ಬೆಂಗಳೂರಿನಲ್ಲಿನ ಕೆರೆ, ಕಾಲುವೆಗಳ ಒತ್ತುವರಿ ತನಿಖೆಗೆ ಒಬ್ಬ ನ್ಯಾಯಾಂಗ ಅಧಿಕಾರಿಯ ನೇತೃತ್ವದಲ್ಲಿ ತಾಂತ್ರಿಕ ಸದಸ್ಯರೊಂದಿಗೆ ತನಿಖಾ ಆಯೋಗವನ್ನು ರಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೊಷಣೆ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಸುರಿದಿದ್ದ ನಿರಂತರ ಮಳೆಗೆ ಅರ್ಧ ಬೆಂಗಳೂರು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೆರೆ, ರಾಜಕಾಲುವೆ ಒತ್ತುವರಿ ತೆಗೆಯಬೇಕಾಗಿದೆ. ಪ್ರಭಾವಿಗಳೂ ರಾಜಕಾಲುವೆ ಮಾಡುವಾಗ ಒತ್ತಡ ಹೇರುತ್ತಾರೆ. ಈ ಮಳೆ ಎಲ್ಲರ ಕಣ್ಣು ತೆರೆಸಿದೆ. ಎಲ್ಲೆಲ್ಲಿ ರಾಜಕಾಲುವೆ ಕಿರಿದಾಗಿಸಲಾಗಿದೆ ಅದನ್ನು ಸರಿ ಪಡಿಸಲಾಗುತ್ತದೆ. ಸಣ್ಣ ನಾಲೆಗಳೇ ಕಣ್ಮರೆಯಾಗಿವೆ. ಹೊರ ವಲಯದಲ್ಲಿ ಹೊಸ ವ್ಯವಸ್ಥೆ ಮಾಡಬೇಕಾಗಿದೆ ಎಂದರು. ಇದನ್ನೂ ಓದಿ : ಬೆಂಗಳೂರು ಪ್ರವಾಹ: 15 ಕಡೆಗಳಲ್ಲಿ ದೊಡ್ಡ ಸಂಸ್ಥೆಗಳಿಂದ ರಾಜಕಾಲುವೆ ಒತ್ತುವರಿ
ಇದಕ್ಕಾಗಿ ಹೊಸ ಬಿಡಿಎ, ಬಿಬಿಎಂಪಿ, ಜಲಮಂಡಳಿ ಒಟ್ಟಾಗಿ ಮಾಸ್ಟರ್ ಪ್ಲಾನ್ ಮಾಡಬೇಕು. ಈಗಿರುವ ಮಾಸ್ಟರ್ ಪ್ಲಾನ್ ಅನ್ನು ರಿ ಡ್ರಾ ಮಾಡಲು ನಿರ್ಧರಿಸಲಾಗಿದೆ. ಸರಿಪಡಿಲು ಇನ್ನೂ ನಾಲ್ಕೈದು ವರ್ಷ ಆಗುತ್ತೆ. ಇದೊಂದು ನಿರಂತರ ಪ್ರಕ್ರಿಯೆ ಆಗಬೇಕಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಏನೆಲ್ಲಾ ಅತಿಕ್ರಮಣ ಆಗಿದೆ ಅದನ್ನೆಲ್ಲಾ ತೆಗೆಯುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
2,626 ಒತ್ತುವರಿ ಗುರುತಿಸಲಾಗಿದೆ. 2016 ವರೆಗೆ 428 ಒತ್ತುವರಿ ತೆರವು ಮಾಡಿದ್ದೇವೆ. 2018 ಬಳಿಕ 1,502 ಒತ್ತುವರಿ ತೆಗೆದಿದ್ದೇವೆ. 602 ಒತ್ತುವರಿ ತೆರವಿಗೆ ಬಾಕಿ ಇದೆ. ಇದನ್ನು ಸರಿಪಡಿಸುತ್ತೇವೆ. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇದನ್ನೂ ಓದಿ : ಮಳೆಯಿಂದ ಬೆಂಗಳೂರು ಅಸ್ತವ್ಯಸ್ತ : ಸರ್ಕಾರದ ಸಮರ್ಥನೆ ಮಾಡಿಕೊಂಡ ಸಚಿವ ಸುಧಾಕರ್