ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಪ್ರಚಾರ ನಡೆಸುವ ವೇಳೆ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಡಾ ಕೆ ಸುಧಾಕರ್ ತಿರುಗೇಟು ನೀಡಿದ್ದಾರೆ.
ಮಾನ್ಯ @siddaramaiahನವರೇ, 2018ರಲ್ಲಿ ಮುಖ್ಯಮಂತ್ರಿ ಆಗಿದ್ದೂ 35,000ಕ್ಕು ಹೆಚ್ಚು ಮತಗಳ ಅಂತರದಿಂದ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತರಲ್ಲ ಆಗ ಎಷ್ಟು ಭ್ರಷ್ಟಾಚಾರ ಮಾಡಿದ್ದೀರಿ ಅಂತ ಜನ ನಿಮ್ಮನ್ನ ಸೋಲಿಸಿದ್ದರು?
2019ರಲ್ಲಿ ನಿಮ್ಮ ನಾಯಕ @RahulGandhi ಅವರು 55,000ಕ್ಕು ಹೆಚ್ಚು ಮತಗಳ ಅಂತರದಿಂದ ಅಮೇಥಿಯಲ್ಲಿ ಸೋತರಲ್ಲಾ, ನಿಮ್ಮ ಪ್ರಕಾರ ರಾಹುಲ್ ಗಾಂಧಿ ಅವರು ಭ್ರಷ್ಟಾಚಾರ ಮಾಡಿದ್ದಕ್ಕೆ ಸೋತಿದ್ದಾ?
ನನ್ನ ಮೇಲೆ ತನಿಖೆಗೆ ಆದೇಶ ಮಾಡಿದ್ದೀರಿ. ಆದರೆ ಇನ್ನೂ ತನಿಖೆ ನಡೆಯುತ್ತಿರುವಾಗಲೇ, ಸಾಕ್ಷ್ಯ ಸಿಕ್ಕಿದೆ, ನಮಗೆ ಮಾಹಿತಿ ಇದೆ ಎಂದು ಹೇಳಿದ್ದೀರಲ್ಲ, ಅದರಲ್ಲೇ ನಿಮ್ಮ ತನಿಖೆ ಎಷ್ಟು ಪೂರ್ವಗ್ರಹ ಪೀಡಿತ, ಎಷ್ಟು ನಿಷ್ಪಕ್ಷಪಾತ ಅಂತ ತಿಳಿಯುತ್ತದೆ.
ಎಲ್ಲಾ ಸರ್ವೇ ವರದಿಗಳು, ಸಮೀಕ್ಷೆಗಳು ಚಿಕ್ಕಬಳ್ಳಾಪುರದಲ್ಲಿ ಎನ್ ಡಿಎ ಗೆಲ್ಲುತ್ತದೆ, ನಾನು ಗೆಲ್ಲಲಿದ್ದೇನೆ ಎಂದು ಹೇಳುತ್ತಿರುವುದರಿಂದ ಹತಾಶೆಯಿಂದ ನನ್ನ ಮೇಲೆ ಕೆಸರೆರಚುವ ಪ್ರಯತ್ನ ಮಾಡುತ್ತಿದ್ದೀರಿ. ಈ ಎಲ್ಲಾ ಅಪಪ್ರಚಾರಗಳು, ತೇಜೋವಧೆಯ ಪ್ರಯತ್ನಗಳು ಕಾಂಗ್ರೆಸ್ ಪಕ್ಷಕ್ಕೇ ತಿರುಗು ಬಾಣ ಆಗಲಿದೆ.
2013ರಿಂದ 2018ರವರೆಗೆ ನಿಮ್ಮ ಜೊತೆ ಕೆಲಸ ಮಾಡಿದ್ದೇನೆ. ನಾನು ಆಗ ನೋಡಿದ್ದ ಸಿದ್ದರಾಮಯ್ಯನವರಿಗೂ ಈಗ ನೋಡುತ್ತಿರುವ ಸಿದ್ದರಾಮಯ್ಯನವರಿಗೂ ಬಹಳ ವ್ಯತ್ಯಾಸವಿದೆ. ನಿಮ್ಮ ಸ್ಥಿತಿ ಬಗ್ಗೆ ಕನಿಕರವಿದೆ.
ನಾನು ಎಂದೂ ಜಾತಿ ರಾಜಕಾರಣ ಮಾಡಿದವನಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ಆದರೆ ತಮ್ಮ ಒಕ್ಕಲಿಗ ದ್ವೇಷ ಗುಟ್ಟೇನು ಅಲ್ಲ. ಅದು ಇಡೀ ರಾಜ್ಯಕ್ಕೆ ತಿಳಿದಿರುವ ವಿಷಯ.
ನನ್ನ ಸೋಲು ಗೆಲುವು ಮತದಾರರು ನಿರ್ಧಾರ ಮಾಡುತ್ತಾರೆ. ನಿಮಗೆ ಒಳ್ಳೆಯದಾಗಲಿ.
ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ನೀವು, ರಾಹುಲ್ ಗಾಂಧಿ ಸೋತಿದ್ದು ಭ್ರಷ್ಟಾಚಾರದಿಂದನಾ..? – ಸಿಎಂ ಸಿದ್ದರಾಮಯ್ಯಗೆ ಸುಧಾಕರ್ ತಿರುಗೇಟು