ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಹೊತ್ತಲ್ಲೇ ಹಗರಣಗಳ ಆರೋಪದಡಿಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ.
ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವಜನಸೇವೆ ಮತ್ತು ಕ್ರೀಡಾ ಖಾತೆ ಸಚಿವ ನಾಗೇಂದ್ರ ರಾಜೀನಾಮೆ ಸಲ್ಲಿಸಿದರು.
ಬಳ್ಳಾರಿ ಉಸ್ತುವಾರಿ ಸಚಿವರೂ ಆಗಿದ್ದ ನಾಗೇಂದ್ರ ಸಿಎಂ ಸಿದ್ದರಾಮಯ್ಯ ಕೈಗೆ ರಾಜೀನಾಮೆ ಪತ್ರ ಕೊಡುವ ವೇಳೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್ಖಾನ್ ಮತ್ತು ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು ಕೂಡಾ ಇದ್ದರು.
ರಾಜೀನಾಮೆ ಪತ್ರದಲ್ಲಿ ಒಂದು ಸಾಲನ್ನಷ್ಟೇ ನಾಗೇಂದ್ರ ಬರೆದಿದ್ದಾರೆ.
ನನ್ನ ಸ್ವ-ಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ನಾಗೇಂದ್ರ ಅವರು ಒಂದು ಸಾಲಿನ ರಾಜೀನಾಮೆ ಸಲ್ಲಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ 185 ಕೋಟಿ ರೂಪಾಯಿ ಹಣವನ್ನು ತೆಲಂಗಾಣ ಮೂಲದ ಖಾಸಗಿ ಕಂಪನಿಗಳಿಗೆ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿದ್ದರ ಆರೋಪ ಸಂಬಂಧ ಸಿಬಿಐ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದೆ.
ಈ ಪ್ರಕರಣದಲ್ಲಿ ನಾಗೇಂದ್ರ ಆರೋಪಿ ಎಂದು ಸಿಬಿಐ ಹೆಸರಿಸಿಲ್ಲ. ನಿಗಮ ತನ್ನ ಖಾತೆಯನ್ನು ಹೊಂದಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂವರು ಅಧಿಕಾರಿಗಳು, ಖಾಸಗಿ ಕಂಪನಿಗಳವರನ್ನು ಮತ್ತು ನಿಗಮದ ಅಧಿಕಾರಿಗಳನ್ನು ಆರೋಪಿಗಳೆಂದು ಸಿಬಿಐ ಉಲ್ಲೇಖಿಸಿದೆ.
ADVERTISEMENT
ADVERTISEMENT