ದೆಹಲಿ ಜಹಾಂಗೀರ್ ಪುರದಲ್ಲಿ ನಡೆದ ಹನುಮಾನ್ ಜಯಂತಿಯ ಶೋಭಯಾತ್ರೆ ವೇಳೆ ಕೋಮು ಘರ್ಷಣೆ ಸಂಭವಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಕರ್ನಾಟಕದಲ್ಲಿಯೂ ಶಾಂತಿ ಕಡಡುವ ಘಟನೆ ಹುಬ್ಬಳ್ಳಿಯಿಂದ ವರದಿ ಆಗಿದೆ.

ಪುಂಡ ಯುವಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಾತ್ಮಕ ಪೋಸ್ಟ್ ಹಾಕಿದ್ದರಿಂದ ಸಿಟ್ಟಿಗೆದ್ದ ಒಂದು ವರ್ಗ, ಹಳೇ ಹುಬ್ಬಳ್ಳಿಯ ದಿಡ್ಡಿ ಓಣಿಯಲ್ಲಿರುವ ಗುರುವ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದೆ. ಪೊಲೀಸ್ ವಾಹನವನ್ನು ಕೆಡವಿ ಜಖಂ ಮಾಡಿದೆ. ಕೆಲ ವಾಹನಗಳಿಗೆ ಬೆಂಕಿ ಹಚ್ಚಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಪ್ರಯತ್ನಿಸಿದಾಗ, ಅವರ ಮೇಲೆಯೂ ಕಲ್ಲು ತೂರಿದ್ದಾರೆ. ಈ ವೇಳೆ ಟ್ರಾಫಿಕ್ ಇನ್ಸ್ಪೆಕ್ಟರ್ ಸೇರಿ ಇಬ್ಬರಿಗೆ ಗಾಯವಾಗಿದೆ. ಕೊನೆಗೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಗುಂಪು ಚೆದುರಿಸಿದ್ದಾರೆ.

ಈ ಬೆಳವಣಿಗೆ ನಡುವೆ ಸೋಶಿಯಲ್ ಮೀಡಿಯಾದಲ್ಲಿ ತಿರುಚಿದ ಫೋಟೋ ಹಾಕಿ ಕೋಮು ಭಾವನೆ ಕೆರಳುವಂತೆ ಮಾಡಿದ್ದ ಯುವಕನನ್ನು ಪೊಲೀಸರು ವಶಕ್ಕೆ ತೆಗದುಕೊಂಡಿದ್ದಾರೆ. ಇದನ್ನೂ ಖಂಡಿಸಿ, ಮತ್ತೊಂದು ವರ್ಗದ ಜನ ಠಾಣೆ ಮುಂದೆ ಜಮಾವಣೆಗೊಂಡಿದ್ದಾರೆ. ಪರಿಸ್ಥಿತಿ ಸದ್ಯ ಬೂದಿ ಮುಚ್ಚಿದ ಕೆಂಡದಂತೆ ಇದೆ. ನಗರದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.
