ವಿಶ್ಲೇಷಣೆ: ಸಿದ್ದನಗೌಡ
ಜೈನ ಧರ್ಮವೋ ಅಥವಾ ಮತವೋ, ಬೌದ್ಧ ಧರ್ಮವೋ ಅಥವಾ ಮತವೋ..? ಭಾರತದಲ್ಲಿ ಉದಯಿಸಿದ ಧರ್ಮಗಳು ಎಂದು ಹೇಳುವಾಗ ಹಿಂದೂ ಧರ್ಮದ ಜೊತೆಗೆ ಜೈನ ಮತ್ತು ಬೌದ್ಧ ಧರ್ಮಗಳನ್ನೂ ಹೇಳಲಾಗುತ್ತದೆ.
ಆದರೆ ಆರ್ಎಸ್ಎಸ್ ಚಿಂತನೆಯ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಮತ್ತು ಬಹುತೇಕ ಬ್ರಾಹ್ಮಣರೇ ತುಂಬಿರುವ ಪಠ್ಯಪುಸ್ತಕ ಸಮಿತಿ ಬೌದ್ಧ ಮತ್ತು ಜೈನ ಎರಡನ್ನೂ `ಮತಗಳು’ ಎಂದು ಪಠ್ಯದಲ್ಲಿ ಸೇರಿಸಿದೆ. ಈ ಮೂಲಕ ಒಕ್ಕಲಿಗ, ಲಿಂಗಾಯತ, ದಲಿತ ಮತ್ತು ಬಿಲ್ಲವ ಸಮುದಾಯದ ಬಳಿಕ ಈಗ ಜೈನ ಮತ್ತು ಬೌದ್ಧ ಧರ್ಮಿಯರ ಆಕ್ರೋಶಕ್ಕೂ ಕಾರಣ ಆಗಿದೆ.
8ನೇ ತರಗತಿಯ ಸಮಾಜ ವಿಜ್ಞಾನ ಭಾಗ 1ರಲ್ಲಿ 5ನೇ ಅಧ್ಯಾಯದಲ್ಲಿ ಸನಾತನ ಧರ್ಮ ಎಂಬ ಪಾಠವಿದೆ. `ಸನಾತನ ಧರ್ಮವನ್ನೇ ಹಿಂದೂ ಧರ್ಮ’ ಎಂದು ಹೇಳುತ್ತೇವೆ ಎಂದು ಆ ಪಠ್ಯದಲ್ಲಿ ಬರೆಯಲಾಗಿದೆ.
`ಸನಾತನ ಧರ್ಮ’ ಎಂದ ಎಂಬ ಅಧ್ಯಾಯದಲ್ಲಿ `ಮತಗಳು ಮತ್ತು ಮತಾಚಾರ್ಯರು’ ಎಂಬ ಉಪ ಪಾಠವಿದೆ. ಈ ಉಪ ಪಾಠದಲ್ಲಿ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಈ ಮೂರು ಕವಲುಗಳನ್ನು `ಮತಗಳು’ ಎಂದು ಪಠ್ಯದಲ್ಲಿ ಬಣ್ಣಿಸಲಾಗಿದೆ. `ಕಾಶ್ಮೀರ ಶೈವದರ್ಶನ, ಶೈವಸಿದ್ಧಾಂತ, ವೀರಶೈವ ಮತಗಳು ಮುಖ್ಯವಾದವು‘ ಎಂದೂ ಪಠ್ಯದಲ್ಲಿ ಹೇಳಲಾಗಿದೆ.
ನಂತರದಲ್ಲೇ ಬರುವ ಉಪ ಪಠ್ಯವೇ `ಜೈನ ಮತ್ತು ಬೌದ್ಧ ಮತಗಳು’. ಈ ಉಪ ಪಠ್ಯದಲ್ಲಿ `ಕರ್ಮಫಲ ಮತ್ತು ಪುನರ್ಜನ್ಮಗಳಲ್ಲಿ ನಂಬಿಕೆ ಇಟ್ಟಿರುವ ಜೈನ, ಬೌದ್ಧ ಮತಗಳು ವೇದಪ್ರಮಾಣದ ನಿರಾಕರಣೆಯಿಂದಾಗಿ ನಾಸ್ತಿಕ ದರ್ಶನಗಳಾಗಿವೆ’ ಎಂದು ಪಠ್ಯಪುಸ್ತಕ ಪಠ್ಯದಲ್ಲಿ ಸೇರಿಸಿದೆ. `ಜೈನ ಮತವು ಆತ್ಮವನ್ನು ನಂಬುತ್ತದೆ. ಆನಂದದ ನೆಲೆಯಾಗಿ ಆತ್ಮವನ್ನು ಕಾಣುವುದೇ ಸನಾತನಧರ್ಮದ ಬುನಾದಿಯಾಗಿದೆ’ ಎಂದು ಹೇಳುವ ಮೂಲಕ ಜೈನ ಮತ್ತು ಬೌದ್ಧ ಧರ್ಮವಲ್ಲ, ಹಿಂದೂ ಧರ್ಮದ ಭಾಗವಾಗಿರುವ `ಮತಗಳು‘ ಎಂಬ ಅಭಿಪ್ರಾಯವನ್ನು ಹೇರುವ ಪ್ರಯತ್ನವನ್ನು ಪಠ್ಯಪುಸ್ತಕ ಸಮಿತಿ ಮಾಡಿದೆ.
`ಸನಾತನ ಧರ್ಮ’ ಎಂಬ ಪಾಠದಲ್ಲಿ `ಬೌದ್ಧ ಮತ್ತು ಜೈನ ಮತಗಳು’ ಎಂಬ ಉಪ ಪಠ್ಯ..!
`ಸನಾತನ ಧರ್ಮ’ ಎಂಬ ಮುಖ್ಯ ಅಧ್ಯಾಯದಲ್ಲಿ ಜೈನ ಮತ್ತು ಬೌದ್ಧ ಮತಗಳು ಎಂದು ಹೇರುವ ಸಲುವಾಗಿ ಮುಖ್ಯ ಪಾಠದ ಒಂದು ಭಾಗವಾಗಿ ಸೇರಿಸಲಾಗಿದೆ. `ಸನಾತನ ಧರ್ಮ’ ಮುಖ್ಯ ಪಾಠದ ಆರಂಭದಲ್ಲಿ `ವೇದದ ಅರ್ಥ, ವೇದ ಸಾಹಿತ್ಯದ ವಿಂಗಡಣೆ, ವೇದಗಳ ಸ್ವರೂಪ, ಆಸ್ತಿಕ ನಾಸ್ತಿಕ ಪಂಥಗಳು, ಸ್ಮೃತಿ ಸಾಹಿತ್ಯದ ಮೂರು ವಿಭಾಗಗಳು’ ಎಂಬ ಉಪ ಪಠ್ಯಗಳ ಬಳಿಕ ಬರುವ ಉಪ ಪಠ್ಯಗಳೇ `ಮತಗಳು ಹಾಗೂ ಮತಾಚಾರ್ಯರು, ಬೌದ್ಧ ಮತ್ತು ಜೈನ ಮತಗಳು’ ಎನ್ನುವ ಪಠ್ಯಗಳು.
`ಕರ್ಮಫಲ ಮತ್ತು ಪುನರ್ಜನ್ಮಗಳಲ್ಲಿ ನಂಬಿಕೆ ಇಟ್ಟಿರುವ ಜೈನ, ಬೌದ್ಧ ಮತಗಳು ವೇದಪ್ರಮಾಣದ ನಿರಾಕರಣೆಯಿಂದಾಗಿ ನಾಸ್ತಿಕ ದರ್ಶನಗಳಾಗಿವೆ. ಜೈನ ಮತ್ತು ಬೌದ್ಧ ದರ್ಶನಗಳು ಪಾಪ, ಪುಣ್ಯ, ಮೋಕ್ಷ ಇತ್ಯಾದಿ ವೈದಿಕ ಪರಿಕಲ್ಪನೆಗಳನ್ನು ನಿರಾಕರಿಸುವುದಿಲ್ಲ. ಆದರೆ ಈ ಎರಡೂ ಮತಗಳಲ್ಲಿ ವೇದಪ್ರಾಮಾಣ್ಯ, ವೈದಿಕ ಯಜ್ಞ ಕರ್ಮಗಳು ಹಾಗೂ ಸೃಷ್ಟಿಕರ್ತನಾದ ಬ್ರಹ್ಮನ ನಿರಾಕರಣೆ ಇದೆ’ ಎಂದು ಪಠ್ಯದಲ್ಲಿ ಹೇಳಲಾಗಿದೆ.
ಈ ಪಠ್ಯದಲ್ಲಿ ಎಲ್ಲೂ ಕೂಡಾ ಜೈನ ಮತ್ತು ಬೌದ್ಧ ಧರ್ಮ ಎಂದು ಬಳಕೆ ಮಾಡಿಲ್ಲ. ಮತ ಮತ್ತು ಮತಾಚಾರ್ಯರ ಉಪ ಪಠ್ಯದಲ್ಲಿ `ಮತಗಳು’ ಎಂದು ಹೇಳುವಾಗ `ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ, ಶಕ್ತಿ ವಿಶಿಷ್ಟಾದ್ವೈತ, ವೀರಶೈವ ಮತ’ ಸನಾತನ ಧರ್ಮದ ಭಾಗವೆಂದು ಹೇಳುವ ಮೂಲಕ `ಜೈನ ಮತ್ತು ಬೌದ್ಧ ಧರ್ಮವಲ್ಲ, ಮತಗಳಷ್ಟೇ’ ಎಂಬ ಅಭಿಪ್ರಾಯ ಹೇರಿಕೆ ಮಾಡಿದೆ.
ಇದೇ ತರಗತಿಯ 6ನೇ ಅಧ್ಯಾಯದಲ್ಲಿ ಬೌದ್ಧ ಮತ್ತು ಜೈನ ಇವುಗಳನ್ನು ಧರ್ಮಗಳು ಎಂದಿಲ್ಲ, ಮತಗಳು ಎಂದು ಕರೆಯಲಾಗಿದೆ. ಈ ಅಧ್ಯಾಯದ ಹೆಸರೇ `ಬೌದ್ಧ ಮತ್ತು ಜೈನ ಮತಗಳು’. ಈ ಅಧ್ಯಾಯದಲ್ಲಿ ಜೈನ ಧರ್ಮ ಮತ್ತು ಬೌದ್ಧ ಧರ್ಮ ಎಂಬ ಒಂದೇ ಒಂದು ಪದವೂ ಬಳಕೆ ಆಗಿಲ್ಲ.
ಹಿಂದೆಲ್ಲ ಜೈನ, ಬೌದ್ಧ ಮತ್ತು ಸಿಖ್ ಧರ್ಮಗಳ ಬಗ್ಗೆ ಭಾರತದಲ್ಲಿ ಉದಯಿಸಿದ ಧರ್ಮಗಳು ಎಂಬ ಪಠ್ಯದಲ್ಲಿ ಮಕ್ಕಳಿಗೆ ಇತಿಹಾಸದ ಪಾಠ ಮಾಡಲಾಗುತ್ತಿತ್ತು. ಆದರೆ ರೋಹಿತ ಚಕ್ರತೀರ್ಥ ಸಮಿತಿ ಆ ಪದವನ್ನೇ ಬಳಸಿಲ್ಲ.
ಈ ಮೂಲಕ `ಸನಾತನ ಧರ್ಮ’ ಎಂಬ 5ನೇ ಅಧ್ಯಾಯದಲ್ಲಿ ಉಪ ಅಧ್ಯಾಯಗಳಾಗಿ `ಬೌದ್ಧ ಮತ್ತು ಜೈನ ಮತಗಳು’ ಎಂಬ ಹೇರಿಕೆ ಅಭಿಪ್ರಾಯವನ್ನು ಮುಂದುವರಿಸಿಕೊಂಡು ಸಮರ್ಥಿಸಿಕೊಳ್ಳಲಾಗಿದೆ.
`ಏಕವಚನ’ದ ನಂಜು:
6ನೇ ಅಧ್ಯಾಯದಲ್ಲಿ `ಬೌದ್ಧ ಮತ್ತು ಜೈನ ಮತಗಳು’ ವಿವರಣೆಯಲ್ಲಿ 24ನೇ ಜೈನ ತೀರ್ಥಂಕರ ವರ್ಧಮಾನ ಮಹಾವೀರ ಮತ್ತು 23ನೇ ತೀರ್ಥಂಕರ ಪಾರ್ಶ್ವನಾಥ ತೀರ್ಥಂಕರರನ್ನು ಏಕವಚನದಲ್ಲೇ ಉಲ್ಲೇಖಿಸಲಾಗಿದೆ. ಪಠ್ಯದಲ್ಲಿ ಎಲ್ಲೂ ಒಂದೇ ಒಂದು ಕಡೆ ಬಹುವಚನ ಪ್ರಯೋಗ ಮಾಡಿಲ್ಲ. ಇದು ಜೈನ ಮತ್ತು ಬೌದ್ಧ ಧರ್ಮಿಯರ ಅಸಮಾಧಾನಕ್ಕೆ ಕಾರಣವಾಗಿದೆ.
`ಬಹುವಚನ’ದ ಗೌರವ
ಆದರೆ ಮಧ್ವಾಚಾರ್ಯರು, ಶಂಕರಾಚಾರ್ಯರು ಹಾಗೂ ರಾಮಾನುಜಾಚಾರ್ಯರನ್ನು 9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ `ಮತ ಪ್ರವರ್ತಕರು’ ಎಂಬ 3ನೇ ಅಧ್ಯಾಯದಲ್ಲಿ ಪಠ್ಯದುದ್ದಕ್ಕೂ ಬಹುವಚನದಲ್ಲೇ ಸಂಭೋಧಿಸಲಾಗಿದೆ.
ಧರ್ಮ ಮತ್ತು ರಿಲಿಜಿನ್: ಅರ್ಥ ಹುಡುಕಲು ವಿಫಲವಾಯಿತೇ ಪಠ್ಯಪುಸ್ತಕ ಸಮಿತಿ?
ಸಾಮಾನ್ಯವಾಗಿ ಧರ್ಮಕ್ಕೆ ಇಂಗ್ಲೀಷ್ನಲ್ಲಿ ರಿಲೀಜಿಯನ್ ಎಂಬ ಪದ ಬಳಕೆ ಮಾಡಲಾಗುತ್ತದೆ. ಆದರೆ ಪಠ್ಯಪುಸ್ತಕ ಸಮಿತಿ ಧರ್ಮ ಮತ್ತು ರಿಲಿಜಿಯನ್ ಬಗ್ಗೆ ಗೊಂದಲ ಸೃಷ್ಟಿಸಿದೆ.
ಪಾಶ್ಚಾತ್ಯ ಧರ್ಮಗಳಾದ ಇಸ್ಲಾಂ, ಕ್ರೈಸ್ತ, ಪಾರ್ಸಿ, ಯಹೂದಿ ಧರ್ಮಗಳಿಗೆ ರಿಲಿಜಿಯನ್ ಎಂದು ಪದ ಬಳಕೆ ಮಾಡಿದೆ. ಎಲ್ಲೂ ಕೂಡಾ ಧರ್ಮ ಪದ ಬಳಕೆ ಮಾಡಿಲ್ಲ, ಬದಲಿಗೆ ರಿಲಿಜಿಯನ್ ಎಂಬ ಇಂಗ್ಲೀಷ್ ಪದವನ್ನೇ ಯಥೇಚ್ಛವಾಗಿ ಉದ್ದೇಶಪೂರ್ವಕವಾಗಿಯೇ ಬಳಸಲಾಗಿದೆ. ಪಾರ್ಸಿಗೂ ಪಠ್ಯದಲ್ಲಿ ಮತ ಎಂದೂ ಉಲ್ಲೇಖ ಮಾಡಿದೆ. (ಮತ ಎಂಬ ಪದ ಬಳಕೆಯನ್ನು ಜೈನ ಮತ್ತು ಬೌದ್ಧ ಧರ್ಮಕ್ಕೂ ಪಠ್ಯಪುಸ್ತಕ ಸಮಿತಿ ಮಾಡಿದೆ). ಹೀಗಾದಾಗ ಧರ್ಮಕ್ಕೆ ಇಂಗ್ಲೀಷ್ನಲ್ಲಿ ಸಮಾನಾರ್ಥಕ ಪದ ಯಾವುದು ಹಾಗೂ ರಿಲೀಜಿಯನ್ಗೆ ಕನ್ನಡದ ಅಥವಾ ಇತರೆ ಭಾಷೆಗಳಲ್ಲಿ ಸಮಾನಾರ್ಥಕ ಪದ ಯಾವುದು ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ. ಈ ಬಗ್ಗೆ ಸಮಿತಿ ಯಾವುದೇ ವಿವರಣೆ ನೀಡಿಲ್ಲ.
ಆದರೆ, ರಿಲಿಜಿಯನ್ ಬಗ್ಗೆ 8ನೇ ತರಗತಿಯ 44ನೇ ಪುಟದಲ್ಲಿ ವಿವರಣೆ ನೀಡಿರುವ ಸಮಿತಿ, `ರಿಲಿಜಿಯನ್ ಎಂಬುದು ಐರೋಪ್ಯ ಪರಿಕಲ್ಪನೆ. ಇದು ನಿರ್ದಿಷ್ಟವಾದ ವ್ಯಕ್ತಿ ಹಾಗೂ ಸಮಾಜದ ಕುರಿತಾದ ನಂಬಿಕೆ. ಇಲ್ಲಿ ಪವಿತ್ರ ಗ್ರಂಥಗಳು ಮೂಲ ಪುರುಷನ ಆಶಯಗಳನ್ನು ತಿಳಿಸುತ್ತವೆ‘ ಎಂದು ಪಠ್ಯದಲ್ಲಿ ಸೇರಿಸಲಾಗಿದೆ.
ಅಂತಿಮವಾಗಿ:
ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋದಲ್ಲಿ ಸೆಪ್ಟೆಂಬರ್ 11, 1839ರಂದು ಮಾಡಿದ ಐತಿಹಾಸಿಕ ಭಾಷಣದಲ್ಲಿ ರಿಲಿಜಿಯನ್ ಎಂಬ ಪದವನ್ನು ಬಳಸಿದ್ದಾರೆ. `ವಿಶ್ವಕ್ಕೆ ಸಹನೆ ಮತ್ತು ಸ್ವೀಕಾರ ಗುಣವನ್ನು ಕಳಿಸಿದ ಧರ್ಮದಿಂದ ಬಂದವನು ಎಂದು ಹೇಳಲು ನನಗೆ ಹೆಮ್ಮೆ ಆಗುತ್ತದೆ‘ ಎಂದು ವಿವೇಕಾನಂದರು ಭಾಷಣದಲ್ಲಿ ಹೇಳುವಾಗ `ಹಿಂದೂ ಧರ್ಮ’ದ ಬಗ್ಗೆ ಬಳಸಿದ್ದು `ರಿಲಿಜಿಯನ್’ ಪದವನ್ನೇ.
ಆದರೆ ರೋಹಿತ ಚಕ್ರತೀರ್ಥ ಸಮಿತಿ ಈ ಪದದ ಬಗ್ಗೆ ಯಾಕಿಷ್ಟು ಸಂಕುಚಿತ ಆಯಿತು ಮತ್ತು ತನ್ನ ಸಂಕುಚಿತ ಮನಸ್ಥಿತಿಯನ್ನು ಯಾಕೆ ಶಾಲಾ ಮಕ್ಕಳ ಮೇಲೆ ಹೇರಲು ಪ್ರಯತ್ನಿಸಿತು ಎಂಬುದೇ ಸೋಜಿಗ.
ವಿವೇಕಾನಂದರ ಭಾಷಣದ ತುಣುಕು:
I am proud to belong to a religion which has taught the world both tolerance and universal acceptance. We believe not only in universal toleration, but we accept all religions as true. I am proud to belong to a nation which has sheltered the persecuted and the refugees of all religions and all nations of the earth.