ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥರೇ ತನಿಖೆಗೆ ಆದೇಶಿಸಿದ ನಂತರ ಸುಲಿಗೆ ಪ್ರಕರಣದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸೋದರ ಸಂಬಂಧಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ವೈಎಸ್ಆರ್ ಕಾಂಗ್ರೆಸ್ ನಾಯಕ, ವೈಎಸ್ ಕೊಂಡ ರೆಡ್ಡಿ ಅವರು ಕಡಪ ಜಿಲ್ಲೆಯಲ್ಲಿ ನಿರ್ಮಾಣ ಸಂಸ್ಥೆಯ ಮಾಲೀಕರಿಗೆ ಟೆಂಡರ್ ನೀಡಲು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನಿರ್ಮಾಣ ಕಂಪನಿಯು ಕರ್ನಾಟಕದ ಪ್ರಬಲ ಬಿಜೆಪಿ ನಾಯಕರಿಗೆ ಸೇರಿದ್ದು, ಮುಖ್ಯಮಂತ್ರಿಯವರ ಪುಲಿವೆಂದುಲ ಕ್ಷೇತ್ರದಲ್ಲಿ ಕಡಪದಲ್ಲಿ ಪಲ್ಲಿ-ರಾಯಚೋಟಿ ರಸ್ತೆಯ ಅಭಿವೃದ್ಧಿಯಲ್ಲಿ ತೊಡಗಿತ್ತು.
ಈ ಬಂಧನವು ದೇಶದ ರಾಜಕಾರಣಿಯೊಬ್ಬರು ತಮ್ಮ ಕುಟುಂಬದ ವಿರುದ್ಧ ಕ್ರಮಕ್ಕೆ ಆದೇಶಿಸಿದ ಅಪರೂಪದ ನಿದರ್ಶನಗಳಲ್ಲಿ ಒಂದಾಗಿದೆ.ಯಾರನ್ನೂ ಬಿಡಬಾರದು ಎಂದು ಜಗನ್ ರೆಡ್ಡಿ ಸುಲಿಗೆ ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದರು.
ಈ ಆದೇಶದ ಮೇರೆಗೆ ಚಕ್ರಾಯಪೇಟೆ ಪೊಲೀಸರು ಕೊಂಡ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.ಕೊಂಡ ರೆಡ್ಡಿ ಅವರ ಕರೆ ಡೇಟಾದಿಂದ ಅವರು ಇತ್ತೀಚಿನ ದಿನಗಳಲ್ಲಿ ನಿರ್ಮಾಣ ಕಂಪನಿ ಪ್ರತಿನಿಧಿಗಳಿಗೆ ಅನೇಕ ಕರೆಗಳನ್ನು ಮಾಡಿರೋದು ಬಯಲಾಗಿದೆ.
ಕಡಪಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಕೆ.ಅನ್ಬುರಾಜನ್ ಸುದ್ದಿಗಾರರೊಂದಿಗೆ ಮಾತನಾಡಿ, ಕೊಂಡ ರೆಡ್ಡಿ ಅವರು ಮೇ 5 ರಂದು ರಸ್ತೆ ಕಾಮಗಾರಿ ಗುತ್ತಿಗೆದಾರರಿಗೆ ಕರೆ ಮಾಡಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಡದಿದ್ದರೆ ಸರ್ಕಾರದಲ್ಲಿರುವ ತನ್ನ ವರ್ಚಸ್ಸು ಬಳಸಿ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದರು.
ನಾವು ಕೊಂಡಾರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಅದರಂತೆ, ಸೋಮವಾರ ಅವರನ್ನು ಬಂಧಿಸಲಾಯಿತು ಎಂದು ಎಸ್ ಪಿ ಅನ್ಬುರಾಜನ್ ಹೇಳಿದರು.ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.