75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಬೆಂಗಳೂರಲ್ಲಿ ಐತಿಹಾಸಿಕ ಸ್ವಾತಂತ್ರ್ಯ ನಡಿಗೆಯನ್ನು ಆಯೋಜಿಸಿದೆ.
ಆದರೆ ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಕಿದ್ದ ರಾಷ್ಟ್ರ ನಾಯಕರ ಭಾವಚಿತ್ರಗಳ ಪೈಕಿ ಕೆ ಆರ್ ಸರ್ಕಲ್ನಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪೋಸ್ಟರ್ನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
#FreedomMarch ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ನಗರದ ಹಲವು ಭಾಗಗಳಲ್ಲಿ ನಾವು ಅಳವಡಿಸಿದ್ದ ದೇಶದ ಸ್ವತಂತ್ರಕ್ಕೆ ತ್ಯಾಗ ಬಲಿದಾನಗೈದ ಮಹನೀಯರ ಚಿತ್ರಗಳನ್ನು ಕೆಲವು ಕಿಡಿಗೇಡಿಗಳು ಹರಿದು ಹಾಕಿರುವುದು ಖಂಡನೀಯ. ಈ ಕೃತ್ಯಕ್ಕೆ ಯಾರೂ ಸಹ ವಿಚಲಿತರಾಗಬಾರದು ಹಾಗೂ ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡುತ್ತೇವೆ.
ದೇಶದ ಸ್ವತಂತ್ರಕ್ಕಾಗಿ ರಕ್ತ ನೀಡಿದ, ತಮ್ಮ ಬದುಕನ್ನು ತ್ಯಾಗ ಮಾಡಿದವರನ್ನು ಜಾತಿ, ಮತ, ಪ್ರಾಂತ್ಯ, ಸಿದ್ದಾಂತ, ಭಾಷೆಗಳ ಪರಿಧಿಯಿಂದ ಹೊರಗಿಟ್ಟು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ದೇಶದ 75ನೇ ಸ್ವಾತಂತ್ರ್ಯ ಸಂಭ್ರಮದ ಈ ಸಂದರ್ಭದಲ್ಲಿ ಮಹನೀಯರ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕೆಂದು ಮನವಿ ಮಾಡುತ್ತೇವೆ.
ಎಂದು ಕೆಪಿಸಿಸಿ ಟ್ವೀಟಿಸಿದೆ.
ಆ.15ರಂದು ಹಮ್ಮಿಕೊಳ್ಳಲಾಗಿರುವ #FreedomMarch ಕನ್ನಡನಾಡಿನ ಹೆಮ್ಮೆ. ಕಿಡಿಗೇಡಿಗಳ ಕೆಲಸದಿಂದ ಈ ಸಮಯದಲ್ಲಿ ಅಶಾಂತಿ ಉಂಟಾಗಬಾರದು. ಬೆಂಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಪ್ರತಿಯೊಬ್ಬರನ್ನೂ ಪ್ರಾರ್ಥಿಸುತ್ತೇನೆ. ಏನೇ ಅಡ್ಡಿ ಆತಂಕಗಳು ಉಂಟಾದರೂ ಕಾನೂನು ಪ್ರಕಾರ ಮುಂದುವರಿಯುತ್ತೇವೆ. ದಯವಿಟ್ಟು ಶಾಂತಿ ಕಾಪಾಡಿ
ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.