ಸ್ತ್ರೀಯರಿಗೆ ಸಾಮಾಜಿಕ ಭದ್ರತೆ ಒದಗಿಸೋ ವಿಧವಾ ವೇತನ ಯೋಜನೆಯಡಿ ಪುರುಷರಿಗೆ ವಿಧವಾ ವೇತನ ಹಂಚಿಕೆ, ವಿದ್ಯಾರ್ಥಿಗಳಿಗೆ ಎರಡೆರಡು ಬಾರಿ ಸ್ಕಾಲರ್ ಶಿಪ್ ನೀಡಿ ಜಾರ್ಖಂಡ್ ಸರ್ಕಾರ ಮಾಡಿದ ಯಡವಟ್ಟು ಇದೀಗ ಬಯಲಾಗಿದೆ.
2021-22ನೇ ಸಾಲಿನ ಸಿಎಜಿ ವರದಿ ಕುರಿತಾಗಿ ವಿಧಾನಸಭೆಯಲ್ಲಿ ನಡೆದ ಚರ್ಚೆ ವೇಳೆ ಜಾರ್ಖಂಡ್ ಸರ್ಕಾರದ ಈ ಮಹಾ ಯಡವಟ್ಟು ಬಯಲಾಗಿದೆ.
ಸರ್ಕಾರದ ಆರ್ಥಿಕ ಭದ್ರತಾ ಯೋಜನೆಯ ಮೇಲ್ವಿಚಾರಣೆ ಮತ್ತು ಲೆಕ್ಕ ಪರಿಶೋಧನೆಯ ಕೊರತೆಯಿಂದಾಗಿ ಈ ಯಡವಟ್ಟು ನಡೆದಿದೆ ಅಂತ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಾರ್ಖಂಡ್ ನ ಪೂರ್ವ ಸಿಂಗ್ ಭುಮ್, ಗೊಡ್ಡ ಪೊಟ್ಕಾ, ಘಟಿಶಿಲಾ, ಸಾದರ್ ಸೇರಿದಂತೆ ಹಲವೆಡೆ 9.54 ಲಕ್ಷ ಮೊತ್ತದ ವಿಧವಾ ವೇತನವನ್ನು 16ಕ್ಕೂ ಹೆಚ್ಚು ಪುರುಷರಿಗೆ ವಿತರಣೆ ಮಾಡಲಾಗಿದೆ.
ಇದೇ ರೀತಿ 5 ಜಿಲ್ಲೆಗಳಲ್ಲಿ ಸುಮಾರು 5.21 ಲಕ್ಷ ಮೊತ್ತದ ಸ್ಕಾಲರ್ ಶಿಪ್ ಹಣವನ್ನು ನಕಲಿ ಖಾತೆಯ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿರುವ ವಿಚಾರವೂ ಬೆಳಕಿಗೆ ಬಂದಿದೆ. ಜೊತೆಗೆ ಚಾತ್ರಾ, ಗೊಡ್ಡ, ರಾಂಚಿ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹೆಸರಿನಲ್ಲಿ ಸುಮಾರು 1.17 ಕೋಟಿ ಮೊತ್ತದ ಸ್ಕಾಲರ್ ಶಿಪ್ ಹಣವನ್ನ ನಕಲಿ ಖಾತೆಗಳಿಗೆ ವರ್ಗಾಯಿಸಲಾಗಿದೆ.
ಇಷ್ಟೇ ಅಲ್ಲ, ಸುಮಾರು ಶೇ.39ರಷ್ಟು ಅರ್ಹ ಫಲಾನುಭವಿಗಳಿಗೆ ಮಾಸಾಶನವನ್ನ 2 ವರ್ಷಕ್ಕೂ ಹೆಚ್ಚು ಅವಧಿಯವರೆಗೆ ವಿತರಿಸದೆ ಬಾಕಿ ಉಳಿಸಿಕೊಳ್ಳಲಾಗಿದೆ ಅಂತ ಸಿಎಜಿ ವರದಿ ಬಹಿರಂಗಪಡಿಸಿದೆ.