ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಿಸಿರುವ ಮಹಿಳೆ ನಟೋರಿಯಸ್ ಹೆಂಗಸು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ವಾದಿಸಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಕರ್ನಾಟಕ ಹೈಕೋರ್ಟ್ನ ಎಂ ನಾಗಪ್ರಸನ್ನ ಅವರ ಪೀಠದಲ್ಲಿ ನಡೆಯಿತು. ಯಡಿಯೂರಪ್ಪ ಅವರ ಪರ ಹಾಜರಾದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಮಗಳ ಪರವಾಗಿ ದೂರು ನೀಡಿರುವ ಮಹಿಳೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದರು.
ನನ್ನ ವಿರುದ್ಧ ದೂರುದಾರೆ ಮಹಿಳೆ ದೂರು ದಾಖಲಿಸಿದ್ದು ಮಾರ್ಚ್ 14, ರಾತ್ರಿ 10 ಗಂಟೆಗೆ, ಕೃತ್ಯ ನಡೆದ ಒಂದೂವರೆ ತಿಂಗಳ ಬಳಿಕ. ಈ ಅವಧಿಯಲ್ಲಿ ದೂರುದಾರೆ ನನ್ನ ಮನೆಗೆ ಹಲವು ಬಾರಿ ಬಂದು ಹೋಗಿದ್ದಾರೆ. ಬಳಿಕ ಆಕೆ ನನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆಕೆ ನಟೋರಿಯಸ್ ಲೇಡಿ.
ನಾನು ಯಾಕೆ ಇದನ್ನು ಹೇಳುತ್ತಿದ್ದೇನೆ ಎಂದರೆ ಆಕೆ ಹೇಳಿಕೆ ಕೊಟ್ಟಿದ್ದನ್ನು ಹಾಗೇಯೇ ಒಪ್ಪಿಕೊಳ್ಳಬೇಡಿ, ಅದನ್ನು ಅನುಮಾನದಿಂದಲೂ ನೋಡ್ಬೇಕು. ದೂರುದಾರೆಗೆ ಮಾನಸಿಕ ಸ್ಥಿಮಿತತೆ ಕೂಡಾ ಇಲ್ಲ. ಇದೇ ದೂರುದಾರ ಮಹಿಳೆ ತನ್ನ ಗಂಡನ ವಿರುದ್ಧ, ಮಗ, ಡಿಜಿಐಜಿಪಿ, ವಿರೋಧ ಪಕ್ಷದ ನಾಯಕರು ಮತ್ತು ಇತರರು ಸೇರಿದಂತೆ 50 ಜನರ ವಿರುದ್ಧ ದೂರು ನೀಡಿದ್ದಾಳೆ. ಆಕೆ ದಾಖಲಿಸಿರುವ ದೂರುಗಳ ನಾನು ಸಿದ್ಧಪಡಿಸಿರುವ ಚಾರ್ಟ್ನ್ನು ರಾಜ್ಯ ಸರ್ಕಾರ ಕೂಡಾ ಆಕ್ಷೇಪಿಸುತ್ತಿಲ್ಲ.
ಯಡಿಯೂರಪ್ಪ ವಿರುದ್ಧ ಸಲ್ಲಿಸಲಾಗಿರುವ ಆರೋಪಪಟ್ಟಿಯ ಬಗ್ಗೆಯೂ ಉಲ್ಲೇಖಿಸಿದ ವಕೀಲ ಸಿ ವಿ ನಾಗೇಶ್, ʻಈ ಆರೋಪಪಟ್ಟಿಯನ್ನು ವಜಾಗೊಳಿಸಬೇಕು. ಆರೋಪಪಟ್ಟಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇಲ್ಲ. ನ್ಯಾಯಾಧೀಶರ ಎದುರು ಕಲಂ 164ರಡಿಯಲ್ಲಿ ಹೇಳಿಕೆಯನ್ನು ದಾಖಲಿಸಿಕೊಂಡಿಲ್ಲ, ಆದರೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಪಟ್ಟಿಯನ್ನು ಪರಿಗಣಿಸಿದ್ದು, ದಾಖಲೆಗಳನ್ನು ನೋಡಿದ್ದಾಗಿ ನ್ಯಾಯಾಧೀಶರು ಹೇಳಿದ್ದಾರೆ. ಇದು ಕತ್ತಲ ಕೋಣೆಯಲ್ಲಿ ಕಪ್ಪು ಬೆಕ್ಕಿಗೆ ಹುಡುಕಿದಂತೆ. ಈ ಪ್ರಕರಣವನ್ನು ಮತ್ತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಬಾರದು.
ʻಆರೋಪಪಟ್ಟಿಯನ್ನು ಪರಿಗಣಿಸುವುದಕ್ಕೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಾರಣಗಳನ್ನು ಕೊಟ್ಟಿಲ್ಲʼ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಹೇಳಿದರು.
ದೂರುದಾರೆ ಮಹಿಳೆಯ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ವಾದಿಸಿದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು, ಯಡಿಯೂರಪ್ಪ ಅವರನ್ನು ಬಂಧಿಸದಂತೆ ಜೂನ್ 14ರಂದು ಕರ್ನಾಟಕ ಹೈಕೋರ್ಟ್ ವಿಧಿಸಿದ್ದ ತಡೆಯನ್ನು ತೆರವುಗೊಳಿಸಬೇಕು ಎಂಬ ರಾಜ್ಯ ಸರ್ಕಾರದ ಮನವಿಯನ್ನೂ ವಿರೋಧಿಸಿದರು.
ʻನನ್ನ ವಿರುದ್ಧ (ಯಡಿಯೂರಪ್ಪ ವಿರುದ್ಧ) ಪೋಕ್ಸೋದ ಕಲಂ 8ರಡಿಯಲ್ಲಿ ಪ್ರಕರಣ ದಾಖಲಾಗಿದ್ದು ಗರಿಷ್ಠ 5 ವರ್ಷ ಜೈಲು ಶಿಕ್ಷೆ ಮತ್ತು ಐಪಿಸಿ ಕಲಂ 354ರಡಿಯಲ್ಲಿ ಗರಿಷ್ಠ 3 ವರ್ಷ ಜೈಲು ಶಿಕ್ಷೆಯ ಪ್ರಕರಣ ದಾಖಲಾಗಿದೆ. ಅಪರಾಧ ಪ್ರಕ್ರಿಯೆ ಸಂಹಿತೆಯ ಕಲಂ 41ಎ ಅಡಿಯಲ್ಲಿ ನನಗೆ ತನಿಖಾಧಿಕಾರಿ ನೋಟಿಸ್ ನೀಡಿದ್ದಾರೆ. ನಾನು ದೆಹಲಿಗೆ ಹೋಗ್ಬೇಕಿತ್ತು. ಆ ಬಗ್ಗೆ ನಾನು ತನಿಖಾಧಿಕಾರಿಗೆ ಮಾಹಿತಿ ನೀಡಿದ್ದೆ ಮತ್ತು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಮತ್ತು ಬೇರೊಂದು ದಿನದ ಸಮಯವನ್ನೂ ಕೇಳಿದ್ದೆ. ಆದರೂ ನನ್ನ ವಿರುದ್ಧ ನ್ಯಾಯಾಲಯಕ್ಕೆ ಹೋದ ತನಿಖಾಧಿಕಾರಿ ನನ್ನ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ತಂದರುʼ ಎಂದು ವಕೀಲ ಸಿ ವಿ ನಾಗೇಶ್ ಅವರು ವಾದಿಸಿದರು.
ʻಒಂದು ವೇಳೆ ಅರ್ಜಿದಾರ (ಯಡಿಯೂರಪ್ಪ) ವಿಚಾರಣೆಯನ್ನು ತಪ್ಪಿಸಿಕೊಂಡರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಾರೆಂಟ್ ಹೊರಡಿಸಬಹುದುʼ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಹೇಳಿದರು.
ʻಇಲ್ಲ, ಅರ್ಜಿದಾರರು ಯಾವಾಗ ತಪ್ಪಿಸಿಕೊಂಡಿದ್ದಾರೆ..?ʼ ಎಂದು ಸಿ ವಿ ನಾಗೇಶ್ ಅವರು ವಾದಿಸಿದರು.
ಯಡಿಯೂರಪ್ಪ ಬಂಧನ ವಿರುದ್ಧ ನೀಡಲಾಗಿರುವ ಮಧ್ಯಂತರ ತಡೆಯನ್ನು ತೆರವುಗೊಳಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ರವಿವರ್ಮಾ ಕುಮಾರ್ ಅವರು ವಾದಿಸಿದರು. ʻನನಗೆ ಅರ್ಥವೇ ಆಗುತ್ತಿಲ್ಲ, ಅರ್ಜಿದಾರರಿಗೆ ಜಾಮೀನು ನೀಡಲಾಗಿದ್ಯಾ ಅಥವಾ ಬಂಧನಕ್ಕೆ ತಡೆ ನೀಡಲಾಗಿದ್ಯಾ..? ಎಂದು. ಹೈಕೋರ್ಟ್ ಹೊರಡಿಸಿದ್ದ ಆದೇಶದ ಸ್ವರೂಪ ಏನು..? ಇಂತಹ ಪ್ರಕರಣಗಳಲ್ಲಿ ಅಂತಹ ರಕ್ಷಣೆಯನ್ನು ನೀಡಲು ಸಾಧ್ಯವಿಲ್ಲ. ಅರ್ಜಿದಾರರ ವಿರುದ್ಧ ಗಂಭೀರ ಹೀನ ಕೃತ್ಯದ ಆರೋಪವಿದೆ. ಸಂತ್ರಸ್ತ ಬಾಲಕಿ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸುವಾಗ ಯಡಿಯೂರಪ್ಪ ನ್ಯಾಯಾಲಯದಲ್ಲಿ ಹಾಜರಿರಬೇಕಿತ್ತು. ಆದರೆ ಹೈಕೋರ್ಟ್ನ ಮಧ್ಯಂತರ ಆದೇಶದಿಂದ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗೆ ಅಡ್ಡಿಯಾಗಿದೆʼ ಎಂದು ವಾದಿಸಿದರು.
ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಗುರುವಾರ ಮುಂದುವರೆಸಲಿದೆ.
ADVERTISEMENT
ADVERTISEMENT