ಭೂಮಿಯ ನೈಸರ್ಗಿಕ ಉಪಗ್ರಹ ಎಂದೇ ಕರೆಯಲಾಗುವ ಚಂದ್ರನ ದಕ್ಷಿಣ ಅಂಗಳದಲ್ಲಿ ಭಾರತದ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿದೆ. ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದಿರ ಅಂಗಳದಲ್ಲಿ ಭಾರತದ ಹೆಸರು ದಾಖಲಾಯಿತು.
ಈ ಮೂಲಕ ಚಂದಿರನ ದಕ್ಷಿಣ ಅಂಗಳದಲ್ಲಿ ಸಂಶೋಧನಾ ನೌಕೆಯನ್ನು ಇಳಿಸಿದ ವಿಶ್ವದ ಮೊಟ್ಟಮೊದಲ ರಾಷ್ಟ್ರ ಎಂಬ ಐತಿಹಾಸಿಕ ಹೆಗ್ಗಳಿಕೆ ಮತ್ತು ಹಿರಿಮೆ ಭಾರತ ಹೆಸರಲ್ಲಿ ಕೆತ್ತನೆಯಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ಈ ಐತಿಹಾಸಿಕ ಸಾಧನೆಯನ್ನು ಇಸ್ರೋ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಿತ್ತು. ನೇರ ಪ್ರಸಾರವನ್ನು ಬರೋಬ್ಬರೀ 82 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ.
ಚಂದಿರ ಅಂಗಳದಲ್ಲಿ ಅಧ್ಯಯನಕ್ಕಾಗಿ ಸಂಶೋಧನಾ ನೌಕೆಗಳನ್ನು ಕಳುಹಿಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಅಮೆರಿಕ, ರಷ್ಯಾ ಮತ್ತು ಚೀನಾದೊಂದಿಗೆ ಈ ಭಾರತವೂ ಈ ಮಹಾ ಸಾಧನೆಯ ಸಾಲಿನಲ್ಲಿ ಸೇರಿಕೊಂಡಿದೆ.
ನಿಮಿಷಕ್ಕೆ 1.68 ಕಿಲೋ ಮೀಟರ್ ವೇಗದಲ್ಲಿ ಚಂದಿರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯಿತು.
ಮುಂದೇನು..?
ವಿಕ್ರಮ್ ಲ್ಯಾಂಡರ್ನ ಒಳಗೆ ಪ್ರಗ್ಯಾನ್ ಎಂಬ ರೋವರ್ ಇದೆ. ಇದು ವಿಕ್ರಮ್ ಲ್ಯಾಂಡರ್ನಿಂದ ಹೊರಬಂದು ಚಂದಿರನ ಮೇಲ್ಮೈನಲ್ಲಿ ಸಂಚಾರ ಮಾಡಲಿದೆ. ರೋವರ್ ಚಂದಿರನ ಮೇಲ್ಮೈನಲ್ಲಿರುವ ರಾಸಾಯನಿಕ ಅಂಶಗಳು ಮತ್ತು ನೀರಿನಾಂಶಗಳ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಿದೆ. ರೋವರ್ ತನ್ನ ವಿಕಿರಣಗಳ ಮೂಲಕ ಚಂದಿರನ ಅಂಗಳದಲ್ಲಿನ ಅಂಶಗಳನ್ನು ಕರಗಿಸುತ್ತದೆ ಮತ್ತು ಆ ಕರಗಿಸುವಿಕೆಯ ವೇಳೆ ಅನಿಲವನ್ನು ಸಂಶೋಧನೆಗೆ ಒಳಪಡಿಸಲಿದೆ.
ರೋವರ್ ನೀಡುವ ಮಾಹಿತಿ ಚಂದಿರನ ಅಂಗಳ ಮನುಷ್ಯ ಯೋಗ್ಯವೋ ಇಲ್ಲವೋ ಎನ್ನುವುದು ತಿಳಿಯಲು ಸಹಕಾರಿಯಾಗಲಿದೆ. ಚಂದಿರನಲ್ಲಿರುವ ನೀರಿನಾಂಶ, ಖನಿಜಾಂಶಗಳ ಬಗ್ಗೆಯೂ ಗೊತ್ತಾಗಲಿದೆ.
ADVERTISEMENT
ADVERTISEMENT