ಲೋಕಸಭಾ (Loksabha) ಸಂಸದ ಸ್ಥಾನದಿಂದ ಅನರ್ಹರಾದ ಬಳಿಕ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು ಈಗ ಹೊಸ ಮನೆಗೆ ಹೋಗಲಿದ್ದಾರೆ.
ಅಂದಹಾಗೆ ರಾಹುಲ್ ಅವರು ಹೋಗಲಿರುವ ಆ ಮನೆ ದೀರ್ಘಕಾಲದವರೆಗೆ ದೆಹಲಿ (Delhi) ಮುಖ್ಯಮಂತ್ರಿ ಆಗಿದ್ದ ಶೀಲಾ ದೀಕ್ಷಿತ್ (Sheila Dixit) ಅವರ ಕುಟುಂಬಕ್ಕೆ ಸೇರಿದ್ದು.
ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪೂರ್ವದಲ್ಲಿರುವ ಮೂರು ಬೆಡ್ರೂಂನ ಮನೆಗೆ ರಾಹುಲ್ ಗಾಂಧಿ ತೆರಳಲಿದ್ದಾರೆ. ಶೀಲಾ ದೀಕ್ಷಿತ್ ಅವರು ತಮ್ಮ ಕೊನೆಯ ದಿನಗಳನ್ನು ಈ ಮನೆಯಲ್ಲೇ ಕಳೆದಿದ್ದರು.
1,500 ಚದರಡಿಯಷ್ಟು ದೊಡ್ಡದಿರುವ ಈ ಮನೆಯ ಎದುರಿಗೆ 16ನೇ ಶತಮಾನದಲ್ಲಿ ಮೊಘಲರು ಕಟ್ಟಿದ ಹುಮಾಯುನ್ ಸಮಾಧಿ ಕಾಣುತ್ತದೆ.
19 ವರ್ಷಗಳಿಂದ ಸಂಸದರಾಗಿದ್ದ ರಾಹುಲ್ ಅವರು ತುಘಲಕ್ ಲೇನ್ ಲ್ಯುಟೆನ್ಸ್ನಲ್ಲಿರುವ ಬಂಗಲೆಯಲ್ಲಿದ್ದರು. ಏಪ್ರಿಲ್ 22ರಂದು ಸರ್ಕಾರಿ ಬಂಗಲೆ ಖಾಲಿ ಮಾಡಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಮನೆಯೇ ನಿಮ್ಮ ಮನೆ, ನಮ್ಮ ಮನೆಗೆ ಬಂದು ಇರಿ ಎಂದು ಅಭಿಯಾನವನ್ನೂ ಮಾಡಿದ್ದರು.
ರಾಹುಲ್ ಗಾಂಧಿಗಾಗಿ ಈಗಿರುವ ಶೀಲಾ ದೀಕ್ಷಿತ್ ಕುಟುಂಬದವರು ಹತ್ತಿರದ ಫ್ಲ್ಯಾಟ್ಗೆ ಹೋಗುತ್ತಿದ್ದಾರೆ.
1991ರಲ್ಲಿ ಶೀಲಾ ದೀಕ್ಷಿತ್ ಅವರು ಈ ಮನೆಯನ್ನು ಖರೀದಿಸಿದ್ದರು. 1998ರಿಂದ 2013ರವರೆಗೆ 15 ವರ್ಷಗಳವರೆಗೆ ಸತತವಾಗಿ ಶೀಲಾ ದೀಕ್ಷಿತ್ ಅವರೇ ದೆಹಲಿ ಮುಖ್ಯಮಂತ್ರಿಯಾಗಿದ್ದರು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಕೇರಳ ರಾಜ್ಯಪಾಲೆ ಹುದ್ದೆಗೆ ರಾಜೀನಾಮೆ ನೀಡಿದ್ದ ಅವರು ನಿಜಾಮುದ್ದೀನ್ ಪೂರ್ವದಲ್ಲಿರುವ ತಮ್ಮ ಮನೆಗೆ ಬಂದು ನೆಲೆಸಿದ್ದರು.
ADVERTISEMENT
ADVERTISEMENT