ಶ್ರೀರಾಮ ಮಂದಿರದ ಉದ್ಘಾಟನೆಗೆ ಸಜ್ಜಾಗುತ್ತಿರುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಕೋಟಿ ಗಟ್ಟಲೇ ವ್ಯಯಿಸಿ ಫ್ಲಾಟ್ ಖರೀದಿಸಿದ್ದಾರೆ.
ಹೌದು ಅಯೋಧ್ಯೆಯ ಸೆವೆನ್ ಸ್ಟಾರ್ ಎನ್ಕ್ಲೇವ್ ಎಂದೇ ಹೆಸರಾದ ಪ್ರದೇಶದಲ್ಲಿ ಅಮಿತಾಭ್ ಬಚ್ಚನ್ ಭೂಮಿ ಕೊಂಡು ಕೊಂಡಿದ್ದಾರೆ. ಮುಂಬೈ ಮೂಲದ ಡೆವಲಪರ್ ದಿ ಹೌಸ್ ಆಫ್ ಅಭಿನಂದನ್ ಲೋಧಾ (ಎಚ್ಒಎಬಿಎಲ್) ಅಭಿವೃದ್ದಿಪಡಿಸಿರುವ ಲೇಔಟ್ನಲ್ಲಿ ಅಮಿತಾಭ್ ಬಚ್ಚನ್ ಭೂಮಿ ತೆಗೆದುಕೊಂಡಿದ್ದು, ಈ ಭೂಮಿಯ ವಿಸ್ತೀರ್ಣ ಎಷ್ಟು ಅನ್ನೋದನ್ನ ಸಂಸ್ಥೆ ಅಧಿಕೃತವಾಗಿ ಬಹಿರಂಗ ಮಾಡಿಲ್ಲ. ಆದರೆ, ಸುಮಾರು 10 ಸಾವಿರ ಚದರ ಅಡಿ ಪ್ರದೇಶವನ್ನು ಅಮಿತಾಭ್ ಬಚ್ಚನ್ ಖರೀದಿ ಮಾಡಿದ್ದು, ಇದರ ಮೌಲ್ಯ 14.5 ಕೋಟಿ ರೂ. ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮಿತಾಭ್ ಬಚ್ಚನ್, ಅಯೋಧ್ಯೆಯ ದಿ ಸರಯೂ ಲೇಔಟ್ನಲ್ಲಿ ದಿ ಹೌಸ್ ಆಫ್ ಅಭಿನಂದನ್ ಲೋಧಾ ಅವರ ಯೋಜನೆ ಕುರಿತಾಗಿ ತಾವು ತುಂಬಾನೇ ಉತ್ಸುಕರಾಗಿ ಇರೋದಾಗಿ ಹೇಳಿದ್ದಾರೆ. ಅಯೋಧ್ಯೆಗೆ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಇದೆ ಎಂದಿರುವ ಅಮಿತಾಭ್ ಬಚ್ಚನ್, ಅಯೋಧ್ಯೆ ಜೊತೆ ತಾವು ಭಾವನಾತ್ಮಕ ನಂಟು ಹೊಂದಿರೋದಾಗಿ ಹೇಳಿದ್ದಾರೆ.