ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವೇಣೂರಿನ ಪಟಾಕಿ ತಯಾರಿಕಾ ಘಟಕದಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿದ್ದು, ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.ಬೆಳ್ತಂಗಡಿ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಪಟಾಕಿ ತಯಾರಿ ಘಟಕದಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿದ್ದು, ಮೂವರ ಮೃತ ದೇಹಗಳು ಛಿದ್ರ- ಛಿದ್ರವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭಾರೀ ಸ್ಫೋಟ ನಡೆದ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಎಸ್ಪಿ ರಿಷ್ಯಂತ್ “ಭಾನುವಾರ ಸಂಜೆ ಸುಮಾರು 5.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಕೇರಳ ಮೂಲದ ವರ್ಗೀಸ್(62), ಸ್ವಾಮಿ(60) ಹಾಗೂ ಹಾಸನ ಅರಿಸೀಕೆರೆ ಮೂಲದ ಚೇತನ್ (24) ಮೃತಪಟ್ಟಿದ್ದಾರೆ. ಈ ಸ್ಫೋಟ ಯಾಕಾಯ್ತು?, ಏನಾಯ್ತು ಅನ್ನುವ ತನಿಖೆ ನಡೆಯುತ್ತಿದೆ” ಎಂದು ಹೇಳಿದರು.
“50 ಸೆನ್ಸ್ ಸ್ಥಳದಲ್ಲಿ ಸಯ್ಯದ್ ಬಶೀರ್ ಎಂಬುವವರು ಪಟಾಕಿ ಮಾಡಲು ಪರವಾನಿಗೆ ಪಡೆದಿದ್ದರು. 2011-2012ರಲ್ಲಿ ಪಡೆದಿರುವ ಪರಚಾನಿಗೆ 2019ರಲ್ಲಿ ನವೀಕರಣ ಆಗಿದೆ. 2024ರ ಮಾರ್ಚ್ ವರೆಗೂ ಲೈಸೆನ್ಸ್ ಸಿಂಧುತ್ವವಿದೆ. ಬೇಡಿಕೆಗೆ ತಕ್ಕಂತೆ ಪಟಾಕಿ ಇಲ್ಲಿ ಮಾಡಲಾಗುತ್ತಿತ್ತು ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪಟಾಕಿ ತಯಾರಿಸುವಾಗ ಯಾವ ಕಾರಣಕ್ಕೆಸ್ಫೋಟಗೊಂಡಿದೆ ಎಂಬ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೊಬೈಲ್ ಫರೆನ್ಸಿಕ್ ಟೀಮ್, ಡಿಪಾರ್ಟ್ಮೆಂಟ್ ಆಫ್ ಎಕ್ಸ್ಪೋಸಿವ್ಸ್ ತಂಡ ಬರುತ್ತಿದೆ” ಎಂದು ಎಸ್ಪಿ ರಿಷ್ಯಂತ್ ತಿಳಿಸಿದರು.ಪಟಾಕಿ ಸ್ಫೋಟದ ತೀವ್ರತೆಯಿಂದ ಹಲವು ಅನುಮಾನಗಳ ಸೃಷ್ಟಿ – ಎನ್ಐಎ ತನಿಖೆಗೆ ನಳಿನ್ ಕುಮಾರ್ ಕಟೀಲ್ ಒತ್ತಾಯ ‘ಬೆಳ್ತಂಗಡಿಯ ವೇಣೂರಿನ ಗೋಳಿಯಂಗಡಿಯಲ್ಲಿ ಪಟಾಕಿ ಸ್ಫೋಟ ನಡೆದ ಸ್ಥಳದಲ್ಲಿ ಹತ್ತಕ್ಕೂ ಅಧಿಕ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿದೆ. ದೊಡ್ಡ ಗಾತ್ರದ ಬಾಂಬ್ ಗಳು ಐದು ಬಾರಿ ಸ್ಫೋಟಗೊಂಡಿದೆ. ಪರಿಣಾಮ ಸ್ಫೋಟ ನಡೆದ ಸುತ್ತಮುತ್ತಲಿನ 2 ಕಿ.ಮೀ. ವ್ಯಾಪ್ತಿಯ ಮನೆಗಳಿಗೆ ಹಾನಿಯಾಗಿದೆ. ಕೆಲವು ಮನೆಗಳು ಸಂಪೂರ್ಣ ಜಖಂಗೊಂಡಿದೆ. ಮನೆಯ ಮೇಲ್ಛಾವಣಿಯ ಶೀಟ್ ಗಳು ತುಂಡು ತುಂಡಾಗಿ ಮುರಿದು ಬಿದ್ದಿದೆ. ಸ್ಫೋಟದ ವೇಳೆ ಕಣ್ಣುಗಳು ಮಂಜಾಗಿದೆ’ ಎಂದು ಸ್ಫೋಟದ ಭೀಕರತೆಯನ್ನು ಸ್ಥಳೀಯರು ವಿವರಿಸಿದ್ದಾರೆ. ಸ್ಥಳಕ್ಕೆ ಫಾರೆನ್ಸಿಕ್ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟಗೊಂಡ ಸ್ಥಳ, ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನೆ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ‘ಘಟನೆಗೆ ಕಾರಣ ಏನು ಎಂಬುವುದರ ಬಗ್ಗೆ ಗಂಭೀರ ತನಿಖೆ ನಡೆಯಬೇಕಿದೆ. ಪರವಾನಿಗೆ ನೀಡಿದರ ಬಗ್ಗೆ ಸರ್ಕಾರ ಗಂಭೀರ ತನಿಖೆ ನಡೆಸಬೇಕು. ಸ್ಫೋಟದ ತೀವ್ರತೆ ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಪ್ರಕರಣವನ್ನು ಎನ್ಐಎಗೆ ಒಪ್ಪಿಸಬೇಕು. ಹಾನಿಗೊಳಗಾದ ಮನೆಗಳಿಗೆ ಸರ್ಕಾರ ಸಂಪೂರ್ಣ ಪರಿಹಾರ ಕೊಡಬೇಕು. ಬಲಿಯಾದ ಕಾರ್ಮಿಕರ ಕುಟುಂಬಗಳಿಗೂ ಸರ್ಕಾರ ಪರಿಹಾರ ನೀಡಬೇಕು’ ಎಂದು ಹೇಳಿದ್ದಾರೆ.