ಹುಣ್ಣಿಮೆಯ ಚಂದ್ರನ ಸೊಗಸನ್ನು ನೋಡುತ್ತಾ ಸಾವಿರಾರು ವರ್ಷಗಳಿಂದ ಮಾನವ ಸಂಕುಲ ಖುಷಿಪಡುತ್ತಿದೆ. ಎಷ್ಟೋ ಕತೆ, ಕಾವ್ಯಗಳಿಗೆ ಪ್ರೇರಣ ಶಕ್ತಿಯಾದ ಚಂದಮಾಮನ ರಾಜ್ಯವನ್ನು ಶೋಧಿಸಲು ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೆ ಇವೆ.
ಅಗ್ರದೇಶಗಳು ಚಕಚಕ ಎಂದು ಹೋಗಿ ಪತಾಕೆ ಹಾರಿಸಿ ಬಂದರೂ ಚಂದ್ರನ ಗುಟ್ಟನ್ನು ಪೂರ್ಣ ಪ್ರಮಾಣದಲ್ಲಿ ಬಿಚ್ಚಲು ಸಾಧ್ಯವಾಗಿಲ್ಲ. ಅಗ್ರದೇಶಗಳಿಗೆ ಹೋಲಿಸಿದಲ್ಲಿ ಭಾರತ ತಡವಾಗಿ ಚಂದ್ರನ ಅಧ್ಯಯನ ಆರಂಭಿಸಿದರೂ, ಚಂದ್ರಯಾನ್-1 ರೂಪದಲ್ಲಿ ಕೈಗೊಂಡ ಮೊದಲ ಪ್ರಯತ್ನದಲ್ಲಿಯೇ ಅದ್ಭುತವಾದ ಸುದ್ದಿಯನ್ನು ಜಗತ್ತಿಗೆ ನೀಡಿತ್ತು. ಚಂದಮಾಮನ ಅಂಗಳದಲ್ಲಿ ನೀರಿದೆ ಎಂಬ ಸತ್ಯವನ್ನು ಅನಾವರಣ ಮಾಡಿ ವಿಶ್ವ ಸಂಶೋಧನಾ ಕ್ಷೇತ್ರಕ್ಕೆ ಹೊಸ ಶ್ವಾಸವನ್ನು ತುಂಬಿತ್ತು.
ಮತ್ತೆ ಈಗ ಚಂದ್ರಯಾನ-3ರ ರೂಪದಲ್ಲಿ ಚಂದ್ರನ ಮೇಲೆ ಯಾರು ಹೋಗದ ಜಾಗಕ್ಕೆ, ಯಾರು ನೋಡದ ದಕ್ಷಿಣ ದಾರಿಯನ್ನು ಹುಡುಕಿ ಹೊರಟಿದೆ. ಅಲ್ಲಿನ ರಹಸ್ಯಗಳನ್ನು ಬೇಧಿಸಲು ಮುಂದಾಗಿದೆ.
ನಾಳೆಯೇ ಉಡಾವಣೆ
ಶುಭ ಶುಕ್ರವಾರವಾದ ನಾಳೆ ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಭಾರತದ ವ್ಯೋಮನೌಕೆ ನಭಕ್ಕೆ ಹಾರಲಿದೆ. ಬಾಹುಬಲಿ ರಾಕೆಟ್ ಎಂದೇ ಹೆಸರಾದ ಎಲ್ವಿಎಂ3-ಎಂ4 ಇದನ್ನು ಹೊತ್ತೊಯ್ಯಲಿದೆ.
4 ವರ್ಷಗಳ ಹಿಂದೆ ಚಂದ್ರಯಾನ್-2 ಪ್ರಯೋಗಿಸಿ ಚಂದ್ರನ ಅಂಗಳದಲ್ಲಿ ಲ್ಯಾಂಡಿಂಗ್ ವೇಳೆ ಉಂಟಾದ ವೈಫಲ್ಯದಿಂದ ಪಾಠ ಕಲಿತ ಇಸ್ರೋ ಇದೀಗ ದುಪ್ಪಟ್ಟು ಉತ್ಸಾಹದೊಂದಿಗೆ ಚಂದ್ರಯಾನ್-3 ಪ್ರಯೋಗಕ್ಕೆ ಸಜ್ಜಾಗಿದೆ.
ಚಂದ್ರಯಾನ್ 3 ಪ್ರಯೋಗ
ಯಾವಾಗ ಉಡಾವಣೆ – ಜುಲೈ 14 ಮಧ್ಯಾಹ್ನ 2.35ಕ್ಕೆ ಉಡಾವಣೆ
ಚಂದ್ರನ ಅಂಗಳದಲ್ಲಿ ಇಳಿಯುವ ದಿನ – ಆಗಸ್ಟ್ 23 ಇಲ್ಲವೇ 24
ಪ್ರಯಾಣದ ಅವಧಿ – 40 ದಿನ
ಎಲ್ಲಿಗೆ ಪಯಣ – ಚಂದಿರನ ದಕ್ಷಿಣ ಧ್ರುವ
ಚಂದ್ರಯಾನ್-3 ಗಗನನೌಕೆಯ ಒಟ್ಟು ತೂಕ – 3900 ಕೆಜಿ
ಈ ಯೋಜನೆಗೆ ಆಗುತ್ತಿರುವ ಒಟ್ಟು ವೆಚ್ಚ – 613 ಕೋಟಿ
ಹಾಲಿವುಡ್ನಲ್ಲಿ ಅಂತರಿಕ್ಷದ ಕತೆ ಆಧಾರಿತ ಸಿನಿಮಾಗಳಿಗೆ ಇದಕ್ಕಿಂತ ಹೆಚ್ಚು ಹಣ ಖರ್ಚು ಮಾಡಲಾಗುತ್ತದೆ.
ಚಂದ್ರಯಾನ್-3ರಲ್ಲಿ ಏನಿರುತ್ತದೆ?
– ಎಲ್ವಿಎಂ3-ಎಂ4 ರಾಕೆಟ್ನಿಂದ ಬೇರ್ಪಡುವ ಚಂದ್ರಯಾನ್3 ಗಗನನೌಕೆಯನ್ನು ಭೂಕಕ್ಷೆಯಿಂದ ಚಂದ್ರನ ಕಕ್ಷೆಗೆ ಕರೆದೊಯ್ಯುವ ಪ್ರೊಪಲ್ಷನ್ ಮಾಡ್ಯೂಲ್
– ಚಂದ್ರನ ಅಂಗಳದ ಮೇಲೆ ಇಳಿದು ಸಂಶೋಧನೆ ನಡೆಸುವ ವಿಕ್ರಮ್ ಲ್ಯಾಂಡರ್
– ಚಂದ್ರನ ಅಂಗಳದಲ್ಲಿ ಓಡಾಡುತ್ತಾ ಅಲ್ಲಿನ ರಹಸ್ಯವನ್ನು ಹೆಕ್ಕುವ ಪ್ರಗ್ಯಾನ್ ರೋವರ್
ADVERTISEMENT
ಚಂದಿರನ ದಕ್ಷಿಣ ಧ್ರುವದ ಬೇಟೆ
ಈವರೆಗೂ ಅಮೆರಿಕಾ, ಸೋವಿಯತ್ ಯೂನಿಯನ್ ಮತ್ತು ಚೀನಾ ಮಾತ್ರ ಚಂದ್ರನ ಮೇಲೆ ಲ್ಯಾಂಡರ್ಗನ್ನು ಸುರಕ್ಷಿತವಾಗಿ ಇಳಿಸಿವೆ. ಈ ದೇಶಗಳು ನಮಗಿಂತ ಮೊದಲು ಚಂದಿರನನ್ನು ಸೇರಿಕೊಂಡರೂ, ಅಮೆರಿಕಾ ಮಾನವರನ್ನೇ ಚಂದ್ರನ ಅಂಗಳಕ್ಕೆ ಇಳಿಸಿದರೂ ಈಗ ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ಪ್ರತ್ಯೇಕತೆ ಎಂಬುದಿದೆ. ಅದೇ ಚಂದಿರನ ದಕ್ಷಿಣ ಧ್ರುವದ ಬೇಟೆ.
ದಕ್ಷಿಣ ಧ್ರುವವೇ ಏಕೆ?
ಈವರೆಗೂ ಚಂದ್ರನ ಅಂಗಳಕ್ಕೆ ಹೋದ ವ್ಯೋಮನೌಕೆಗಳಲ್ಲಿ ಅತ್ಯಧಿಕ ಅಲ್ಲಿನ ಮಧ್ಯರೇಖೆ ಪ್ರಾಂತ್ಯದಲ್ಲಿಯೇ ಲ್ಯಾಂಡ್ ಆಗಿವೆ. ಭಾರತ ಮಾತ್ರ ಚಂದ್ರಯಾನ್-3 ಮೂಲಕ ಈವರೆಗೂ ಬೆಳಕಿಗೆ ಬಾರದ ದಕ್ಷಿಣ ಧ್ರುವದ ಹತ್ತಿರವಿರುವ 70 ಡಿಗ್ರಿ ಅಕ್ಷಾಂಶದ ಬಳಿಯ ಪ್ರಾಂತ್ಯವನ್ನು ಸೇರಲು ಬಯಸಿದೆ.
ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲು ಬಲವಾದ ಕಾರಣಗಳೇ ಇವೆ. ವಿಶ್ವ ಉಗಮದ ರಹಸ್ಯದ ಬಗ್ಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಭವಿಷ್ಯದಲ್ಲಿ ಚಂದ್ರನನ್ನು ಆವಾಸ ಮಾಡಿಕೊಳ್ಳುವ ಆಸೆಗೆ ಬಾಗಿಲುಗಳು ತೆರೆದುಕೊಳ್ಳಲು ಈ ಮೂನ್ ಮಿಷನ್ ಸಹಕಾರಿಯಾಗಬಹುದು ಎಂದು ಹೇಳಲಾಗುತ್ತಿದೆ.
ವಿಶ್ವ ರಹಸ್ಯ
ಚಂದಿರನ ದಕ್ಷಿಣ ಧ್ರುವ ಪ್ರಾಂತ್ಯದ ಭೌತಿಕ ಪರಿಸ್ಥಿತಿಗಳು ಹಲವು ವಿಶೇಷತೆಗಳಿಂದ ಕೂಡಿದೆ. ಚಂದ್ರನ ಉತ್ತರ ಧ್ರುವಕ್ಕೆ ಹೋಲಿಸಿದಲ್ಲಿ ದಕ್ಷಿಣ ಧ್ರುವದ ಕೆಲ ಪ್ರಾಂತ್ಯಗಳು ಶಾಶ್ವತವಾಗಿ ಕತ್ತಲಲ್ಲಿವೆ.
ನೂರಾರು ಕೋಟಿ ವರ್ಷಗಳಿಂದ ಈ ಪ್ರಾಂತ್ಯಕ್ಕೆ ಸೂರ್ಯನ ಕಿರಣಗಳು ಸ್ಪರ್ಷಿಸಿಯೇ ಇಲ್ಲ. ಅಲ್ಲಿನ ವಾತಾವರಣ ಸೌರ ರೇಡಿಯೋಧಾರ್ಮಿಕತೆ ಕಾರಣದಿಂದ ಆಗುವ ಬದಲಾವಣೆಗೆ ಈಡಾಗಿರಲ್ಲ.
ಇವುಗಳನ್ನು ಅಧ್ಯಯನ ಮಾಡಿದಲ್ಲಿ ವಿಶ್ವದ ಉಗಮಕ್ಕೆ ಸಂಬಂಧಿಸಿದ ಅನೇಗ ನಿಗೂಢ ರಹಸ್ಯಗಳು ತಿಳಿದುಬರುವ ಸಂಭವ ಇದೆ. ಅಲ್ಲಿನ ಪುರಾತನ ಶಿಲೆಗಳನ್ನು ಅಭ್ಯಸಿಸುವ ಮೂಲಕ ವಿಶ್ವದ ಆವಿರ್ಭಾವ. ಆರಂಭದ ದಿನಗಳ ಸೌರ ಕುಟುಂಬದ ಚರಿತ್ರೆಯ ಬಗ್ಗೆ ಹೊಸ ವಿಚಾರಗಳನ್ನು ತಿಳಿದುಕೊಳ್ಳಬಹುದು.
ಕಪ್ಪುಕುಳಿಯಲ್ಲಿ
ದಕ್ಷಿಣ ಧ್ರುವದಲ್ಲಿ ಇರುವ ಕಪ್ಪು/ಕತ್ತಲ ಕುಳಿಯಲ್ಲಿ ಉಷ್ಣಾಂಶ ಮೈನಸ್ 248 ಡಿಗ್ರಿ ಸೆಲ್ಶಿಯಸ್ ಇರುತ್ತೆ. ಈ ಮಟ್ಟದ ಶೀತ ಉಷ್ಣಾಂಶದಿಂದ ಕತ್ತಲ ಕುಳಿಗಳು ಕೋಲ್ಡ್ ಟ್ರಾಪ್ಸ್ ಆಗಿ ಬದಲಾಗಿರುತ್ತವೆ.
ಅಂದರೆ, ಕತ್ತಲಕುಳಿಯಲ್ಲಿ ನೀರು ಘನರೂಪದಲ್ಲಿ/ಹಿಮರೂಪದಲ್ಲಿ ಸ್ಥಿರವಾಗಿರುವ ಸಾಧ್ಯತೆಗಳಿವೆ. ಕೆಲ ಕುಳಿಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹಿಮದ ಸಂಗ್ರಹ ಇರಬಹುದು ಎಂದು ಅಂದಾಜಿಸಲಾಗಿದೆ.
ಅಲ್ಲಿ ನೀರು ಇರುವ ಕಾರಣ ಜೀವಜಾಲ ಇರುವ ಸಾಧ್ಯತೆಗಳನ್ನು ಚಂದ್ರಯಾನ್-3 ಮೂಲಕ ಅನ್ವೇಷಿಸಲಾಗುತ್ತದೆ.
ಭವಿಷ್ಯದಲ್ಲಿ ಕೈಗೊಳ್ಳುವ ಮಾನವಸಹಿತ, ರೋಬೊಟಿಕ್ ಯಾತ್ರೆಗಳಿಗೆ ಈ ಡೇಟಾ ಅನುಕೂಲ ಮಾಡಿಕೊಡಲಿದೆ ಎಂದು ಪರಿಣಿತರು ಹೇಳುತ್ತಿದ್ದಾರೆ.
ಚಂದ್ರನ ಮೇಲೆ ಏಕೆ?ಮನುಕುಲಕ್ಕೆ ಏನು ಲಾಭ?
– ಭವಿಷ್ಯದಲ್ಲಿ ಚಂದ್ರನ ಅಂಗಳವನ್ನು ಆವಾಸ ತಾಣವಾಗಿಸಿಕೊಳ್ಳುವ ಗುರಿ
– ಭೂಮಿಗೆ ಹೋಲಿಸಿದಲ್ಲಿ ಚಂದ್ರನ ಗುರುತ್ವಾಕರ್ಷಣ ಶಕ್ತಿ ಆರನೇ ಒಂದರಷ್ಟಿರುತ್ತದೆ.
– ಗಾಳಿ ಕೂಡ ಇರಲ್ಲ ಚಂದ್ರನ ಅಂಗಳದಿಂದ ರಾಕೆಟ್ ಪ್ರಯೋಗ ತುಂಬಾ ಸುಲಭ. ಇದಕ್ಕೆ ಆಗುವ ಖರ್ಚು ಕೂಡ ಕಡಿಮೆ.
– ಚಂದ್ರನ ಅಂಗಳದಲ್ಲಿ ಹೀಲಿಯಂ-3 ಧಾತುಗಳು ಪುಷ್ಕಳವಾಗಿವೆ. ಈ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸಿದಲ್ಲಿ ಅಲ್ಲಿ ಮೈನಿಂಗ್ ಕೂಡ ನಡೆಸುವ ಅವಕಾಶಗಳಿವೆ.
ADVERTISEMENT