ADVERTISEMENT
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಜೆಡಿಎಸ್ ಹಂಗಾಮಿ ಅಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ.
ಜೂನ್ 4ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಕುಮಾರಸ್ವಾಮಿ ಅವರು ತಾವು ಈಗ ಪ್ರತಿನಿಧಿಸ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಯಾರಿಗೆ ಬಿಟ್ಟುಕೊಡಲಿದ್ದಾರೆ..?
ಒಂದು ವೇಳೆ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಅವರು ಗೆದ್ದರೆ ಆಗ ಜನಪ್ರತಿನಿಧಿ ಕಾಯ್ದೆಯ ಪ್ರಕಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.
ಒಂದು ವೇಳೆ ಕುಮಾರಸ್ವಾಮಿ ಗೆದ್ದು ಸಂಸದರಾಗಿ ಲೋಕಸಭೆ ಪ್ರವೇಶಿಸಿದರೆ ಆಗ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಖಾಲಿಯಾಗುತ್ತದೆ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದು ಅನಿವಾರ್ಯ.
ಹಾಗಾದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಗೆ ಅಭ್ಯರ್ಥಿ ಯಾರು..?
ಚನ್ನಪಟ್ಟಣ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರು ಪ್ರತಿನಿಧಿಸ್ತಿದ್ದ ಕೇತ್ರ. 1999, 2004, 2008, 2011, 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2018 ಮತ್ತು 2023ರ ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧವೇ ಬಿಜೆಪಿಯಿಂದ ನಿಂತು ಸೋತರು.
ಯೋಗೇಶ್ವರ್ ಮತ್ತು ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಆಪರೇಷನ್ ಕಮಲದಿಂದ ಕುಮಾರಸ್ವಾಮಿ ಅವರ ಸರ್ಕಾರ ಬಿದ್ದ ಬಳಿಕ ಯೋಗೇಶ್ವರ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣ ಮಾಡಲಾಯಿತು ಮತ್ತು ಯಡಿಯೂರಪ್ಪ ಸರ್ಕಾರದಲ್ಲಿ ಅರಣ್ಯ ಖಾತೆ ಸಚಿವರೂ ಆದರು.
ಆದರೆ ಸೂಪರ್ ಸಿಎಂ ಆಗಿದ್ದ ವಿಜಯೇಂದ್ರ ಹಸ್ತಕ್ಷೇಪದಿಂದ ಬಹಿರಂಗ ಆಕ್ರೋಶದ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಕೇವಲ ಆರೇ ತಿಂಗಳಿಗೆ ಸಚಿವ ಸ್ಥಾನ ಕಳೆದುಕೊಂಡರು ಯೋಗೇಶ್ವರ್.
ಯೋಗೇಶ್ವರ್ ಅವರ ಎಂಎಲ್ಸಿ ಅವಧಿ ಮುಗಿಯುವುದು 2026ರಲ್ಲಿ ಅಂದರೆ ಇನ್ನೂ ಎರಡು ವರ್ಷ ಇದೆ. ಆದರೆ ಒಂದು ವೇಳೆ ಮಂಡ್ಯದಲ್ಲಿ ಗೆದ್ದರೆ ಕುಮಾರಸ್ವಾಮಿ ಚನ್ನಪಟ್ಟಣ ಉಪ ಚುನಾವಣೆಗೆ ಯೋಗೇಶ್ವರ್ ತಮ್ಮ ಟಿಕೆಟ್ ಕೇಳುವುದು ಅನಿವಾರ್ಯ ಆಗಬಹುದು.
ಉಪ ಚುನಾವಣೆಯಲ್ಲಿ ಟಿಕೆಟ್ ಪಡೆದು ಜೆಡಿಎಸ್ ಸಹಕಾರದಿಂದ ಗೆದ್ದು ಬಂದರೆ ಆ ತಮ್ಮ ರಾಜಕೀಯ ಪ್ರಾಬಲ್ಯವನ್ನು ಯೋಗೇಶ್ವರ್ ಮರಳಿ ಪಡೆದಂತೆ. ಅದೇ ಲೆಕ್ಕಾಚಾರದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ದೇವೇಗೌಡರ ಅಳಿಯನಿಗೆ ಬಿಟ್ಟುಕೊಡುವ ನಿರ್ಧಾರ ಮಾಡಿದಂತಿದೆ.
ಆದರೆ ತ್ಯಾಗ ಜೀವಿ ಆಗ್ತಾರಾ ಕುಮಾರಸ್ವಾಮಿ..?
ಕುಮಾರಸ್ವಾಮಿ ಅವರಿಗೆ ಇವರು ಎರಡು ಪ್ರಮುಖ ಸವಾಲುಗಳು 1. ಜೆಡಿಎಸ್ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವುದು. 2. ನಿಖಿಲ್ ಕುಮಾರಸ್ವಾಮಿ ರಾಜಕೀಯ ಜೀವನ ಗಟ್ಟಿಗೊಳಿಸುವುದು.
ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಗೆದ್ದರೆ ಕುಮಾರಸ್ವಾಮಿ ಅವರ ಎದುರಿರುವ ಆ ಎರಡು ಸವಾಲುಗಳಲ್ಲಿ ಒಂದು ಸವಾಲಿಗೆ ಭಾಗಶಃ ಉತ್ತರ ಸಿಗಬಹುದು.
ಮಗ ನಿಖಿಲ್ ಅವರ ರಾಜಕೀಯ ಭವಿಷ್ಯ ಭದ್ರಕ್ಕೆ ತತ್ಕ್ಷಣಕ್ಕೆ ಕುಮಾರಸ್ವಾಮಿ ಅವರ ಮುಂದಿರುವ ಸೂತ್ರ ಚನ್ನಪಟ್ಟಣದಿಂದ ಉಪ ಚುನಾವಣೆಗೆ ನಿಲ್ಲಿಸುವುದು. ಆ ಮೂಲಕ ಎರಡು ಗುರಿಗಳನ್ನು ಮುಟ್ಟಬಹುದು ಕುಮಾರಸ್ಬಾಮಿ.
1. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ಒಟ್ಟು 4 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದ್ದು ಕೇವಲ ಒಂದೇ ಕ್ಷೇತ್ರ ಅದು ಚನ್ನಪಟ್ಟಣದಿಂದ ಕುಮಾರಸ್ವಾಮಿ.
ಒಂದು ವೇಳೆ ಉಪ ಚುನಾವಣೆಯಲ್ಲಿ ಇರೋ ಒಂದು ಕ್ಷೇತ್ರವನ್ನು ಉಳಿಸಿಕೊಳ್ಳದೇ ಹೋದರೆ ದೇವೇಗೌಡರು ಮತ್ತು ಕುಮಾರಸ್ವಾಮಿ ಕರ್ಮಭೂಮಿಯಲ್ಲೇ ಜೆಡಿಎಸ್ ಶೂನ್ಯವಾಗಲಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ ಸಿ ಎನ್ ಮಂಜುನಾಥ್ ಗೆದ್ದರೂ ಅದು ಬಿಜೆಪಿಯ ಗೆಲುವಾಗುತ್ತದೆಯೇ ಹೊರತು ಜೆಡಿಎಸ್ ಗೆಲುವಲ್ಲ.
2. ಮಂಡ್ಯ ಮತ್ತು ರಾಮನಗರದಲ್ಲಿ ಸೋತ ಮಗನಿಗೆ 2028ರ ವಿಧಾನಸಭಾ ಚುನಾವಣೆಗೂ ಮೊದಲೇ ರಾಜಕೀಯ ಶಕ್ತಿ ತುಂಬ ಬೇಕಾದರೆ ಉಪ ಚುನಾವಣೆಯಲ್ಲಿ ನಿಖಿಲ್ ಅವರನ್ನು ಗೆಲ್ಲಿಸಿಕೊಂಡು ಬರುವುದು ಕುಮಾರಸ್ವಾಮಿ ಅವರಿಗೆ ಅನಿವಾರ್ಯ ಆಗಬಹುದು. ಇಲ್ಲವಾದರೆ ಮುಂದಿನ ವಿಧಾನಸಭಾ ಚುನಾವಣೆಗೆ ನಿಖಿಲ್ ರಾಜಕೀಯ ಶಕ್ತಿ ಇನ್ನಷ್ಟೇ ಕುಗ್ಗಲಿದೆ.
ನಿಖಿಲ್ ಕುಮಾರಸ್ವಾಮಿ ಮನಸ್ಸಿನಲ್ಲಿ ಈಗಾಗ್ಲೇ ಎರಡು ಬಾರಿ ಪೆಟ್ಟು ತಿಂದಿದ್ದೀನಿ, ಮೂರನೇ ಬಾರಿ ಮತ್ತೆ ಹೆಚ್ಚು ಕಡಿಮೆಯಾದ್ರೆ ಆ ನೋವನ್ನ ತಡೆದುಕೊಳ್ಳೋ ಶಕ್ತಿ ಇಲ್ಲ
ಎಂದು ಕುಮಾರಸ್ವಾಮಿಯವರು ಹೇಳಿದರೂ ಪುತ್ರ ವ್ಯಾಮೋಹ ಈ ಆಲೋಚನೆಯನ್ನೇ ಬದಲಿಸಿಬಿಡಬಹುದು.
ಮಂಡ್ಯದಲ್ಲಿ ಗೆದ್ದರೆ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ಕೊಡುವಂತೆ ಕುಮಾರಸ್ವಾಮಿ ಹಠಕ್ಕೆ ನಿಂತರೂ ಅಚ್ಚರಿಯಿಲ್ಲ, ಮೈತ್ರಿಯನ್ನು ಮೀರಿ.
ADVERTISEMENT