ಆಸ್ಪತ್ರೆಗಳಲ್ಲಿ ಸುಖಾಸುಮ್ಮನೆ ರೋಗಿಗಳನ್ನು ಐಸಿಯುಗೆ ದಾಖಲಿಸುತ್ತಿರುವುದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಹೊಸ ನಿಯಮವೊಂದರನ್ನು ರೂಪಿಸಿದೆ.
ರೋಗಿಯ ಆರೋಗ್ಯ ಸ್ಥಿತಿ ಮತ್ತು ಅಗತ್ಯತೆಯನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲು ಆಸ್ಪತ್ರೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿರುವ ಕೇಂದ್ರ ಸರ್ಕಾರ, ಪರಿಣಿತಿ ಹೊಂದಿರುವ 24 ಉನ್ನತ ವೈದ್ಯರ ಸಲಹಾ ಸಮಿತಿಯ ಸಲಹೆ ಪಡೆದಿದೆ.
ಯಾವ ಸ್ಥಿತಿಯಲ್ಲಿರುವ ರೋಗಿಯನ್ನು ಯಾವ ಪರಿಸ್ಥಿತಿಯಲ್ಲಿ ಐಸಿಯುಗೆ ದಾಖಲಿಸಬೇಕು, ಯಾವ ರೋಗಿಗೆ ಐಸಿಯು ಚಿಕಿತ್ಸೆ ಅಗತ್ಯವಿಲ್ಲ ಎಂಬುದಕ್ಕೆ ಸಮಿತಿ ಸ್ಪಷ್ಟನೆ ನೀಡಿದೆ. ಪ್ರಜ್ಞೆ ಕಳೆದುಕೊಂಡ ರೋಗಿ ಅಥವಾ ಕೃತಕ ಉಸಿರಾಟದ ನೆರವು ಅಗತ್ಯವಿರುವ ರೋಗಿಗಳು, ಮತ್ತು ತೀವ್ರ ಅನಾರೋಗ್ಯಕ್ಕೆ ತುತ್ತಾದ ರೋಗಿಗಳಿಗೆ ಐಸಿಯು ಆರೈಕೆಯನ್ನು ಶಿಫಾರಸು ಮಾಡಲಾಗಿದೆ.
ಇನ್ನು ಶಸ್ತ್ರ ಚಿಕಿತ್ಸೆ ನಂತರದಲ್ಲಿ ರೋಗಿಯ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗುವ ಸಾಧ್ಯತೆ ಇರುವುದರಿಂದ ಈ ಸಂದರ್ಭದಲ್ಲಿ ಅಂತಹ ರೋಗಿಗಳಿಗೆ ಐಸಿಯು ಶಿಫಾರಸು ಮಾಡಲಾಗುತ್ತೆ. ಇದರ ಹೊರತುಪಡಿಸಿ ಸುಖಾಸುಮ್ಮನೆ , ವಿನಾಃಕಾರಣ ಐಸಿಯುಗೆ ರೋಗಿಯನ್ನು ದಾಖಲು ಮಾಡಿಕೊಳ್ಳಬಾರದು ಎಂದು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ.
ನಿಜವಾಗಿಯೂ ತೀವ್ರ ನಿಗಾ ವಹಿಸಬೇಕಾದ ಅಗತ್ಯವಿರುವ ರೋಗಿಗಳು ಮಾತ್ರ ಐಸಿಯು ಪಡೆಯುವಂತಾಗಲಿ ಎನ್ನೋದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಇನ್ನು ಕೆಲ ಸಂದರ್ಭಗಳಲ್ಲಿ, ಅನಾವಶ್ಯಕವಾಗಿ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗೂ ರೋಗಿಯನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗ್ತಿದೆ. ಇದರಿಂದಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಐಸಿಯು ಬೆಡ್ ಸಿಗದೆ ಚಿಕಿತ್ಸೆಯಿಂದ ವಂಚಿತರಾಗುವ ಸ್ಥಿತಿ ಎದುರಾಗಲಿದೆ. ಈ ದೃಷ್ಟಿಯಿಂದಾಗಿ ಕೇಂದ್ರ ಈ ಐಸಿಯು ನಿಯಮ ರೂಪಿಸಿದೆ.
ಭಾರತದ ಆಸ್ಪತ್ರೆಗಳಲ್ಲಿ ಸುಮಾರು 1 ಲಕ್ಷ ಐಸಿಯು ಹಾಸಿಗೆಗಳಿದ್ದು, ಹಲವು ಸಂದರ್ಭಗಳಲ್ಲಿ ಅಗತ್ಯವಿರುವ ರೋಗಿಗಳಿಗೆ ಐಸಿಯು ಹಾಸಿಗೆಗಗಳು ಸಿಗದೆ ಪ್ರಾಣಾಪಾಯ ಉಂಟಾಗುತ್ತಿದೆ. ಜೊತೆಗೆ ಐಸಿಯು ಅಗತ್ಯತೆ ಇಲ್ಲದಿದ್ದ ರೋಗಿಗಳನ್ನೂ ಐಸಿಯುಗೆ ಶಿಫ್ಟ್ ಮಾಡಿ ಖಾಸಗಿ ಆಸ್ಪತ್ರೆಗಳು ಹೆಚ್ಚು ಬಿಲ್ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರಗಳು ಕೂಡ ಕೇಳಿಬಂದಿದ್ವು. ಐಸಿಯು ಚಿಕಿತ್ಸಾ ವೆಚ್ಚವು ಸಾಮಾನ್ಯ ಬೆಡ್ ಗಿಂತಲೂ 5ರಿಂದ 10 ಪಟ್ಟು ಹೆಚ್ಚಿದ್ದು, ಇದು ರೋಗಿ ಮತ್ತು ಅವರ ಕುಟುಂಬಸ್ಥರಿಗೆ ಹೊರೆಯಾಗುತ್ತಿದೆ.
ಈ ಎಲ್ಲಾ ಕಾರಣಗಳಿಂದಾಗಿ ತಜ್ಞರ ಸಮಿತಿಯ ಶಿಫಾರಸುಗಳಂತೆಯೇ ಆಸ್ಪತ್ರೆಗಳಿಗೆ ಈ ಮಾರ್ಗಸೂಚಿ ಹೊರಡಿಸಿದೆ.
ಈ ನಿಯಮಗಳನ್ನು ವೈದ್ಯರ ಮಾರ್ಗದರ್ಶನಕ್ಕಾಗಿ ಮಾತ್ರ, ಐಸಿಯು ದಾಖಲಾತಿ ಅಥವಾ ಡಿಸ್ಚಾರ್ಜ್ ಕುರಿತಾಗಿನ ನಿರ್ಧಾರವನ್ನ ರೋಗಿಗೆ ಚಿಕಿತ್ಸೆ ನೀಡುವ ವೈದ್ಯರ ವಿವೇಚನೆಗೆ ಬಿಡಲಾಗಿದೆ.