ಹಿಜಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ರಾಜ್ಯದ ಕಾಲೇಜುಗಳಿಗೆ ನೀಡಿದ್ದ ರಜೆಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.
`ರಾಜ್ಯದಲ್ಲಿ ಹಿಂಸಾಚಾರ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಶ್ವವಿದ್ಯಾಲಯ, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕಾಲೇಜು, ಡಿಪ್ಲೋಮಾ ಕಾಲೇಜುಗಳಿಗೆ ಅನ್ವಯವಾಗುವಂತೆ ನೀಡಿರುವ ರಜೆಯನ್ನು ಫೆ.16 ವರೆಗೆ ಮುಂದುವರೆಸಲಾಗಿದೆ’
ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರು ಹೇಳಿದ್ದಾರೆ.
ಶುಕ್ರವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು,
ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ವಿಶ್ವವಿದ್ಯಾಲಯಗಳು, ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಇದು ಅನ್ವಯಿಸುತ್ತದೆ. ಆದರೆ, ಈ ಅವಧಿಯಲ್ಲಿ ಆನ್ಲೈನ್ ಬೋಧನೆ ಎಂದಿನಂತೆಯೇ ನಡೆಯಲಿದೆ. ಜೊತೆಗೆ, ಈಗಾಗಲೇ ನಡೆಯುತ್ತಿರುವ ಮತ್ತು ನಿಗದಿಯಾಗಿರುವ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’
ಎಂದು ಸ್ಪಷ್ಟಪಡಿಸಿದ್ದಾರೆ.
ಆದಷ್ಟು ಬೇಗ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವAತೆಯೂ ಮತ್ತು ವಿದ್ಯಾರ್ಥಿಗಳು ತರಗತಿಗೆ ಮರಳಲು ಅವಕಾಶ ನೀಡುವಂತೆಯೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಸರ್ಕಾರಕ್ಕೆ ಸೂಚಿಸಿತ್ತು. ಮೂರು ದಿನಗಳ ರಜೆ ಇವತ್ತಿಗೆ ಮುಗಿದಿದೆ. ಸೋಮವಾರ ಮತ್ತೆ ಹೈಕೋರ್ಟ್ ನಲ್ಲಿ ವಿಚಾರಣೆ ಇದೆ. ಸರ್ಕಾರ ಸೋಮವಾರದಿಂದ ಹೈಸ್ಕೂಲ್ ತರಗತಿಗಳನ್ನಷ್ಟೇ ಮತ್ತೆ ಆರಂಭಿಸುತ್ತಿದೆ. ಕಾಲೇಜುಗಳನ್ನು ಮತ್ತೆ ಆರಂಭಿಸಲು ಸರ್ಕಾರ ಹೈಕೋರ್ಟ್ ಆದೇಶ ಮತ್ತೆ ಬರುವವರೆಗೆ ಕಾಯುತ್ತಿರುವಂತಿದೆ.