ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚಿಕ್ಕಬಳ್ಳಾಪುರ BJP ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಮತ ಯಾಚಿಸಲು ರೋಡ್ ಶೋ ನಡೆಸಿದರು.
ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಸ್ಥಾನದಿಂದ ಆರಂಭವಾಗಿ ಸೌಂದರ್ಯ ಮಹಲ್ವರೆಗೆ ನಡೆದ ರೋಡ್ ಶೋನಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಅಪಾರ ಬೆಂಬಲ ತೋರಿದರು. ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸುವ ಹಾಗೂ ಕ್ಷೇತ್ರದಲ್ಲಿ ಕಮಲ ಅರಳಿಸುವ ಘೋಷಣೆ ಕೇಳಿಬಂತು. ಅಭ್ಯರ್ಥಿ ಡಾ.ಕೆ.ಸುಧಾಕರ್ ಜೊತೆ ಶಾಸಕ ಧೀರಜ್ ಮುನಿರಾಜು ಹಾಜರಿದ್ದರು.
ಪ್ರಣವಾನಂದಪುರಿ ಸ್ವಾಮೀಜಿಯ ಭೇಟಿ
ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಮದ ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠಕ್ಕೆ ಅಭ್ಯರ್ಥಿ ಡಾ.ಕೆ.ಸುಧಾಕರ್ ಭೇಟಿ ನೀಡಿದರು. ವಹ್ನಿಕುಲ ಕ್ಷತ್ರಿಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಣವಾನಂದಪುರಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಡಾ.ಕೆ.ಸುಧಾಕರ್, ಬೆಂಗಳೂರಿನ ವಿಶ್ವವಿಖ್ಯಾತ ಕರಗ ಶಕ್ತ್ಯೋತ್ಸವವನ್ನು ಪ್ರತಿ ವರ್ಷ ತಿಗಳ ಸಮುದಾಯದವರು ವಿಜೃಂಭಣೆಯಿಂದ ನಡೆಸುತ್ತಾರೆ. ಸುಪ್ರಸಿದ್ಧ ಲಾಲ್ಬಾಗ್ ಉದ್ಯಾನವನದ ನಿರ್ಮಾಣಕ್ಕೂ ತಿಗಳರ ಕೊಡುಗೆ ದೊಡ್ಡದಿದೆ. ಬೆಂಗಳೂರು ನಗರದ ಇತಿಹಾಸ ಹಾಗೂ ಪರಂಪರೆಗೆ ತಿಗಳ ಸಮುದಾಯ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಪವಿತ್ರವಾದ ಚೈತ್ರ ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಜಗನ್ಮಾತೆ ಆದಿಶಕ್ತಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದಿದ್ದು ನನ್ನಲ್ಲಿ ಹೊಸ ಶಕ್ತಿ, ಚೈತನ್ಯ ತುಂಬಿದೆ ಎಂದು ಹೇಳಿದರು.
ನಂತರ ದೇವನಹಳ್ಳಿ ತಾಲ್ಲೂಕಿನ ಬುಳ್ಳಹಳ್ಳಿ ಗ್ರಾಮದ ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠಕ್ಕೆ ಭೇಟಿ ನೀಡಿ, ಪೀಠಾಧಿಪತಿ ಹಾಗೂ ವಹ್ನಿಕುಲ ಕ್ಷತ್ರಿಯ ಜನಾಂಗದ ಗುರು ಸದ್ಗುರು ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜ್ ಶ್ರೀಗಳ ಆಶೀರ್ವಾದ ಪಡೆದರು.