ADVERTISEMENT
ಧಾರ್ಮಿಕ ಪೂಜಾ ಸ್ಥಳಗಳಿಗೆ ಸಂಬಂಧಿಸಿದಂತೆ ಹೊಸದಾಗಿ ಯಾವುದೇ ದಾವೆಗಳ ಸಂಬಂಧ ನ್ಯಾಯಾಲಯಗಳನ್ನು ವಿಚಾರಣೆಯನ್ನು ಆರಂಭಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ. ನ್ಯಾಯಾಲಯಗಳಿಗೆ ಹೊಸ ದಾವೆಗಳನ್ನು ಸಲ್ಲಿಸಬಹುದು, ಆದರೆ ಆ ಹೊಸ ದಾವೆಗಳನ್ನು ದಾಖಲಿಸಿಕೊಂಡು ವಿಚಾರಣೆಗಳನ್ನು ಆರಂಭಿಸುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ.
ಧಾರ್ಮಿಕ ಪೂಜಾ ಸ್ಥಳಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೊಕದ್ದಮೆಗಳ ಸಂಬಂಧ ಯಾವುದೇ ಹೊಸ ಆದೇಶ ಅಥವಾ ಅಂತಿಮ ತೀರ್ಪು ನೀಡುವಂತಿಲ್ಲ ಮತ್ತು ಧಾರ್ಮಿಕ ಸ್ಥಳಗಳ ಸಮೀಕ್ಷೆ ಸಂಬಂಧವೂ ಆದೇಶಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇವತ್ತು ತನ್ನ ಮಧ್ಯಂತರ ಆದೇಶದಲ್ಲಿ ನಿಬಂಧನೆಯನ್ನು ಹೇರಿದೆ. ಆದರೆ ಈ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವಿಚಾರಣೆಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿಲ್ಲ.
1991ರಲ್ಲಿ ಜಾರಿಯಾಗಿದ್ದ ಪೂಜಾ ಸ್ಥಳಗಳ ಕಾಯ್ದೆ ಸಂಬಂಧ ಇಂದಿನಿಂದ ಅಂದರೆ ಡಿಸೆಂಬರ್ 12ರಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಸಂಜಯ್ಕುಮಾರ್ ಮತ್ತು ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ನಡೀತು.
ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇನ್ನೂ ತನ್ನ ಉತ್ತರವನ್ನು ಸಲ್ಲಿಸಿಲ್ಲ. 4 ವಾರಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂಕೋರ್ಟ್, ಆ ಉತ್ತರದ ಪ್ರತಿಯನ್ನು ಅರ್ಜಿದಾರರಿಗೂ ನೀಡುವಂತೆ ಸೂಚಿಸಿದೆ.
ಆ ಪ್ರಮಾಣಪತ್ರವನ್ನು ವೆಬ್ಸೈಟ್ಗೆ ಅಪ್ಲೋಡ್ ಮಾಡಬಹುದು ಮತ್ತು ಅವುಗಳನ್ನು ಯಾರೂ ಬೇಕಾದರೂ ಡೌನ್ಲೋಡ್ ಮಾಡಿಕೊಳ್ಳಬಹುದು.
10 ಮಸೀದಿ ಮತ್ತು ದರ್ಗಾಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ 18 ಮೊಕದ್ದಮೆಗಳು ಬಾಕಿ ಇವೆ ಎಂದು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಲಾಯಿತು.
ಆಗಸ್ಟ್ 15, 1947ರವರೆಗೆ ಇದ್ದ ಧಾರ್ಮಿಕ ಪೂಜಾ ಸ್ಥಳಗಳ ಸ್ವರೂಪವನ್ನು ಬದಲಾವಣೆ ಮಾಡುವಂತಿಲ್ಲ ಎಂದು 1991ರ ಕಾಯ್ದೆಯ ಮೂಲಕ ಹೇರಲಾಗಿರುವ ನಿರ್ಬಂಧವನ್ನು ಪ್ರಶ್ನಿಸಿ ಅಶ್ವಿನಿ ಉಪಾಧ್ಯಾಯ ಅವರು 2020ರಲ್ಲಿ ಸುಪ್ರೀಂಕೋರ್ಟ್ನಲ್ಲಿ ದಾವೆ ಸಲ್ಲಿಸಿದ್ದರು. ಆ ದಾವೆ ಸಂಬಂಧ 2021ರಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತ್ತು.
ಈ ನಡುವೆ ಪೂಜಾ ಸ್ಥಳ ಕಾಯ್ದೆಯನ್ನು ಜಾರಿಗೊಳಿಸುವಂತೆ ಜಮೈತ್ ಉಲೇಮಾ ಇ ಹಿಂದ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಇದರ ನಡುವೆ ಸಿಪಿಐಎಂ, ಇಂಡಿಯನ್ ಮುಸ್ಲಿಂ ಲೀಗ್, ಡಿಎಂಕೆ, ಆರ್ಜೆಡಿ ಸಂಸದ ಮನೋಜ್ ಕುಮಾರ್ ಝಾ, ಎನ್ಸಿಪಿ ಶರದ್ ಪವಾರ್ ಬಣದ ಸಂಸದ ಜಿತೇಂದ್ರ ಅವಧ್ ಅವರು ಕಾಯ್ದೆಯನ್ನು ಜಾರಿಗೊಳಿಸುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ADVERTISEMENT