ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಮೈತ್ರಿಕೂಟ ಸರ್ಕಾರ ಘೋರ ಮುಖಭಂಗ ಅನುಭವಿಸಿದೆ.
ಪುಣೆ ಲೋಕಸಭಾ ಕ್ಷೇತ್ರದಲ್ಲಿ ಬರುವ ಕಸ್ಬಾ ಪೇತ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್+ಎನ್ಸಿಪಿ+ಶಿವಸೇನೆ ಉದ್ಧವ್ ಠಾಕ್ರೆ ಬಣ ಮೈತ್ರಿಕೂಟದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ದಂಗೇಕರ್ ಗೆದ್ದಿದ್ದಾರೆ.
ಬಿಜೆಪಿ ಅಭ್ಯರ್ಥಿ ಹೇಮಂತ್ ರಸಾನೆ ಅವರ ವಿರುದ್ಧ 11 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಭಾರೀ ಗೆಲುವು ಸಾಧಿಸಿದೆ.
ಉಪ ಚುನಾವಣೆ ಘೋಷಣೆ ಆದ ಬಳಿಕ ಬಿಜೆಪಿ ಮೈತ್ರಿಕೂಟ ಸರ್ಕಾರದ ಸಚಿವರು ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದರು. ಕೊನೆಯ 3-4 ದಿನ ಸ್ವತಃ ಮುಖ್ಯಮಂತ್ರಿ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನಾವೀಸ್ ಕ್ಷೇತ್ರದಲ್ಲಿ ನಿರಂತರ ಪ್ರಚಾರ ಕೈಗೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರು ಕೂಡಾ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದರು.
ಆದರೆ ಆಡಳಿತದಲ್ಲಿದ್ದರೂ ಬಿಜೆಪಿ ಮೈತ್ರಿಕೂಟಕ್ಕೆ ಕಾಲು ಶತಮಾನ ತನ್ನ ಹಿಡಿತದಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಈ ವಿಧಾನಸಭಾ ಕ್ಷೇತ್ರ 1995ರಿಂದ 2019ರವರೆಗೂ ಅಂದರೆ 34 ವರ್ಷಗಳಿಂದ ಬಿಜೆಪಿ ಹಿಡಿತದಲ್ಲೇ ಇತ್ತು. ಕಳೆದ 6 ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯೇ ಗೆದ್ದಿತ್ತು.
2019ರಲ್ಲಿ ಬಿಜೆಪಿ ಶಾಸಕಿಯಾಗಿ ಆಯ್ಕೆ ಆಗಿದ್ದ ಮುಕ್ತಾ ತಿಲಕ್ ಅವರ ಅಕಾಲಿನ ಸಾವಿನ ಕಾರಣದಿಂದ ಉಪ ಚುನಾವಣೆ ನಡೆದಿದೆ.
ಆರ್ಎಸ್ಎಸ್-ಬಿಜೆಪಿ ಭದ್ರಕೋಟೆ ಎನ್ನಲಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರುವುದು ಮಹಾಮೈತ್ರಿ ಕೂಟಕ್ಕೆ ದೊಡ್ಡ ಇಂಬು ತಂದುಕೊಟ್ಟಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ+ಏಕ್ನಾಥ್ ಶಿಂಧೆ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಚುನಾವಣೆಗಳಲ್ಲಿ ಆಡಳಿತ ಮೈತ್ರಿಕೂಟ ಸಾಲು ಸಾಲು ಮುಖಭಂಗ ಅನುಭವಿಸಿದೆ. ವಿಧಾನಸಭಾ ಉಪ ಚುನಾವಣೆ, ಜಿಲ್ಲಾ ಪಂಚಾಯತಿ ಚುನಾವಣೆ, ಗ್ರಾಮ ಪಂಚಾಯತಿ ಚುನಾವಣೆ, ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ ಆಗಿದೆ.
ADVERTISEMENT
ADVERTISEMENT