ಮೂರು ರಾಜ್ಯಗಳಿಗೆ ಬಿಜೆಪಿ ಹೊಸಬರನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡುವುದರೊಂದಿಗೆ ಲೋಕಸಭಾ ಚುನಾವಣೆಗೆ ಹೊಸ ಜಾತಿ ಸಮೀಕರಣದ ಲೆಕ್ಕಾಚಾರವನ್ನು ಪ್ರಯೋಗಿಸಿದೆ. ರಾಜಸ್ಥಾನದಲ್ಲಿ ಭಜನ್ಲಾಲ್ ಶರ್ಮಾ, ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ಮತ್ತು ಛತ್ತೀಸ್ಗಢದಲ್ಲಿ ವಿಷ್ಣು ದಿಯೋ ಸಾಯ್ ಅವರು ಮುಖ್ಯಮಂತ್ರಿಗಳಾಗಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೂರು ರಾಜ್ಯಗಳ ಗೆಲುವಿನ ಬಳಿಕದ ಮುಖ್ಯಮಂತ್ರಿಗಳ ಆಯ್ಕೆ ಬಿಜೆಪಿಗೆ ಬುಡಕಟ್ಟು (ಎಸ್ಟಿ) +ಬ್ರಾಹ್ಮಣ ಮತ್ತು ಯಾದವ ಸಮುದಾಯ ಮತ ಸಮೀಕರಣಕ್ಕೆ ನೆರವಾಗಬಹುದು ಎಂಬ ಅಂದಾಜಿಸಿದೆ.
ಬ್ರಾಹ್ಮಣ ಸಮುದಾಯ ಲೆಕ್ಕಾಚಾರ:
ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಭಜನ್ಲಾಲ್ ಶರ್ಮಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದು ಬಿಜೆಪಿ ಮೂರು ರಾಜ್ಯಗಳ ಸಿಎಂಗಳ ಆಯ್ಕೆ ಪೈಕಿ ಕೊಟ್ಟ ದೊಡ್ಡ ಅಚ್ಚರಿ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಂದಲೇ ಶರ್ಮಾ ಅವರ ಹೆಸರು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೂಚಿತವಾಯಿತು. 56 ವರ್ಷದ ಶರ್ಮಾ ಅವರು ನಾಲ್ಕು ಬಾರಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು ಮತ್ತು ಆರ್ಎಸ್ಎಸ್ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ ಹಿನ್ನೆಲೆಯೂ ಇದೆ.
ರಾಜಸ್ಥಾನದಲ್ಲಿ ಬ್ರಾಹ್ಮಣ ಸಮುದಾಯದ ಜನಸಂಖ್ಯೆ ಶೇಕಡಾ 7ರಷ್ಟಿದೆ. ವಿಧಾನಸಭಾ ಚುನಾವಣೆಗೂ ಮೊದಲು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸಿ ಪಿ ಜೋಶಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈ ಪ್ರಯೋಗ ವಿಶೇಷವಾಗಿ ಮೇವಾರ್ ಪ್ರಾಂತ್ಯದಲ್ಲಿ ಪಕ್ಷಕ್ಕೆ ಲಾಭ ತಂದುಕೊಟ್ಟಿತು. ಈಗ ಬ್ರಾಹ್ಮಣ ಸಮುದಾಯದವರೇ ಸಿಎಂ ಆಗಿದ್ದಾರೆ.
ಉತ್ತರಾಖಂಡ್ ಮತ್ತು ಹಿಮಾಚಲಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯದ ಜನಸಂಖ್ಯೆ ಅಧಿಕವಿದೆ. ಉತ್ತರಪ್ರದೇಶದಲ್ಲಿ ಸಮುದಾಯವಾರು ಜನಸಂಖ್ಯೆಯಲ್ಲಿ ಜಾತವ ಬಳಿಕ ಬ್ರಾಹ್ಮಣರದ್ದೇ ಎರಡನೇ ಸ್ಥಾನ ಶೇಕಡಾ 9ರಿಂದ 10ರಷ್ಟು ಜನಸಂಖ್ಯೆಯೊಂದಿಗೆ.
2007ರಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಪ್ರಯೋಗಿಸಿದ ಬ್ರಾಹ್ಮಣ ಸಮುದಾಯದ ಓಲೈಕೆಯ ಹೊಸ ತಂತ್ರ ಫಲಕೊಟ್ಟು ಅವರು ಮುಖ್ಯಮಂತ್ರಿಯೂ ಆದರು. ಇದು ಉತ್ತರಪ್ರದೇಶದಲ್ಲಿ ಹೊಸ ಜಾತಿ ಸಮೀಕರಣದ ಲೆಕ್ಕಾಚಾರವನ್ನೇ ಮುಂದಿಟ್ಟಿತ್ತು. ಆದರೆ ಆ ಬಳಿಕದ ಚುನಾವಣೆಗಳಲ್ಲಿ ಈ ಮೇಲ್ವರ್ಗದ ಮತಗಳು ಮತ್ತೆ ಬಿಜೆಪಿ ಕಡೆಗೇ ವಾಲಿದವು.
ಯಾದವ ಸಮುದಾಯ ಲೆಕ್ಕಾಚಾರ:
ಮಧ್ಯಪ್ರದೇಶದಲ್ಲಿ ಯಾದವ ಸಮುದಾಯದ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದು ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಬಿಜೆಪಿಗೆ ಲಾಭ ತಂದುಕೊಡಬಹುದು ಎಂದು ಭಾವಿಸಲಾಗಿದೆ.
ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಹಿಂದುಳಿದ ಸಮುದಾಯದೊಳಗೆ ಬರುವ ಅತೀ ದೊಡ್ಡ ಸಮುದಾಯ ಯಾದವ ಸಮುದಾಯ. ಉತ್ತರಪ್ರದೇಶದಲ್ಲಿ ಶೇಕಡಾ 9ರಷ್ಟು ಮತ್ತು ಬಿಹಾರದಲ್ಲಿ ಶೇಕಡಾ 14.27ರಷ್ಟಿದ್ದಾರೆ.
ಉತ್ತರಪ್ರದೇಶದಲ್ಲಿ ಯಾದವವರಿಗೆ ಮುಲಾಯಂ ಸಿಂಗ್ ಯಾದವ್ ದೊಡ್ಡ ನಾಯಕರಾದರೆ, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್. ಮುಲಾಯಂ ಸಿಂಗ್ ಯಾದವ್ ಈಗಿಲ್ಲ. ಬಿಹಾರದಲ್ಲಿ ಲಾಲೂ ಅವರ ಮಗ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿ. ಲೋಹಿಯಾ ಹೋರಾಟದ ಹಿನ್ನೆಲೆ ಈ ಇಬ್ಬರೂ ನಾಯಕರನ್ನು ಯಾದವ ಸಮುದಾಯ ಇದುವರೆಗೆ ಬಿಟ್ಟುಕೊಟ್ಟಿಲ್ಲ. ಆದರೆ ಎರಡನೇ ತಲೆಮಾರಿನ ಅಖಿಲೇಶ್ ಸಿಂಗ್ ಯಾದವ್ ಮತ್ತು ತೇಜಸ್ವಿ ಯಾದವ್ ಎದುರಾಳಿಯಾಗಿ ಪಕ್ಕದ ರಾಜ್ಯದಲ್ಲಿ ಮುಖ್ಯಮಂತ್ರಿ ಗಾದಿಗೇರಿರುವ ಮೋಹನ್ ಯಾದವ್ ಅವರನ್ನು ಒಟ್ಟು 120 ಲೋಕಸಭಾ ಸೀಟುಗಳಿರುವ ಎರಡೂ ರಾಜ್ಯಗಳಲ್ಲಿ ಬಿಜೆಪಿ ಪರ್ಯಾಯ ನಾಯಕನಾಗಿ ಬಿಂಬಿಸಬಹುದು.
ಯಾದವ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿದ್ದೇವೆ ಎಂದು ಉತ್ತರಪ್ರದೇಶದಲ್ಲೂ, ಯಾದವ ಸಮುದಾಯದ ತೇಜಸ್ವಿ ಯಾದವ್ಗೆ ಸಿಎಂ ಸ್ಥಾನ ಸಿಕ್ಕಿಲ್ಲ ಎಂದು ಬಿಹಾರದಲ್ಲೂ ಬಿಜೆಪಿ ಬಿಂಬಿಸಿ ಲಾಭ ಗಳಿಕೆಗೆ ಮುಂದಾದರೂ ಅಚ್ಚರಿಯೇನಿಲ್ಲ. ಯಾದವ ಮತ್ತು ಬ್ರಾಹ್ಮಣ ಮತ ಸಮೀಕರಣ ಉತ್ತರ ಭಾರತದಲ್ಲಿ ಪ್ರಯೋಗವಾದರೆ ಅದು ಲೋಕಸಭಾ ಚುನಾವಣೆಯಲ್ಲಿ ಹೊಸ ಫಲಿತಾಂಶಕ್ಕೂ ಕಾರಣವಾಗಬಹುದು.
ಬುಡಕಟ್ಟು ಸಮುದಾಯ:
ಛತ್ತೀಸ್ಗಢದ ಮುಖ್ಯಮಂತ್ರಿಯಾಗಿ ಬುಡಕಟ್ಟು ಸಮುದಾಯದ ವಿಷ್ಣು ದಿಯೋ ಸಾಯ್ ಆಯ್ಕೆ ಅಚ್ಚರಿಯೇನಲ್ಲ. ರಾಜ್ಯದ ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ 26 ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ 22ರಲ್ಲಿ ಬಿಜೆಪಿ ಗೆಲ್ಲದೇ ಹೋಗಿದ್ದರೆ ಪಕ್ಷ ಅಧಿಕಾರಕ್ಕೆ ಬರುತ್ತಿರಲಿಲ್ಲ. ಆ ಹಿನ್ನೆಲೆಯಲ್ಲಿ ಸಾಯ್ ಅವರು ಅತ್ಯುನ್ನತ ಹುದ್ದೆಗೆ ಅರ್ಹರೇ ಆಗಿದ್ದರು.
ಆದರೆ ಬುಡಕಟ್ಟು ಸಮುದಾಯದ ಸಾಯ್ ಅವರನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡಿದ್ದು (ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣಾ ಭಾಷಣದಲ್ಲಿ ಭರವಸೆ ನೀಡಿದ್ದರು) ಬಿಜೆಪಿಗೆ ರಾಜಕೀಯ ಲಾಭ ತಂದುಕೊಡಬಹುದು.
ಛತ್ತೀಸ್ಗಢದಲ್ಲಿ ಅತೀ ದೊಡ್ಡ ಸಮುದಾಯವೇ ಬುಡಕಟ್ಟು ಸಮುದಾಯ, ಶೇಕಡಾ 33ರಷ್ಟು ಜನಸಂಖ್ಯೆಯೊಂದಿಗೆ. ಪಕ್ಕದ ಮಧ್ಯಪ್ರದೇಶದಲ್ಲಿ ಶೇಕಡಾ 22, ಜಾರ್ಖಂಡ್ನಲ್ಲಿ ಶೇಕಡಾ 26ರಷ್ಟು, ಒಡಿಶಾದಲ್ಲಿ ಶೇಕಡಾ 23, ರಾಜಸ್ಥಾನದಲ್ಲಿ ಶೇಕಡಾ 13.5ರಷ್ಟು ಎಸ್ಟಿ ಸಮುದಾಯದ ಮತಗಳಿವೆ.
ಮೀಸಲು ಲೋಕಸಭಾ ಕ್ಷೇತ್ರಗಳ ಪೈಕಿ ಕರ್ನಾಟಕದಲ್ಲಿ 2, ಗುಜರಾತ್ -4, ಛತ್ತೀಸ್ಗಢ -4, ಜಾರ್ಖಂಡ್-5, ಮಧ್ಯಪ್ರದೇಶದಲ್ಲಿ 6, ಒಡಿಶಾದಲ್ಲಿ -5, ರಾಜಸ್ಥಾನದಲ್ಲಿ 5, ಮಹಾರಾಷ್ಟ್ರದಲ್ಲಿ 4 ಹೀಗೆ ದೇಶದಲ್ಲಿ ಒಟ್ಟು 47 ಎಸ್ಟಿ ಮೀಸಲು ಕ್ಷೇತ್ರಗಳಿವೆ.
ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದನ್ನು ಬಿಜೆಪಿ ಚುನಾವಣೆಯಲ್ಲಿ ಪ್ರಬಲವಾಗಿ ಬಳಸಿಕೊಂಡಿತ್ತು. ಮುರ್ಮು ಅವರು ಮೂಲತಃ ಒಡಿಶಾದವರು. ಮುಂದಿನ ವರ್ಷ ಒಡಿಶಾದಲ್ಲಿ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಆ ರಾಜ್ಯದಲ್ಲಿ ರಾಜಕೀಯ ಸ್ಥಿತ್ಯಂತರ ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ಆ ಲಾಭವನ್ನು ಪಡೆದುಕೊಳ್ಳಲು ಪಕ್ಕದ ಛತ್ತೀಸ್ಗಢದಲ್ಲಿ ಮಾಡಲಾದ ಸಿಎಂ ಆಯ್ಕೆ ಬಿಜೆಪಿಗೆ ನೆರವಾಗಬಹುದು.
ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸೋಲಲಿಕ್ಕೆ ಕಾರಣವಾಗಿದ್ದು ರಾಮುಲು ಅವರಿಗೆ ಸೂಕ್ತ ಸ್ಥಾನಮಾನ ಸಿಗದೇ ಎಸ್ಟಿ ಸಮುದಾಯದ ಮತಗಳು ದೂರವಾಗಿದ್ದರಿಂದ. ಈ ನಷ್ಟವನ್ನೂ ಭರ್ತಿ ಮಾಡಿಕೊಳ್ಳಲು ಬಿಜೆಪಿಗೆ ನೆರವಾಗಲಿದೆ.