ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ಹೆಚ್.ಮುನಿಯಪ್ಪ (KH Muniyappa) ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆದಿದೆ.
ಈ ಚರ್ಚೆಗೆ ಇಂಬು ನೀಡುವಂತೆ ಇಂದು ಕೆ.ಹೆಚ್.ಮುನಿಯಪ್ಪನವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಭೇಟಿಯಾದ ಕೆಲವೇ ಹೊತ್ತಿನಲ್ಲಿ, ಆರೋಗ್ಯ ಸಚಿವ ಕೆ.ಸುಧಾಕರ್ರನ್ನು ಅವರ ಮನೆಯಲ್ಲಿ ಭೇಟಿಯಾಗಿ ಒಂದು ಗಂಟೆಗಳ ಕಾಲ ಚರ್ಚಿಸಿದ್ದಾರೆ. ಮುನಿಯಪ್ಪನವರ ಈ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಶಾಸಕ ರಮೇಶ್ ಕುಮಾರ್ ಶಕುನಿ ಇದ್ದಂತೆ : ಕೆಎಚ್ ಮುನಿಯಪ್ಪ
ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಕೆ.ಹೆಚ್.ಮುನಿಯಪ್ಪ (KH Muniyappa) ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಎಂ.ಸಿ.ಸುಧಾಕರ್ ಮತ್ತು ಕೊತ್ತನೂರು ಮಂಜುನಾಥ್ರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡ ಕಾರಣ ತೀವ್ರ ಅಸಮಾಧಾನಗೊಂಡಿದ್ದರು.
ಕೋಲಾರ ಜಿಲ್ಲಾ ರಾಜಕಾರಣದಲ್ಲಿ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಅವರ ಜೊತೆ ಇತ್ತೀಚಿನವರೆಗೂ ತೀವ್ರ ಹಣಾಹಣಿ ನಡೆದಿತ್ತು. ಈ ವಿಷಯದಲ್ಲಿ ಸಿದ್ದರಾಮಯ್ಯನವರ ಮೇಲೆಯೂ ಮುನಿಯಪ್ಪ ಬೇಸರಗೊಂಡಿದ್ದರು ಎನ್ನಲಾಗಿದೆ.
ಇಂದು ಮುನಿಯಪ್ಪನವರು ಸ್ವಾಮೀಜಿಯೊಬ್ಬರ ಜೊತೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಆ ಮೂಲಕ ಶೀಘ್ರವೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
ಇದನ್ನೂ ಓದಿ : ಅತ್ಯಾಚಾರ ತಡೆಯಲು ಆಗದಿದ್ದರೆ, ಮಲಗಿ ಆನಂದಿಸಿ: ಮಾಜಿ ಸ್ಪೀಕರ್ ರಮೇಶ್ಕುಮಾರ್ ಮಾತಿಗೆ ವ್ಯಾಪಕ ಟೀಕೆ
ಮುನಿಯಪ್ಪರನ್ನು ಜೆಡಿಎಸ್ ನಾಯಕರೂ ತಮ್ಮ ಪಕ್ಷಕ್ಕೆ ಬರುವಂತೆ ಈ ಹಿಂದೆ ಆಹ್ವಾನ ನೀಡಿದ್ದರು.