ಬುರ್ಖಾ (Burqa) ಧರಿಸಿ ಮುಸ್ಲಿಂ ಸಂಪ್ರದಾಯ ಪಾಲನೆ ಮಾಡದೇ ಇದ್ದುದ್ದಕ್ಕಾಗಿ ಪತ್ನಿಯನ್ನ ಅನೇಕ ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಮುಂಬೈನಲ್ಲಿನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟ್ಯಾಕ್ಸಿ ಡ್ರೈವರ್ ಇಕ್ಬಾಲ್ ಶೇಕ್ (36)ನನ್ನು ಬಂಧಿಸಲಾಗಿದೆ. ತನ್ನ ಪತ್ನಿ ಮುಸ್ಲಿಂ ಸಂಪ್ರದಾಯ ಅನುಸರಿಸಲು ನಿರಾಕರಿಸಿದ್ದರಿಂದ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂ ಮಹಿಳೆ ರೂಪಾಲಿ 2019ರಲ್ಲಿ ಮುಸ್ಲಿಂ ಸಮುದಾಯದ ಇಕ್ಬಾಲ್ ಶೇಖ್ನನ್ನು ವಿವಾಹ (Marriage)ವಾದರು. ತಮ್ಮ ಹೆಸರನ್ನು ಜಾರಾ ಎಂದೂ ಬದಲಾಯಿಸಿಕೊಂಡಿದ್ದರು. ದಂಪತಿಗಳಿಗೆ 2020ರಲ್ಲಿ ಒಂದು ಮಗು ಜನಿಸಿತ್ತು. ಕಳೆದ ಕೆಲವು ತಿಂಗಳಿನಿಂದ ಇಕ್ಬಾಲ್ ಶೇಖ್ ಕುಟುಂಬಸ್ಥರು ಬುರ್ಖಾ (Burqa) ಧರಿಸುವಂತೆ ರೂಪಾಲಿಗೆ ಒತ್ತಡ ಹೇರುತ್ತಿದ್ದರಿಂದ ಆಕೆ ತನ್ನ ಮಗನೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿ ವಿಲಾಸ್ ರಾಥೋಡ್ ಮಾಹಿತಿ ನೀಡಿದ್ದಾರೆ.
ನಿನ್ನೆ (ಸೆ.26) ವಿಚ್ಛೇದನ ಕೇಳುವುದಕ್ಕಾಗಿ ಇಕ್ಬಾಲ್, ರೂಪಾಲಿಯನ್ನು ಮನೆಗೆ ಕರೆದಿದ್ದನು. ನಂತರ ಮಗು ಪಾಲನೆ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ರಾತ್ರಿ 10 ಗಂಟೆ ಸುಮಾರಿಗೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಪತಿ ಆಕೆಯನ್ನು ಎಳೆದೊಯ್ದು ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಇದರಿಂದ ಪತ್ನಿ ಸ್ಥಳದಲ್ಲೇ ಮೃತಪಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ (IPC Section) 302 (ಕೊಲೆ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.