ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಚಂದ್ರು ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭಾನುವಾರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿ ಯಾರ ಹೇಳಿಕೆಯೂ ಮುಖ್ಯವಲ್ಲ, ಸತ್ಯ ಹೊರಬರಬೇಕು ಅಷ್ಟೇ. ಯಾರು ವಾಗ್ದಾಳಿ ಮಾಡ್ತಾರೋ, ಯಾರು ಹೇಳಿಕೆ ಕೊಡ್ತಾರೋ ಅದು ಮುಖ್ಯವಾಗುವುದಿಲ್ಲ. ಘಟನೆಯ ಸತ್ಯಾಂಶ ಜನರಿಗೆ ಗೊತ್ತಾಗಬೇಕಿದೆ. ಈ ಹಿನ್ನೆಲೆ ನಿನ್ನೆ ನಾನು ಕಮಿಷನರ್ ಮತ್ತು ಡಿಜಿಯವರ ಬಳಿ ಮಾತನಾಡಿದ್ದೇನೆ. ಈ ಪ್ರಕರಣವನ್ನು ಸಿಐಡಿಗೆ ಕೊಡಬೇಕೆಂದು ತೀರ್ಮಾನ ಮಾಡಿದ್ದೇವೆ’ ಎಂದು ಹೇಳಿದರು.
ಚಂದ್ರು ಹತ್ಯೆ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತೆನಿಖೆಯಾಗಿ ಸತ್ಯ ಹೊರಗಡೆ ಬರಬೇಕು. 3ನೇ ಪಾರ್ಟಿಯಿಂದಲೇ ತೆನಿಖೆಯಾಗಲಿ, ಒಟ್ನಲ್ಲಿ ಸತ್ಯ ಹೊರಗಡೆ ಬಂದರೆ ಸಾಕು. ಹೀಗಾಗಿ ಸಿಐಡಿ ತೆನಿಖೆಗೆ ಕೊಡಬೇಕೆಂದು ಹೇಳಿದ್ದೇನೆ. ಇಂದು ಬಹುತೇಕ ಕಮಿಷನರ್ ಅವರು ಡಿಜೆಗೆ ಪತ್ರ ಬರೆದು ಸಿಐಡಿಗೆ ಕೊಡ್ತಾರೆ ಎಂದು ತಿಳಿಸಿದ್ದಾರೆ.
ಬೆಂಗಳುರಿನ ಜೆಜೆನಗರದ ಗೌರಿಪಾಳ್ಯದಲ್ಲಿನ ಚಂದ್ರು ಹತ್ಯೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಉರ್ದು ಮಾತನಾಡಲು ಬರಲಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಯುವಕರು ಚಂದ್ರವಿನ ಹತ್ಯೆ ಮಾಡಿದ್ದಾರೆ ಎಂದು ಸ್ವತಃ ಗೃಹ ಸಚಿವರೇ ಹೇಳಿ, ತದನಂತರ ತಮ್ಮ ಹೇಳಿಕೆಯನ್ನುವ ವಾಪಸ್ ಪಡೆದಿದ್ದರು. ಅಲ್ಲದೇ, ಸಿಟಿ ರವಿ, ರವಿಕುಮಾರ್ ಅವರು ಸಹ ಈ ಹತ್ಯೆ ಭಾಷಾ ಕಾರಣಕ್ಕಾಗಿಯೇ ನಡೆದಿದೆ ಎಂದು ಪ್ರತಿಪಾದಿಸಿದ್ದಾರೆ. ಆದರೆ, ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರು ಇದು ಅಪಘಾತದ ಕಾರಣಕ್ಕಾಗಿ ನಡೆದ ಹತ್ಯೆ ಎಂದು ಹೇಳಿದ್ದಾರೆ.