ಇಂದು ಮಂಡಿಸಲಾದ ಕೇಂದ್ರ ಬಜೆಟ್ ನಿರಾಶದಾಯಕ ಹಾಗೂ ವಿನಾಶಕಾರಿ ಬಜೆಟ್ ಆಗಿದ್ದು, ಇದು ಚುನಾವಣಾ ಬಜೆಟ್ ಅಂತ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಾಕ್ತಪಡಿಸಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಜೆಟ್ನಲ್ಲಿ ಯಾವುದೇ ಹೊಸ ಅಂಶವಿಲ್ಲ, ಈ ಬಜೆಟ್ ವಿಶ್ಲೇಷಣೆ ಮಾಡುವುದು ಕಷ್ಟ. ಕೇವಲ ಚುನಾವಣೆ ಲಾಭಕ್ಕಾಗಿ ಮಾತ್ರ ಈ ಬಜೆಟ್ ಮಾಡಿದ್ದಾರೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ರು.
ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಈ ಬಜೆಟ್ ಅಂತ ಕೇವಲ ಬಾಯಿ ಮಾತಿಗೆ ಹೇಳುತ್ತಾರೆ, ಆದರೆ ಇದು ವಿನಾಶಕಾರಿ ಬಜೆಟ್ ಅಂತ ನಾನು ಹೇಳುತ್ತೇನೆ ಎಂದರು.
ಇನ್ನು ತಾವು ನಿಜವಾಗಿಯೂ ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಕಾರ್ಯಕ್ರಮ ಕೊಟ್ಟಿದ್ದು, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಗೃಹಜ್ಯೋತಿ ಕೃಷಿಭಾಗ್ಯ ಭಾಗ್ಯಗಳನ್ನು ಜನರಿಗೋಸ್ಕರ ಕೊಟ್ಟಿದ್ದೇವೆ. ದೇಶದಲ್ಲಿ ಕಳೆದ 45 ವರ್ಷಗಳಲ್ಲಿ ಬಹಳ ನಿರುದ್ಯೋಗ ಬೆಳೆದಿದೆ ಎಂದು ತಿಳಿಸಿದರು.
ಇನ್ನು ಎಂಎಸ್ ಪಿ ( ಕನಿಷ್ಠ ಬೆಂಬಲ ಬೆಲೆ) ಗೆ ಕಡಿಮೆ ಬೆಳೆಗಳನ್ನು ಮಾತ್ರ ಸೇರಿಸಲಾಗಿದೆ. ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ ಎಂಎಸ್ ಪಿ ಘೋಷಿಸಬೇಕು ಅಂತ ಸಿದ್ದರಾಮಯ್ಯ ಇದೇ ವೇಳೆ ಒತ್ತಾಯಿಸಿದ್ರು.
ಇನ್ನು ಇದು ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ರವರ 6ನೇ ಬಜೆಟ್ ಆಗಿದ್ದು, ತೆರಿಗೆಯನ್ನು ಶೇ.30ರಷ್ಟು ಇಳಿಸಿದ್ದೇವೆ ಅಂತ ಹೇಳ್ತಾರೆ. ಬಡವರಿಗೆ ಹೆಚ್ಚು ತೆರಿಗೆ ವಿಧಿಸಿದ್ದಾರೆ. ಹೀಗಾಗಿ ಇದು ರೈತರ, ಬಡವರ ಹಾಗೂ ದಲಿತರ ವಿರೋಧಿ ಬಜೆಟ್ ಅಂತ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.