ನಾಸಾ ಕೈಗೊಂಡ ಅಪೋಲೋ 11 (Apolo11) ಪ್ರಯೋಗದಲ್ಲಿ.. ಅಂತರಿಕ್ಷದತ್ತ ಮುನ್ನುಗ್ಗಿದ ರಾಕೆಟ್ ಭಾರ 45 ಟನ್ಗಿಂತ ಹೆಚ್ಚು.. ಆದರೆ, ಚಂದ್ರಯಾನ (Chandrayaan3)ಪ್ರಪೊಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಸೇರಿಸಿದರೆ ಒಟ್ಟು ಭಾರ 4 ಟನ್ ಒಳಗೆ ಇದೆ.
ಭಾರತದ ಬಳಿ ಇರುವ ಅತಿಭಾರಿ ರಾಕೆಟ್ ಜಿಎಸ್ಎಲ್ವಿ ಎಂಕೆ3 (GSLV MK-3)ಮಾತ್ರ. ಹೀಗಾಗಿ ಅತೀ ಕಡಿಮೆ ಇಂಧನದಲ್ಲಿ ಚಂದ್ರನಲ್ಲಿಗೆ ಹೋಗಬೇಕು. ಇದಕ್ಕಾಗಿಯೇ ಇಸ್ರೋ (ISRO) ವಿನೂತನ ಆಲೋಚನೆ ಮಾಡಿತು.
ಸ್ಲಿಂಗ್ ಶಾಟ್ ಥಿಯರಿ (Sling shot theory)
ಹಿಂದಿನ ಕಾಲದಲ್ಲಿ ಪಕ್ಷಿಗಳನ್ನು ಓಡಿಸಲು ಕಲ್ಲಗ್ಗವನ್ನು ಬಳಸುತ್ತಿದ್ದರು. ಒಂದು ಕೊನೆಯಲ್ಲಿ ಕಲ್ಲನ್ನು ಕಟ್ಟಿ.. ಇನ್ನೊಂದು ತುದಿ ಹಿಡಿದು ಗರಗರನೆ ಆರೇಳು ಬಾರಿ ತಿರುಗಿಸಿ.. ಗರಿಷ್ಠ ವೇಗ ಪಡೆದುಕೊಂಡ ಕೂಡಲೇ ಬಿಟ್ಟುಬಿಡುತ್ತಿದ್ದರು. ಕಲ್ಲು ಗರಿಷ್ಠ ದೂರವನ್ನು ತಲುಪುತ್ತಿತ್ತು. ಇದನ್ನು ಸ್ಲಿಂಗ್ ಶಾಟ್ ಥಿಯರಿ ಎನ್ನುತ್ತಾರೆ.
ಇದೇ ಥಿಯರಿಯನ್ನು ಉಪಯೋಗಿಸಿಕೊಂಡು ಅತಿ ಕಡಿಮೆ ಇಂಧನದಲ್ಲಿ.. ಭೂಮಿಯ ಗುರುತ್ವಾಕರ್ಷಣೆ ಶಕ್ತಿಯನ್ನು ಕೂಡ ಬಳಸಿಕೊಂಡು ಅತಿ ಕಡಿಮೆ ಇಂಧನದಲ್ಲಿ ಚಂದ್ರನ ಅಂಗಳ ತಲುಪಲು ಇಸ್ರೋ ಪ್ರಯತ್ನಿಸುತ್ತಿದೆ.
ಜಿಯೋ ಸೆಂಟ್ರಿಕ್ ಫೇಸ್ (Geo Centric Phase)
ಈ ವಿಧಾನದಲ್ಲಿ ರಾಕೆಟ್ ನೇರವಾಗಿ ಚಂದ್ರನ ಬಳಿಗೆ ತೆರಳುವ ಬದಲು ಭೂಮಿ ಸುತ್ತ ದೀರ್ಘ ವೃತ್ತಾಕಾರದಲ್ಲಿ ತಿರುಗುತ್ತಾ.. ಕ್ರಮವಾಗಿ ತನ್ನ ಅಪೋಜಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ. ಇದನ್ನು ಜಿಯೋ ಸೆಂಟ್ರಿಕ್ ಫೇಸ್ ಎನ್ನುತ್ತಾರೆ.
ಲೂನಾರ್ ಆರ್ಬಿಟ್ ಇನ್ಸೆರ್ಷನ್ (Loonar Orbit incersion)
ನಂತರ ಭೂಮಿಯ ಕಕ್ಷೆಯಿಂದ ಹೊರಬಿದ್ದು ಚಂದ್ರನ ಕಡೆ ಪ್ರಯಾಣ ಬೆಳೆಸುತ್ತದೆ. ಚಂದ್ರನ ಸುತ್ತ ತಿರುಗುತ್ತಾ ಚಂದ್ರನ ಕಕ್ಷೆಯನ್ನು ಪ್ರವೇಶಿಸುತ್ತದೆ. ಇದನ್ನು ಲೂನಾರ್ ಆರ್ಬಿಟ್ ಇನ್ಸೆರ್ಷನ್ ಅಂತಾರೆ.
ಅಲ್ಲಿಂದ ಚಂದ್ರನ ಸುತ್ತ ತಿರುಗುತ್ತಾ ದೀರ್ಘಾವೃತ್ತಾಕಾರ ಕಕ್ಷೆಯಲ್ಲಿ ತಿರುಗುತ್ತಾ ಕ್ರಮವಾಗಿ ತನ್ನ ಅಪೋಜಿಯನ್ನು ತಗ್ಗಿಸಿಕೊಳ್ಳುತ್ತಾ, ಕೊನೆಗೆ ಚಂದ್ರನ ಕಡೆಗೆ ಪಯಣಿಸಿ, ಚಂದ್ರನ ಅಂಗಳದಲ್ಲಿ ಇಳಿಯಲಿದೆ.
ಅಂದು 48 ದಿನ.. ಇಂದು 40 ದಿನ
ಚಂದ್ರಯಾನ್ 2 ಪಯಣ 48 ದಿನ ಹಿಡಿದಿತ್ತು. ಭೂಮಿಯ ಕಕ್ಷೆಯಲ್ಲಿಯೇ 23 ದಿನ ತಿರುಗಿತ್ತು. ಆದರೆ, ಚಂದ್ರಯಾನ್-3 ಪ್ರಯೋಗದಲ್ಲಿ ಪ್ರಯಾಣದ ಅವಧಿಯನ್ನು ಕಡಿತ ಮಾಡಲಾಗಿದೆ. 40 ದಿನದಲ್ಲಿ ಚಂದ್ರನ ಅಂಗಳ ತಲುಪುವಂತೆ ಯೋಜನೆ ರೂಪಿಸಲಾಗಿದೆ
ಚಂದ್ರಯಾನ್-3ರಲ್ಲಿ ಆರ್ಬಿಟರ್ ಇಲ್ಲ (Orbiter)
ಚಂದ್ರಯಾನ್-3ರಲ್ಲಿ ಆರ್ಬಿಟರ್ ಅಳವಡಿಸಲಿಲ್ಲ. ಕೇವಲ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಮಾಡ್ಯೂಲ್ ಮಾತ್ರ ಇವೆ. ಕಾರಣ ಚಂದ್ರಯಾನ್-2ರಲ್ಲಿ ಪ್ರಯೋಗಿಸಿದ್ದ ಆರ್ಬಿಟರ್ ಮೂರು ವರ್ಷಗಳಿಂದ ಚಂದ್ರನ ಸುತ್ತ ತಿರುಗುತ್ತಾ ತನ್ನ ಕೆಲಸವನ್ನು ಮಾಡುತ್ತಿದೆ.
ಲ್ಯಾಂಡರ್ ಇಳಿಯುವ ಜಾಗ ರೆಗೋಲಿತ್ (Regolith)
ಚಂದ್ರಯಾನ್ 3ರಲ್ಲಿ ಪ್ರಯೋಗಿಸುವ ಲ್ಯಾಂಡರ್, ರೋವರ್ ಮಾಡ್ಯೂಲ್ಗಳನ್ನು ಈ ಆರ್ಬಿಟರ್ ಮೂಲಕವೇ ನಿಯಂತ್ರಿಸುತ್ತಾರೆ. ಚಂದ್ರನ ಅಂಗಳದ ರೆಗೋಲಿತ್ ಮೇಲೆ ಸೇಫ್ ಲ್ಯಾಂಡ್ ಆದ ಮೇಲೆ ರೋವರ್ ಹೊರಗೆ ಬರುತ್ತೆ.. ಅದು ಚಂದ್ರನ ಅಂಗಳದಲ್ಲಿ ತಿರುಗುತ್ತಾ ಅಲ್ಲಿನ ವಾತಾವರಣದ ಅಧ್ಯಯನ ಸೇರಿ ಹಲವು ಕೆಲಸಗಳನ್ನು ಮಾಡಲಿದೆ.
ಹೀಗೆ ಇಸ್ರೋ ತನ್ನ ಬಳಿಯಿರುವ ರಾಕೆಟ್ ಸಾಮರ್ಥ್ಯದೊಂದಿಗೆ, ಅತಿಕಡಿಮೆ ಇಂಧನದಲ್ಲಿ ಯಶಸ್ವಿಯಾಗಿ ಚಂದ್ರನ ಅಂಗಳ ಸೇರಲು ಈ ವಿಧಾನವನ್ನು ಅನುಸರಿಸುತ್ತಿದೆ. ಈ ವಿಧಾನದಿಂದಾಗಿಯೇ ಅತಿ ಕಡಿಮೆ ಖರ್ಚಿನಲ್ಲಿ ಇಸ್ರೋ ತನ್ನ ಪ್ರಯೋಗವನ್ನು ಪೂರ್ಣಗೊಳಿಸುತ್ತಿದೆ.
ಇದನ್ನುಓದಿ
ಚಂದ್ರಯಾನ್ 3- ಚಂದ್ರನ ತಲುಪಲು ನಾಸಾಗೆ 4 ದಿನ.. ಇಸ್ರೋಗೆ 40 ದಿನ.. ಏಕಿಷ್ಟು ವ್ಯತ್ಯಾಸ?