ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬಿಜೆಪಿಯ ಧುರೀಣ , ಹಿರಿಯ ಮುತ್ಸದ್ದಿ ಆಡ್ವಾಣಿಯವರನ್ನು ಕರೆತರುವಂತೆ ರಾಮ ಜನ್ಮಭೂಮಿ ಟ್ರಸ್ಟ್ ನ ಸದಸ್ಯ, ಮಾಜಿ ಸಂಸದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರವರನ್ನು ಒತ್ತಾಯಿಸಿದ್ದಾರೆ.
ರಾಮಮಂದಿರಕ್ಕಾಗಿ ನಡೆದ ಹೋರಾಟದಲ್ಲಿ ಲಾಲ್ ಕೃಷ್ಣ ಆಡ್ವಾಣಿಯವರ ಪಾತ್ರ ಬಹಳ ಮಹತ್ವದ್ದು, ಹೀಗಾಗಿ ಜನವರಿ 22 ರಂದು ನಡೆಯಲಿರುವ ವೈಭವೋಪೇತ ರಾಮಮಂದಿರದಲ್ಲಿ ರಾಮಲಲ್ಲಾ ತನ್ನ ಪೀಠದಲ್ಲಿ ವಿರಾಜಮಾನನಾಗಿರುವುದನ್ನು ಆಡ್ವಾಣಿಯವರು ಕಣ್ತುಂಬಿಕೊಳ್ಳಬೇಕು. ಇದು ದೇಶವಾಸಿಗಳು ಮತ್ತು ವಿಶ್ವದ ಪ್ರತಿಯೊಬ್ಬ ಹಿಂದೂವಿನ ಆಶಯವಾಗಿದೆ ಅಂತ ರಾಮ್ ವಿಲಾಸ್ ವೇದಾಂತಿ ಅಭಿಪ್ರಾಯಪಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಡ್ವಾಣಿಯವರನ್ನು ಕಾರ್ಯಕ್ರಮಕ್ಕೆ ಕರೆತರಲು ಸಿದ್ಧತೆ ನಡೆಸಲೇಬೇಕು ಅಂತ ರಾಮ ವಿಲಾಸ್ ವೇದಾಂತಿ ಒತ್ತಾಯಿಸಿದ್ದಾರೆ.
ಇನ್ನು ಕಳೆದ ವಾರವಷ್ಟೇ ಆಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಯವರನ್ನು ಆಹ್ವಾನ ಪತ್ರಿಕೆಯೊಂದಿಗೆ ಭೇಟಿ ನೀಡಿ ಇಬ್ಬರಿಗೂ ವಯಸ್ಸಿನ ಕಾರಣ ನೀಡಿ, ತಾವು ಕಾರ್ಯಕ್ರಮಕ್ಕೆ ಬರದಿರೋದೇ ಸೂಕ್ತ ಅಂತ ರಾಮಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪಟ್ ರೈ ತಿಳಿಸಿದ್ದರು.
ತದ ನಂತರ ವಿಶ್ವ ಹಿಂದೂ ಪರಿಷತ್ ನ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಆಡ್ವಾಣಿ ಮತ್ತು ಎಂ.ಎಂ ಜೋಶಿಯವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ತಾವಿಬ್ಬರೂ ಬರಲೇಬೇಕೆಂದು ಮನವಿಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ಮುತ್ಸದ್ದಿಗಳಿಬ್ಬರೂ ತಾವು ಕಾರ್ಯಕ್ರಮಕ್ಕೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡೋದಾಗಿ ತಿಳಿಸಿದ್ದರು.
ಸದ್ಯ ಈ ಎಲ್ಲಾ ಬೆಳವಣಿಗೆಗಳ ನಡುವೆ ಆಡ್ವಾಣಿ ಮತ್ತು ಜೋಶಿಯವರು ಕಾರ್ಯಕ್ರಮಕ್ಕೆ ಹಾಜರಾಗ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.