ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ. ಮೇ 10ರೊಳಗೆ ರಾಜ್ಯಕ್ಕೆ ಹೊಸ ಸಿಎಂ ಬರಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಮೂಲಕ ಮುಖ್ಯಮಂತ್ರಿ ಬದಲಾವಣೆಗೆ ದೆಹಲಿಯ ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎಂಬ ವರದಿಗಳನ್ನು ದೃಢೀಕರಿಸುವ ಮೊದಲ ಅಧಿಕೃತ ಹೇಳಿಕೆ ಆಡಳಿತ ಪಕ್ಷದ ಬಿಜೆಪಿ ಶಾಸಕರಿಂದಲೇ ಬಂದಿದೆ. ಈ ಹಿಂದೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಇಳಿಸ್ತಾರೆ ಎಂದು ಯತ್ನಾಳ್ ಹೇಳಿದ್ದರು ಮತ್ತು ಅದು ನಿಜವಾಗಿತ್ತು.
ಬೆಂಗಳೂರು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬಂದಿರುವಾಗಲೇ ಯತ್ನಾಳ್ `ಸಿಎಂ ಬದಲಾವಣೆ ಖಚಿತ’ದ ಹೇಳಿಕೆ ನೀಡಿದ್ದಾರೆ.
`ಸಿಎಂ ಬದಲಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀರ್ಮಾನ ಮಾಡ್ತಾರೆ. ಮೇ 10ರೊಳಗೆ ಸಿಎಂ ಬದಲಾವಣೆ ಆಗಬಹುದು. ಕರ್ನಾಟಕ ಮತ್ತು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯ ನಿರ್ಣಯ ಆಗುತ್ತಿದೆ’ ಎಂದು ಯತ್ನಾಳ್ ಹೇಳಿದ್ದಾರೆ.