ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಗೆಲ್ಲುವ ಸಲುವಾಗಿ ಬಿಜೆಪಿ ಈಗ ತಾನೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆನ್ನುಬಿದ್ದಿದೆ.
ಲಿಂಗಾಯತ ಮತಗಳನ್ನು ಉಳಿಸಿಕೊಳ್ಳುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿ ಹೊಸ ಹುದ್ದೆಯನ್ನು ನೀಡುವ ನಿರೀಕ್ಷೆ ಇದೆ.
ಕರ್ನಾಟಕ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಬಿಜೆಪಿ ಯಡಿಯೂರಪ್ಪ ಅವರನ್ನು ನೇಮಕ ಮಾಡಬಹುದು
ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ಷಣ ನ್ಯೂಸ್ ಫೆಬ್ರವರಿ 7ರಂದೇ ಸುದ್ದಿ ಪ್ರಕಟಿಸಿತ್ತು.
ಈ ಮೂಲಕ ಕರ್ನಾಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಭಾರವನ್ನು ಬಿಜೆಪಿ ಯಡಿಯೂರಪ್ಪನವರ ಮೇಲೆ ಹಾಕುವ ನಿರೀಕ್ಷೆ ಇದೆ.
ಜೊತೆಗೆ ಕರ್ನಾಟಕದಲ್ಲಿ ಬಿಜೆಪಿಗೆ ಯಡಿಯೂರಪ್ಪನವರೇ ಸರ್ವೋಚ್ಛ ನಾಯಕರು, ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂಬ ಸಂದೇಶ ರವಾನಿಸುವ ಪ್ರಯತ್ನವನ್ನೂ ಬಿಜೆಪಿ ಮಾಡಲಿದೆ ಎನ್ನಲಾಗಿದೆ.
ಅವಧಿಪೂರ್ಣಗೊಳಿಸಲು ಅವಕಾಶವನ್ನು ಕೊಡದೇ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಇಳಿಸಿದ ಬಳಿಕ ಬಿಜೆಪಿ ಬಿಎಸ್ವೈ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು. ಆದರೆ ಕಳೆದ ಕೆಲ ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಒಳಗೊಂಡಂತೆ ಬಿಜೆಪಿ ನಾಯಕರು ಯಡಿಯೂರಪ್ಪ ಹೊಗಳಿಕೆಯಲ್ಲಿ ನಿರತರಾಗಿದ್ದಾರೆ.
ಚುನಾವಣೆಯಲ್ಲಿ ಹಿನ್ನಡೆ ಆಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿತ್ತಾದರೂ ಅದು ಪಕ್ಷಕ್ಕೆ ಆಗಿರುವ ಹಾನಿಯನ್ನು ಸರಿಪಡಿಸುವಲ್ಲಿ ನೆರವಾಗಿಲ್ಲ.
ಈ ಹಿಂದೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳಿಗೂ ಯಡಿಯೂರಪ್ಪ ಅವರನ್ನು ಕರೆದಿರಲಿಲ್ಲ. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಕೊನೆಗೆ ಘಳಿಗೆಯಲ್ಲಿ ತರಾತುರಿಯಲ್ಲಿ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿತ್ತು.
ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಸಮಾವೇಶದಲ್ಲೂ ಯಡಿಯೂರಪ್ಪನವರಿಗೆ ಆಹ್ವಾನ ಇರಲಿಲ್ಲ.
ಕಾಂಗ್ರೆಸ್ನಲ್ಲೂ ಲಿಂಗಾಯತರೇ ಪ್ರಚಾರ ಸಮಿತಿ ಅಧ್ಯಕ್ಷ:
ಇತ್ತ ಕಾಂಗ್ರೆಸ್ನಲ್ಲಿ ಪ್ರಮುಖ ಲಿಂಗಾಯತ ನಾಯಕ ಮತ್ತು ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರು ಕಾಂಗ್ರೆಸ್ನ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ನಾವೂ ಲಿಂಗಾಯತರಿಗೆ ಮಣೆ ಹಾಕಿದ್ದೇವೆ ಎಂಬ ಸಂದೇಶವನ್ನು ಈ ಹಿಂದೆಯೇ ರವಾನಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತ್ತು.