ಯ. 2005ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ 2010ರ ಚುನಾವಣೆಯಲ್ಲಿ 100 ವಾರ್ಡ್ ಗಳಲ್ಲಿ ಗೆದ್ದು ಅತೀ ದೊಡ್ಡ ಪಕ್ಷವಾಗಿದ್ದರೂ ಕಾಂಗ್ರೆಸ್-ಜೆಡಿಎಸ್ ಮತ್ತು ಪಕ್ಷೇತರರ ಮೈತ್ರಿ ಕಾರಣದಿಂದ ಅಧಿಕಾರ ತಪ್ಪಿಸಿಕೊಂಡಿತ್ತು. ಆದರೆ ಆಪರೇಷನ್ ಕಮಲದೊಂದಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗುವುದು ಖಚಿತವಾಗ್ತಿದ್ದಂತೆ ಪಾಲಿಕೆಯಲ್ಲೂ ಬಿಜೆಪಿ ಅಸಮಾಧಾನಿತ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಆಪ್ತ ಕಾರ್ಪೋರೇಟರ್ಗಳು ಮತ್ತು ಪಕ್ಷೇತರರ ಬೆಂಬಲದಿAದ ಆಡಳಿತಕ್ಕೆ ಬಂತು.
ಆದರೆ ಈ ಬಾರಿ ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲೇ ವಾರ್ಡ್ ಗಳನ್ನು ಹೆಚ್ಚಿಸಿಕೊಂಡು ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಪೋರೇಟರ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರೆ ಅಧಿಕಾರ ಹಿಡಿಯುವುದು ಸುಲಭ ಆಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರ.
ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಕಾರ್ಪೋರೇಟರ್ ಗಳು ಹೆಚ್ಚಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವುದು ಸುಲಭ ಆಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರ.
ಕಾಂಗ್ರೆಸ್ ಶಾಸಕರಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುವ ಕಾರಣ ಬಿಬಿಎಂಪಿಯಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವುದು ಕಾಂಗ್ರೆಸ್ಗೆ ಕಷ್ಟ ಆಗಬಹುದು. ಜೊತೆಗೆ ಈ ಪರಿಣಾಮ ವಿಧಾನಸಭಾ ಚುನಾವಣೆಯಲ್ಲೂ ಪರಿಣಾಮ ಬೀರಬಹುದು ಎನ್ನುವುದು ಕಾಂಗ್ರೆಸ್ನ ಆತಂಕ.
ಜೆಡಿಎಸ್ನ ಏಕೈಕ ಶಾಸಕ ಇರುವ ದಾಸರಹಳ್ಳಿಯಲ್ಲಿ ವಾರ್ಡ್ ಗಳ ಸಂಖ್ಯೆಯನ್ನು 8 ರಿಂದ 12ಕ್ಕೆ ಹೆಚ್ಚಿಸಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳಿAದ ನಡೆದ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರುವ ಬಿಜೆಪಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಗೆದ್ದು ಆ ಮೂಲಕ ವಿಧಾನಸಭಾ ಚುನಾವಣೆಯಷ್ಟೊತ್ತಿಗೆ ನಮ್ಮ ಪರ ಜನಾಭಿಪ್ರಾಯ ಇದೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಲು ಈ ತಂತ್ರ ಹೆಣೆದಿದೆ.