250 ಚೀನಿ ಪ್ರಜೆಗಳಿಗೆ ವೀಸಾ ಮಂಜೂರು ಮಾಡಲು 50 ಲಕ್ಷ ರೂಪಾಯಿ ಲಂಚ ಪಡೆದಿದ್ದರು ಎಂಬ ಆರೋಪದ ಮೇರೆಗೆ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ.
ದೆಹಲಿಯಲ್ಲಿರುವ ಕಾರ್ತಿ ಚಿದಂಬರಂ ನಿವಾಸ, ಚೆನ್ನೈನಲ್ಲಿರುವ ನಿವಾಸ ಹಾಗೂ ಆಪ್ತರ ಮನೆಗಳು ಒಳಗೊಂಡಂತೆ ಮುಂಬೈ, ಒಡಿಶಾದಲ್ಲಿ ಸಿಬಿಐ ಶೋಧ ನಡೆಸಿದೆ.
2010-14ರ ಅವಧಿಯಲ್ಲಿ ಪಂಜಾಬ್ನಲ್ಲಿರುವ ವಿದ್ಯುತ್ ಯೋಜನೆ ಸ್ಥಳಕ್ಕೆ ಚೀನಿ ಪ್ರಜೆಗಳ ಭೇಟಿಗೆ ವೀಸಾ ಮಂಜೂರು ಮಾಡುವ ಸಲುವಾಗಿ ಕಾರ್ತಿ ಚಿದಂಬರಂ ಅವರಿಗೆ 50 ಲಕ್ಷ ರೂಪಾಯಿ ಲಂಚ ನೀಡಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.
ಬೆಳಗ್ಗೆ 7.30ಕ್ಕೆ ದೆಹಲಿಯಲ್ಲಿರುವ ಕಾರ್ತಿ ಮನೆಯಲ್ಲಿ ಶೋಧ ನಡೆಸಿದ ಸಿಬಿಐ ಕೆಲವೊಂದು ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗಿದೆ. ಆದರೆ ಈ ವೇಳೆ ಕಾರ್ತಿ ಮನೆಯಲ್ಲಿ ಇರಲಿಲ್ಲ.
ಈಗಾಗಲೇ ಐಎನ್ಎಕ್ಸ್ ಮೀಡಿಯಾದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಾಗಿರುವ ಅಕ್ರಮದ ಬಗ್ಗೆ ಸಿಬಿಐ ಚಿದಂಬರಂ ಮತ್ತು ಕಾರ್ತಿ ಚಿದಂಬರಂ ವಿರುದ್ಧ ತನಿಖೆ ನಡೆಸುತ್ತಿದ್ದು, ಈ ವೇಳೆ ವೀಸಾ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ ಎಂದು ವರದಿ ಆಗಿದೆ.
ಐಎನ್ಎಕ್ಸ್ ಮೀಡಿಯಾ ಅಕ್ರಮ ಪ್ರಕರಣದಲ್ಲಿ 2018ರಲ್ಲಿ ಸಿಬಿಐ ಕಾರ್ತಿ ಅವರನ್ನು ಬಂಧಿಸಿತ್ತು. ಒಂದು ತಿಂಗಳ ಬಳಿಕ ಅವರಿಗೆ ಜಾಮೀನು ಮಂಜೂರಾಗಿತ್ತು.