ರಾಮನವಮಿ ಯಾತ್ರೆ ವೇಳೆ ಸಂಚು ರೂಪಿಸಿ ಗಲಾಟೆ ನಡೆಯಲು ಕಾರಣವಾಗಿದೆ ಎನ್ನಲಾದ ಹಾಗೂ ಹಲವು ವಿವಾದಾತ್ಮಕ ವಿಷಯಗಳಲ್ಲಿಯೇ ಕಾಣಿಸಿಕೊಳ್ಳುವ ಪಿಎಫ್ಐ(ಪೀಪಲ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆಯನ್ನು ಶೀಘ್ರವೇ ಕೇಂದ್ರ ಸರ್ಕಾರ ನಿಷೇಧಿಸುವ ಸಾಧ್ಯತೆಯಿದೆ.
ಪಿಎಫ್ಐ ನಿಷೇಧದ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅಧಿಸೂಚನೆಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಮುಂದಿನ ವಾರದಲ್ಲಿಯೇ ಈ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಬಹುದು ಎಂದು ತಿಳಿದುಬಂದಿದೆ.
ಪಿಎಫ್ಐ ಮುಸ್ಲಿಂ ಸಂಘಟನೆಯಾಗಿದ್ದು ಈಗಾಗಲೇ ಹಲವು ರಾಜ್ಯಗಳಲ್ಲಿ ನಿಷೇಧಕ್ಕೊಳಗಾಗಿದೆ. ಆದರೆ, ಇದೀಗ ಕೇಂದ್ರ ಸರ್ಕಾರ ಈ ಸಂಘಟನೆಯನ್ನು ದೇಶಾದ್ಯಂತ ನಿಷೇಧಿಸಲು ಹೊರಟಿದೆ.
ಕಳೆದ ವಾರ ಗೋವಾ, ಗುಜರಾತ್, ರಾಜಸ್ಥಾನ್, ಮಧ್ಯಪ್ರದೇಶ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲಿ ರಾಮನವಮಿಯ ಶೋಭಾ ಯಾತ್ರೆಯ ವೇಳೆ ಕಲ್ಲು ತೂರಾಟ, ಗಲಾಟೆ ಹಾಗೂ ಹಿಂಸಾಚಾರದ ಪ್ರಕರಣಗಳು ವರದಿಯಾಗಿದ್ದವು. ಏಪ್ರೀಲ್ 14 ರಂದು ಮದ್ಯಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಶರ್ಮಾ ಅವರು ಶೋಭಾ ಯಾತ್ರೆಯ ವೇಳೆ ಕಲ್ಲು ತೂರಾಟ ಮಾಡಲು ಫಿಎಫ್ಐ ಸಂಘಟನೆಯಿಂದ ಧನಸಹಾಯ ಮಾಡಲಾಗಿದೆ. ಇದು ಪಿಎಫ್ಐನ ಸಂಚು ಎಂದು ಆರೋಪಿಸಿದ್ದರು.
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದ ಕರೌಲಿಯಲ್ಲಿ ಕಲ್ಲು ತೂರಾಟದ ಸ್ಥಳಕ್ಕೆ ಹೋಗುವುದನ್ನು ನಿಲ್ಲಿಸಿದ ಸಂಸದ ತೇಜಸ್ವಿ ಸೂರ್ಯ ಅವರು ಮಾತನಾಡಿ, ನಮ್ಮ ಕೈಯಲ್ಲಿ ಪಿಎಫ್ಐನಂತೆ ಶಸ್ತ್ರಾಸ್ತ್ರ ಅಥವಾ ಕಲ್ಲುಗಳು ಇರಲಿಲ್ಲ. ನಾವು ನ್ಯಾಯ ಯಾತ್ರೆಯನ್ನು ಕೈಗೊಳ್ಳಲು ಮತ್ತು ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸಲು ಬಯಸಿದ್ದೆವು. ಈ PFI ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದ್ದರು.
ಕೇಂದ್ರ ಸರ್ಕಾರ ಪಿಎಫ್ಐ ನಿಷೇಧ ಮಾಡಿದರೆ ನಾವು ನ್ಯಾಯಾಂಗದಲ್ಲಿ ಪ್ರಶ್ನಿಸುತ್ತೇವೆ ಎಂದು ಪಿಎಫ್ಐನ ಪ್ರಧಾನ ಕಾರ್ಯದರ್ಶಿ ಅನೀಶ್ ಅಹ್ಮದ್ ಹೇಳಿದ್ದಾರೆ.
2017 ರಲ್ಲಿ ರಾಷ್ಟ್ರೀಯ ವಿಚಾರಣಾ ದಳವು ಕೇಂದ್ರದ ಗೃಹ ಇಲಾಖೆಗೆ ಪಿಎಫ್ಐ ಸಂಘಟನೆಯು ಇಸ್ಲಾಮಿಕ್ ಉಗ್ರರೊಂದಿಗೆ ಸಂಪರ್ಕ ಹೊಂದಿದೆ ಎಂದು ವರದಿ ನೀಡಿತ್ತು. ಆ ಬಳಿಕ ದೇಶದಲ್ಲಿ ಪಿಎಫ್ಐ ಸಂಗಟನೆಯನ್ನು ನಿಷೇಧ ಮಾಡುವ ಬಗ್ಗೆ ಕೂಗು ಕೇಳಿಬರುತ್ತಿವೆ.
ಪಿಎಫ್ಐ ಸಂಘಟನೆಯು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಎನ್ನುವ ರಾಜಕೀಯ ಪಕ್ಷವನ್ನೂ ಹೊಂದಿದೆ. ಈ ಸಂಘಟನೆಯು ಬೆಂಗಳೂರು ಸ್ಪೋಟ ಪ್ರಕರಣ, ಕೇರಳದ ಪ್ರೊಪೆಸರ್ ಹತ್ಯೆ ಪ್ರಕರಣ ಹಾಗೂ ಕೇರಳ ಲವ್ ಜಿಹಾದ್ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ಎನ್ಐಎ ಕೇಂದ್ರಕ್ಕೆ ವರದಿ ನೀಡಿದೆ.
ರಾಜ್ಯದಲ್ಲಿಯೂ ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಲೇ ಬಂದಿವೆ. ರಾಜ್ಯದ ಕರಾವಳಿ ಭಾಗದಲ್ಲಿ ಇತ್ತೀಚೆಗಷ್ಟೇ ವಿಶ್ವ ಮಟ್ಟದಲ್ಲಿ ಸುದ್ದಿಯಾಗಿದ್ದ ಹಿಜಾಬ್ ವಿವಾದವನ್ನು ಈ ಸಂಘಟನೆಗಳೇ ಆರಂಭಿಸಿವೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿದ್ದವು.