ಬಿಸಿ ರೋಡ್ – ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಹಂಚನಕಟ್ಟೆ ಎಂಬಲ್ಲಿ 6 ಜನ ಪ್ರಯಾಣಿಕರಿದ್ದ ಕಾರು ಬುಧವಾರ ಆಳವಾದ ಕಂದಕಕ್ಕೆ ಬಿದ್ದಿದೆ.
ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ವಿಭಾಗದ ವಗ್ಗಾ ಕಣಿವೆಯಲ್ಲಿ ಕಾರು ಪ್ರಪಾತಕ್ಕೆ ಉರುಳಿದೆ. ಈ ಘಟನೆಯಲ್ಲಿ ಪವಾಡಸದೃಶ್ಯವಾಗಿ ಪ್ರಯಾಣಿಕರು ಬದುಕುಳಿದಿದ್ದಾರೆ. ಬೆಳ್ತಂಗಡಿ ತಾಲೂಕಿನ ಜೆರಿಗೆಬೈಲು ಗ್ರಾಮದ ವಾಹನ ಚಾಲಕ ಸಹಿಕ್, ಪ್ರಯಾಣಿಕರಾದ ಶಾಹಿನಾ, ಫಯಾಜ್, ಸೌದ ಮತ್ತು 6 ತಿಂಗಳ ಮಗು ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ.
ಎಲ್ಲರನ್ನೂ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಾರೋಗ್ಯದಿಂದ ಮಂಗಳೂರಿನಲ್ಲಿ ಈ ಕುಟುಂಬದ ಸಂಬಂಧಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ವಿಚಾರಣೆ ವಾಪಾಸು ಬರುವ ವೇಳೆ ಈ ದುರ್ಘಟನೆ ನಡೆದಿದೆ.
ಕರಾವಳಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಮಣ್ಣು ಕುಸಿದಿದ್ದು, ಜಾರುವ ರಸ್ತೆಯಿಂದಾಗಿ ಈ ದುರ್ಘಟನೆ ಸಂಭವಿಸಿರಬೇಕು ಎಂದು ಹೇಳಲಾಗುತ್ತಿದೆ.
ಮೆಲ್ಕರ್ ಟ್ರಾಫಿಕ್ ಠಾಣೆಯ ಎಸ್ಐ ಮೂರ್ತಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.