ಬೆಂಗಳೂರಿನಲ್ಲಿರುವ ರೇಜರ್ ಪೇ, ಪೇಟಿಎಂ, ಕ್ಯಾಶ್‌ಫ್ರೀಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೆಶನಾಲಯ(ಇ.ಡಿ) ದಾಳಿ ನಡೆಸಿದೆ. ಚೀನಾದ ವ್ಯಕ್ತಿಗಳು ನಿಯಂತ್ರಿಸುತ್ತಿರುವ ಕಾನೂನು ಬಾಹಿರ ತ್ವರಿತ ಸ್ಮಾರ್ಟ್‌ಫೋನ್ ಆಧಾರಿತ ಸಾಲಗಳ ವ್ಯವಹಾರಕ್ಕೆ (Chinese Loan Apps Case) ಸಂಬಂಧಿಸಿದಂತೆ ಈ ಶೋಧ ನಡೆಸಲಾಗುತ್ತಿದೆ ಎಂದು ಇ.ಡಿ ತಿಳಿಸಿದೆ.
ಕರ್ನಾಟಕದ ರಾಜಧಾನಿಯ 6 ಕಡೆಗಳಲ್ಲಿ ಶುಕ್ರವಾರದಿಂದ ಶೋಧ ನಡೆಸಲಾಗುತ್ತಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದ್ದು, ಶನಿವಾರವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ದಾಳಿ ವೇಳೆ, ತನಿಖಾ ಸಂಸ್ಥೆಯು ಚೀನೀ ವ್ಯಕ್ತಿಗಳು ನಿಯಂತ್ರಿಸಲ್ಪಡುತ್ತಿದ್ದ ಈ ಘಟಕಗಳ ವ್ಯಾಪಾರಿ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ಹಣವನ್ನು ವಶಪಡಿಸಿಕೊಂಡಿದೆ. ಈ ಘಟಕಗಳು ಭಾರತೀಯರ ನಕಲಿ ದಾಖಲೆಗಳನ್ನು ಬಳಸಿ ಅಪರಾಧದ ಮೂಲಕ ಆದಾಯ ಗಳಿಕೆಗೆ ಡಮ್ಮಿ ನಿರ್ದೇಶಕರನ್ನಾಗಿ ಮಾಡುತ್ತಾರೆ. ಅಲ್ಲದೇ, ಈ ಘಟಕಗಳನ್ನು ಚೀನೀ ವ್ಯಕ್ತಿಗಳು ನಿಯಂತ್ರಿಸುತ್ತಾರೆ ಎಂದು ಇ.ಡಿ ಹೇಳಿದೆ. ಇದನ್ನೂ ಓದಿ : ರೋಷನ್ ಬೇಗ್ ಕಚೇರಿ ಮೇಲೆ ಇಡಿ ದಾಳಿ: ಕಚೇರಿ ಕೀ ಇಲ್ಲದೇ ಬೆಳಗ್ಗಿನಿಂದ ಕಾದ ಅಧಿಕಾರಿಗಳು
ಮೊಬೈಲ್ ಮೂಲಕ ಸಣ್ಣ ಮೊತ್ತದ ಸಾಲ ಪಡೆದ ಸಾರ್ವಜನಿಕರ ಸುಲಿಗೆ ಮತ್ತು ಕಿರುಕುಳ (Chinese Loan Apps Case) ನೀಡುವುದರಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಘಟಕಗಳು/ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೊಲೀಸ್ ಸೈಬರ್ ಕ್ರೈಂ ಠಾಣೆಯಲ್ಲಿ ಕನಿಷ್ಠ 18 ಎಫ್‌ಐಆರ್‌ಗಳು ದಾಖಲಾಗಿದ್ದು, ಅವುಗಳನ್ನು ಆಧರಿಸಿ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.