ಭಾನುವಾರ ತಮಿಳುನಾಡಿನ ಚೆನ್ನೈನ ಪೊಲೀಸ್ ಸ್ಟೇಷನ್ನಲ್ಲಿ 30 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಇದು ಕಳೆದ 2 ತಿಂಗಳಲ್ಲಿ 2 ನೇ ಪ್ರಕರಣವಾಗಿದೆ.
ಶನಿವಾರದಂದು ಚೆನ್ನೈನ ಕೊಡುಂಗಯ್ಯೂರ್ ಪೊಲೀಸರು ರಾಜಶೇಖರ್(30) ಎನ್ನುವ ಆರೋಪಿಯನ್ನು ಬಂಧಿಸಿ ಪೊಲೀಸ್ ಸ್ಟೇಷನ್ನಲ್ಲಿ ಇಟ್ಟಿದ್ದರು. ಈತನ ವಿರುದ್ಧ 20 ಕ್ಕೂ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳು ಇವೆ ಎಂದು ಆರೋಪಿಸಲಾಗಿದೆ.
ತಿರುವಳ್ಳುವರ್ ಜಿಲ್ಲೆಯ ನಿವಾಸಿ ರಾಜಶೇಖರ್ ತಾನು ಮಾಡಿರುವ ಅಪರಾಧಗಳನ್ನು ಒಪ್ಪಿಕೊಂಡಿದ್ದ. ಶನಿವಾರ ಆತನನ್ನು ಬಂಧಿಸಿದಾಗ ಆಸ್ಪತ್ರೆಗೆ ಕರೆದೊಯ್ದಿದ್ದೆವು. ವೈದ್ಯರು ಆತನನ್ನು ಪರಿಶೀಲಿಸಿ ಠಾಣೆಗೆ ಕಳುಹಿಸಿಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ಠಾಣೆಯಲ್ಲಿದ್ದಾಗ ಆತನಿಗೆ ಮತ್ತೆ ಆರೋಗ್ಯದಲ್ಲಿ ಏರುಪೇರಾಯಿತು. ಸರ್ಕಾರಿ ಆಸ್ಪತ್ರೆಗೆ ದಾಖಲಿಸಿತಾಯಿತಾದರೂ ವೈದ್ಯರು ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು.
ಪೊಲೀಸ್ ಇನ್ಸ್ಸ್ಪೆಕ್ಟರ್ ಹಾಗೂ ಸಬ್ ಸನ್ಸ್ಸ್ಪೆಕ್ಟರ್ ಸೇರಿದಂತೆ ಐವರನ್ನು ಅಮಾನತು ಮಾಡಿ ತಮಿಳುನಾಡಿನ ಹೆಚ್ಚುವರಿ ಪೊಲೀಸ್ ಕಮೀಷನರ್ ಟಿಎಸ್ ಅನ್ಬು ಆದೇಶ ಹೊರಡಿಸಿದ್ದಾರೆ.
ಡಿಜಿಪಿ ಶೈಲೇಮದ್ರ ಬಾಬು ರಾಜಶೇಖರ್ ಸಾವಿನ ಪ್ರಕರಣದ ಸಂಬಂಧ ಕ್ರಿಮಿನಲ್ ವಿಚಾರಣೆಗೆ ಆದೇಶಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ರಾಜಶೇಖರ್ ಸಾವಿನ ಕುರಿತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ, ಹೈಕೋರ್ಟ್ ನ್ಯಾಯಾಧೀಶರು ಈ ವಿಷಯವನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಪ್ರಕರಣಕ್ಕೂ ಮೊದಲು, 25 ವರ್ಷದ ವಿ ವಿಘ್ನೇಶ್ ಎಂಬ ವ್ಯಕ್ತಿಯನ್ನು, ಏಪ್ರಿಲ್ನಲ್ಲಿ ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಮರುದಿನ ವಿಜ್ಞೇಶ್ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.
ಮರಣೋತ್ತರ ಪರೀಕ್ಷೆಯ ನಂತರ ವಿಘ್ನೇಶ್ ಅವರ ದೇಹದ ಮೇಲೆ ಗಾಯಗಳು ಕಂಡುಬಂದ ನಂತರ ಕೊಲೆ ಆರೋಪದ ಮೇಲೆ ಆರು ಜನ ಪೊಲೀಸರನ್ನು ಬಂಧಿಸಲಾಗಿತ್ತು.