ಅಕ್ಷಯ್ ಕುಮಾರ್, ಮುಖ್ಯ ಸಂಪಾದಕರು, ಪ್ರತಿಕ್ಷಣ ನ್ಯೂಸ್
ಮಹಾರಾಷ್ಟ್ರದಲ್ಲಿ ಶಿವಸೇನೆಯ ಶಾಸಕರು ಅವರದ್ದೇ ಪಕ್ಷ ಭಾಗಿ ಆಗಿರುವ ಮೈತ್ರಿಕೂಟ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದಾರೆ. ತಮ್ಮದೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಸಿಡಿದೆದಿದ್ದಾರೆ. ಹೀಗೆ ಬಂಡಾಯವೆದ್ದು ಗುಜರಾತ್ ರಾಜ್ಯದ ಸೂರತ್ ಮತ್ತು ಪ್ರವಾಹ ಪೀಡಿತ ಅಸ್ಸಾಂ ರಾಜ್ಯದ ರಾಜಧಾನಿ ಗುವಾಹಟಿಯ ಐಷಾರಾಮಿ ರೆಸಾರ್ಟ್ ನಲ್ಲಿ ಠಿಕಾಣಿ ಹೂಡಿರುವ ಶಿವಸೇನೆಯ ಅತೃಪ್ತ ಸೈನಿಕರ ಮುಂದಿನ ರಾಜಕೀಯ ಭವಿಷ್ಯ ಕಾನೂನಾತ್ಮಕವಾಗಿ ಏನಿರಬಹುದು ಎನ್ನುವುದೇ ಕುತೂಹಲ.
ಒಟ್ಟು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆಯ ಒಟ್ಟು ಶಾಸಕರ ಸಂಖ್ಯೆ 55. ಇದುವರೆಗೂ ಮಾಡಲಾಗುತ್ತಿರುವ ವಾದ ಏನೆಂದರೆ ಎರಡನೇ ಮೂರರಷ್ಟು ಅಂದರೆ 55 ಶಾಸಕರಲ್ಲಿ 37 ಶಾಸಕರು ಪಕ್ಷದಿಂದ ಹೊರಬಂದು ತಮ್ಮದೇ ಪಕ್ಷ ಕಟ್ಟಿಕೊಂಡರೆ ಆಗ ಅಂತಹ ಶಾಸಕರು ಅನರ್ಹತೆಯ ಬ್ರಹ್ಮಾಸ್ತ್ರದಿಂದ ಪಾರಾಗಬಲ್ಲರು ಎನ್ನವುದು.
ಆದರೆ ನಿಜಕ್ಕೂ ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಇಂತಹ ರಕ್ಷಣೆಗೆ ಅವಕಾಶ ಇದೆಯೇ..?
1)ಪಕ್ಷ ವಿಲೀನವಾದರೆ ಅನರ್ಹತೆ ಇಲ್ಲ, ಆದರೆ..!
ಭಾರತ ಸಂವಿಧಾನದ 10ನೇ ಪರಿಚ್ಛೇಧದಲ್ಲಿ ಪಕ್ಷಾಂತರ ನಿಷೇಧದ ಬಗ್ಗೆ ಉಲ್ಲೇಖವಿದೆ. ಈ ಪರಿಚ್ಛೇಧದ 4ನೇ ಪ್ಯಾರಾದಲ್ಲಿ `ಒಂದು ವೇಳೆ ವಿಲೀನಗೊಂಡರೆ ಆಗ ಪಕ್ಷಾಂತರ ಕಾರಣಕ್ಕಾಗಿ ಅನರ್ಹತೆ ಅನ್ವಯಿಸುವುದಿಲ್ಲ’ ಎಂದು ಉಪ ಶೀರ್ಷಿಕೆಯಲ್ಲಿ ಹೇಳಲಾಗಿದೆ.
ಒಂದು ವೇಳೆ ವಿಲೀನಗೊಂಡರೆ ಆಗ ಪಕ್ಷಾಂತರದಡಿಯಲ್ಲಿ ಅನರ್ಹತೆ ಅನ್ವಯಿಸಲ್ಲ:
ಒಂದು ವೇಳೆ ಆತನ ಮೂಲ ಪಕ್ಷ ಇನ್ನೊಂದು ಪಕ್ಷದೊಂದಿಗೆ ವಿಲೀನಗೊಂಡರೆ ಮತ್ತು ಆತ ಅಥವಾ ಮೂಲ ಪಕ್ಷದ ಇತರೆ ಸದಸ್ಯರು ಘೋಷಿಸಿಕೊಂಡಲ್ಲಿ ಶಾಸನ ಸಭೆಯ ಸದಸ್ಯನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ.
ಎ) ಬೇರೆ ಪಕ್ಷದ ಸದಸ್ಯರಾದರೆ ಅಥವಾ ಅಂತಹ ವಿಲೀನದಿಂದ ಹೊಸ ಪಕ್ಷ ರಚಿಸಿಕೊಂಡರೆ – ಆದರೆ ಇದಕ್ಕೆ ಮೂಲ ಪಕ್ಷದ ಶಾಸಕಾಂಗ ಪಕ್ಷದ ಶಾಸಕರ ಪೈಕಿ ಮೂರನೇ ಎರಡರಷ್ಟು ಶಾಸಕರ ಒಪ್ಪಿಗೆ ಅನಿವಾರ್ಯ.
2) ಒಂದು ವೇಳೆ ಮೂಲ ಪಕ್ಷದ ಗುಂಪು ಈ ವಿಲೀನವನ್ನು ಒಪ್ಪಿಕೊಳ್ಳದೇ ಪ್ರತ್ಯೇಕವಾಗಿ ಉಳಿದರೆ ಆಗ ಆ ಗುಂಪಿನಲ್ಲಿರುವ ಶಾಸನ ಸಭೆಯ ಸದಸ್ಯರನ್ನೂ ಅನರ್ಹಗೊಳಿಸುವಂತಿಲ್ಲ.
ಲೋಕಸಭೆಯ ಮಾಜಿ ಕಾರ್ಯದರ್ಶಿ ಪಿ ಡಿ ಟಿ ಆಚಾರ್ಯ ಅವರ ಪ್ರಕಾರ `ಅನರ್ಹತೆಯ ತೂಗುಗತ್ತಿಯಿಂದ ಪಾರಾಗಲು ಶಿವಸೇನೆಯ ಬಂಡಾಯ ಬಣ ಭಾರತೀಯ ಜನತಾ ಪಕ್ಷ (ಬಿಜೆಪಿ)ಯಲ್ಲಿ ವಿಲೀನ ಆಗುವುದೊಂದೇ ದಾರಿ’
ಆದರೆ ಸದ್ಯದ ಸ್ಥಿತಿಯಲ್ಲಿ ಈ 37 ಶಾಸಕರು ಒಟ್ಟಿಗೆ ಒಪ್ಪಿ ಮೂಲ ಪಕ್ಷ ಶಿವಸೇನೆಯನ್ನು ಬಿಟ್ಟು ಬಿಜೆಪಿಯೊಂದಿಗೆ ವಿಲೀನ ಆಗಬಲ್ಲರೇ ಎನ್ನುವುದೇ ಪ್ರಶ್ನೆ.
2003ರಲ್ಲಿ ತಿದ್ದುಪಡಿ:
ಪಕ್ಷಾಂತರ ನಿಷೇಧ ಕಾಯ್ದೆಗೆ 2003ರಲ್ಲಿ ತಿದ್ದುಪಡಿಯನ್ನು ತರಲಾಗುತ್ತದೆ. ಶಾಸಕಾಂಗ ಪಕ್ಷದ ಮೂರನೇ ಒಂದರಷ್ಟು ಸದಸ್ಯರು ಬೇರೆ ಪಕ್ಷದೊಂದಿಗೆ ವಿಲೀನಗೊಂಡರೆ ಅಥವಾ ಬೇರೆ ಪಕ್ಷ ರಚಿಸಿದರೆ ಅನರ್ಹರಾಗಲ್ಲ ಎಂಬ ವಿನಾಯಿತಿಯನ್ನು ಪರಿಷ್ಕರಿಸಿ ಅದನ್ನು ಶಾಸಕಾಂಗ ಪಕ್ಷದ ಎರಡನೇ ಮೂರರಷ್ಟು ಸದಸ್ಯರು ಬೇರೆ ಪಕ್ಷದೊಂದಿಗೆ ವಿಲೀನಗೊಂಡರೆ ಅಥವಾ ಹೊಸ ಪಕ್ಷ ರಚಿಸಿಕೊಂಡರೆ ಅನರ್ಹರಾಗಲ್ಲ ಎಂದು ತಿದ್ದುಪಡಿ ಮಾಡಲಾಗುತ್ತದೆ.
ಸರಳವಾಗಿ ಶಿವಸೇನೆಯ ಸದ್ಯದ ಬಿಕ್ಕಟ್ಟಿಗೆ ಹೋಲಿಸಿ ಹೇಳುವುದಾದರೆ 2003ರ ತಿದ್ದುಪಡಿಗೂ ಮೊದಲು ಶಿವಸೇನೆಯ 55 ಶಾಸಕರ ಪೈಕಿ 19 ಶಾಸಕರು ಬೇರೆ ಪಕ್ಷದೊಂದಿಗೆ ವಿಲೀನವಾಗಿದ್ದರೆ ಅಥವಾ ಬೇರೆ ಪಕ್ಷದೊಂದಿಗೆ ರಚಿಸಿಕೊಂಡಿದ್ದರೆ ಅನರ್ಹರಾಗುತ್ತಿರಲಿಲ್ಲ. ಆದರೆ ಈಗ ಅನರ್ಹತೆಯ ತೂಗುಗತ್ತಿಯಿಂದ ಪಾರಾಗಲು ಮೂರನೇ ಎರಡರಷ್ಟು ಅಂದರೆ 37 ಶಾಸಕರ ಒಪ್ಪಿಗೆ ಅನಿವಾರ್ಯ.
ಕಾನೂನು ಆಯೋಗದ ಆಕ್ಷೇಪ:
ಆದರೆ ಅನರ್ಹತೆಯಿಂದ ಪಾರಾಗಲು ನೀಡಲಾಗುತ್ತಿರುವ ಈ ವಿನಾಯಿತಿಯ ಬಗ್ಗೆ ಕಾನೂನು ಆಯೋಗವೇ ಆಕ್ಷೇಪ ವ್ಯಕ್ತಪಡಿಸಿತ್ತು. 1991ರಲ್ಲಿ ಸಲ್ಲಿಕೆ ಆದ ಕಾನೂನು ಆಯೋಗದ 173ನೇ ವರದಿಯಲ್ಲಿ `ಪಕ್ಷಾಂತರದಡಿ ಅನರ್ಹತೆಯಿಂದ ಪಾರಾಗಲು ನೀಡಲಾಗುತ್ತಿರುವ ಈ ಎರಡೂ ವಿನಾಯಿತಿಗಳನ್ನೂ ರದ್ದುಪಡಿಸಬೇಕು’ ಎಂದು ಶಿಫಾರಸ್ಸು ಮಾಡಿತ್ತು. ಆದರೆ 2003ರಲ್ಲಿ ವಾಜಪೇಯಿ ಸರ್ಕಾರ ತಿದ್ದುಪಡಿ ಮೂಲಕ ಅನರ್ಹತೆಗೆ 2/3ರ ಮಾನದಂಡದಡಿ ವಿನಾಯಿತಿ ನೀಡಿತು.
`10ನೇ ಪರಿಚ್ಛೇಧದ ಪರಿಚಯದ (ಪಕ್ಷಾಂತರ ನಿಷೇಧದ ಕುರಿತ ಪರಿಚ್ಛೇದ) ಬಳಿಕ ಈ ದೇಶದಲ್ಲಿನ ಅನುಭವಗಳು ತೃಪ್ತಿಕರವಾಗಿಲ್ಲ. ಈ ಪರಿಚ್ಛೇಧವನ್ನು ದುರ್ಬಳಕೆ ಮತ್ತು ಅನಪೇಕ್ಷಿತ ಪ್ರಕ್ರಿಯೆಗಳಿಗೆ ಬಳಸಿಕೊಳ್ಳಲಾಗಿದೆ. ಪಕ್ಷಾಂತರದಡಿ ಅನರ್ಹಗೊಳಿಸುವುದು ಸೂಕ್ತವಾಗಿದೆಯಾದರೂ `ವಿಭಜನೆ’ಗೆ ಸಂಬಂಧಿಸಿದ ನಿಯಮವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ 3 ಮತ್ತು 4ನೇ ಪ್ಯಾರಾದಲ್ಲಿ ಹೇಳಲಾಗಿರುವ ವಿನಾಯ್ತಿಗಳನ್ನು ರದ್ದುಪಡಿಸಬೇಕು. ಪಕ್ಷವೊಂದರ ಟಿಕೆಟ್ನಿಂದ ಆಯ್ಕೆ ಆದ ಆ ಶಾಸನ ಸಭೆಯ ಅವಧಿ ಮುಗಿಯುವರೆಗೂ ಆ ಪಕ್ಷದಲ್ಲೇ ಇರಬೇಕು ಎನ್ನುವುದೇ ಮೂಲ ಉದ್ದೇಶ’
ಎಂದು ಕಾನೂನು ಆಯೋಗ ಅಭಿಪ್ರಾಯಪಟ್ಟಿತ್ತು.
ಕಾನೂನು ಸಚಿವ ಅರುಣ್ ಜೇಟ್ಲಿ ಭಾಷಣ:
2003ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದವರು ಅರುಣ್ ಜೇಟ್ಲಿ. ಸಂಸತ್ತಿನ ತಿದ್ದುಪಡಿ ಮಸೂದೆ ಮಂಡನೆ ವೇಳೆ ಸಚಿವರಾಗಿದ್ದ ಜೇಟ್ಲಿ ಮಾಡಿದ ಭಾಷಣದ ತುಣುಕು:
`ಭಾರತದ ಸಂವಿಧಾನದ 10ನೇ ಪರಿಚ್ಛೇಧದಲ್ಲಿರುವ ಪಕ್ಷಾಂತರ ನಿಷೇಧ ಕಾನೂನು ಪಕ್ಷಾಂತರ ನಿಷೇಧ ತಡೆಯುವಲ್ಲಿ ನಿರೀಕ್ಷಿತ ಗುರಿಗಳನ್ನು ಈಡೇರಿಸದಿರುವ ಹಿನ್ನೆಲೆಯಲ್ಲಿ ಈ ಕಾನೂನು ಇನ್ನಷ್ಟು ಬಲಗೊಳಿಸಬೇಕು ಎಂದು ಕಾಲ-ಕಾಲಕ್ಕೆ ಹಲವು ಕಡೆಗಳಿಂದ ಬೇಡಿಕೆಗಳು ಬಂದಿವೆ. ವೈಯಕ್ತಿಕ ಪಕ್ಷಾಂತರವನ್ನು ಕಾನೂನುಬಾಹಿರ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಗುಂಪಾಗಿ ಪಕ್ಷಾಂತರ ಮಾಡುವ ಕಾರಣಕ್ಕಾಗಿ ಈ ಕಾನೂನನ್ನು ಟೀಕಿಸಲಾಗಿದೆ. ಹತ್ತನೇ ಪರಿಚ್ಛೇಧದ 3ನೇ ಪ್ಯಾರಾದಲ್ಲಿ ವಿಭಜನೆಯಾದಲ್ಲಿ ಅನರ್ಹತೆಯಿಂದ ನೀಡಲಾಗಿರುವ ವಿನಾಯ್ತಿಯಿಂದ ಸರ್ಕಾರಗಳು ಅಸ್ಥಿರಗೊಳಿಸುವ ಪರಿಣಾಮದ ಬಗ್ಗೆ ಕಟು ಟೀಕೆಗಳು ಬಂದಿವೆ.
ಚುನಾವಣಾ ಸುಧಾರಣೆಗಾಗಿರುವ ದಿನೇಶ್ ಗೋಸ್ವಾಮಿ ಅವರ ಸಮಿತಿ 1990ರ ಮೇನಲ್ಲಿ ಸಲ್ಲಿಸಿದ ವರದಿ, ಚುನಾವಣಾ ಕಾನೂನುಗಳ ಸುಧಾರಣೆ ಬಗ್ಗೆ 1999ರಲ್ಲಿ ಕಾನೂನು ಆಯೋಗದ 170ನೇ ವರದಿ ಮತ್ತು 2002ರ ಮಾರ್ಚ್ 31ರಂದು ಸಂವಿಧಾನದ ಕಾರ್ಯನಿರ್ವಹಣೆ ಕುರಿತ ಪರಿಶೀಲನೆಯ ರಾಷ್ಟ್ರೀಯ ಆಯೋಗ (ಎನ್ಸಿಆರ್ ಡಬ್ಲೂಸಿ) ನೀಡಿರುವ ವರದಿಯಲ್ಲಿ ವಿಭಜನೆಯಾದಲ್ಲಿ ಅನರ್ಹರಾಗಲ್ಲ ಎಂಬ ವಿನಾಯ್ತಿಯನ್ನು ರದ್ದುಗೊಳಿಸುವಂತೆ ಶಿಫಾರಸ್ಸು ಮಾಡಿವೆ. `ಪಕ್ಷಾಂತರಗೊಂಡವರನ್ನು ಮಂತ್ರಿ ಸೇರಿದಂತೆ ಅಥವಾ ಲಾಭದಾಯಕದವಾದ ಯಾವುದೇ ರಾಜಕೀಯ ಹುದ್ದೆ ಹೊಂದದಂತೆ ಶಾಸನ ಸಭೆಯ ಅವಧಿ ಮುಗಿಯುವರೆಗೂ ನಿಷೇಧ ಹೇರಬೇಕು ಎಂದೂ ಆಯೋಗ ಸಲಹೆ ನೀಡಿದೆ’
ಅನರ್ಹತೆಗೆ ಕಾರಣಗಳು:
10ನೇ ಪರಿಚ್ಛೇಧದ 2ನೇ ಪ್ಯಾರಾದಲ್ಲಿ ಅನರ್ಹತೆಗೆ ಎರಡು ಕಾರಣಗಳನ್ನು ನೀಡಲಾಗಿದೆ.
1) ಸ್ವಯಂಪ್ರೇರಿತವಾಗಿ ರಾಜಕೀಯ ಪಕ್ಷದ ಸದಸ್ಯತ್ವವನ್ನು ತ್ಯಜಿಸುವುದು.
2) ಪಕ್ಷದ ವಿಪ್ ಉಲ್ಲಂಘಿಸಿ ಮತದಾನ ಮಾಡುವುದು ಅಥವಾ ಮತದಾನದಿಂದ ದೂರ ಉಳಿಯುವುದು.
1994ರಲ್ಲಿ ರವಿನಾಯ್ಕ್- ಭಾರತದ ಒಕ್ಕೂಟ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್
`ಸ್ವಯಂಪ್ರೇರಿತವಾಗಿ ಸದಸ್ಯತ್ವ ತ್ಯಜಿಸುವುದು ಎಂದರೆ ಆ ಪಕ್ಷಕ್ಕೆ ಆತ ರಾಜೀನಾಮೆ ಪತ್ರವನ್ನು ಕೊಡಲೇಬೇಕೆಂದಲ್ಲ. ಆತನ ವರ್ತನೆಯಿಂದಲೂ ಆತ ಪಕ್ಷದ ಸದಸ್ಯತ್ವ ತ್ಯಜಿಸಿದ್ದಾನೆ ಎಂದು ಪರಿಭಾವಿಸಬಹುದು’ ಎಂದು ತೀರ್ಪು ನೀಡಿತ್ತು.
2007ರಲ್ಲಿ ರಾಜೇಂದ್ರ ಸಿಂಗ್ ರಾಣಾ-ಸ್ವಾಮಿ ಪ್ರಸಾದ್ ಮೌರ್ಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನ ಸಂವಿಧಾನಿಕ ಪೀಠ
`ವಿರೋಧ ಪಕ್ಷದ ನಾಯಕರನ್ನು ಸರ್ಕಾರಕ್ಕೆ ರಚನೆಗೆ ಆಹ್ವಾನಿಸಿ ಎಂದು ರಾಜ್ಯಪಾಲರಿಗೆ ಪತ್ರ ನೀಡುವುದೂ ಮೂಲ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಕ್ಕೆ ಸಮನವಾಗಿದೆ. ಶಾಸನಸಭೆಯ ಹೊರಗೆ ಸದಸ್ಯರ ವರ್ತನೆಯನ್ನು ಅವರು ಪಕ್ಷದ ಸದಸ್ಯತ್ವವನ್ನು ತ್ಯಜಿಸಿದ್ದಾರೆಯೇ ಎಂದು ತೀರ್ಮಾನಿಸಲು ಪರಿಗಣಿಸಬಹುದು’ ಎಂದು ಹೇಳಿತ್ತು.
ಏಕನಾಥ್ ಶಿಂಧೆ ಬಣದಲ್ಲಿರುವ ಶಿಂಧೆ ಸೇರಿದಂತೆ 16 ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ವಿಧಾನಸಭೆ ಉಪಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಆಧರಿಸಿ ಉಪ ಸ್ಪೀಕರ್ 16 ಶಾಸಕರಿಗೆ ಉತ್ತರಿಸುವಂತೆ ನೋಟಿಸ್ ನೀಡಿದ್ದಾರೆ.
ಇತ್ತ ಸುಪ್ರೀಂಕೋರ್ಟ್ ನಲ್ಲಿ ಕಾನೂನು ಸಮರಕ್ಕೆ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಸಜ್ಜಾಗಿದೆ.