ಕುಟುಂಬ ಪಕ್ಷ ಎಂಬ ಹಣೆಪಟ್ಟಿಯನ್ನು ತೊಲಗಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಒಮದು ಟಿಕೆಟ್ ಎನ್ನುವ ನಿಯಮ ಜಾರಿಗೆ ತರಲು ಮುಂದಾಗಿದೆ. ಆದರೆ, ಈ ನಿಯಮಕ್ಕೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಇಂದು ಅನುಮೋದನೆ ನೀಡಲಾಗಿದೆ.
ರಾಜಸ್ಥಾನದ ಉದಯ್ಪುರದಲ್ಲಿ ನಡೆದ 3 ದಿನನಗಳ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಮಿತಿಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (CWC) ಇಂದು ಕಾಂಗ್ರೆಸ್ ನ ಸಾಂಸ್ಥಿಕ ಸುಧಾರಣೆಗಳ ಪಟ್ಟಿಗೆ ಅನುಮೋದನೆ ನೀಡಿದೆ.
ಒಂದು ಕುಟುಂಬ, ಒಂದೇ ಟಿಕೇಟ್ ಎನ್ನುವ ನಿಯಮವನ್ನು ಕಾಂಗ್ರೆಸ್ ಜಾರಿಗೊಳಿಸಿದೆ. ಅಲ್ಲದೇ, ಸಿಡಬ್ಲ್ಯೂಸಿ ಸೇರಿದಂತೆ ಕಾಂಗ್ರೆಸ್ನ ಎಲ್ಲಾ ಸಮಿತಿ, ಪಧಾದಿಕಾರಿಗಳ ಪಟ್ಟಿಗೆ 50 ವರ್ಷ ವಯಸ್ಸಿನವರಿಗೆ ಶೇ.50 ರಷ್ಟು ಪ್ರಾತಿನಿಧ್ಯ ನೀಡಬೇಕು. ಮತ್ತು ಎಲ್ಲಾ ಹಂತಗಳಲ್ಲಿಯೂ 5 ವರ್ಷಗಳ ಅವಧಿಯ ಮಿತಿಯನ್ನು ನಿಗದಿಪಡಿಸಿದೆ.
ಉದಯಪುರ ನವ ಸಂಕಲ್ಪ ಶಿವರ್ ಘೋಷಣೆಯನ್ನು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಸಿಡಬ್ಲ್ಯೂಸಿಯಲ್ಲಿ ಸಭೆ ನಡೆಸಿ ಅಂಗೀಕರಿಸಿದ್ದಾರೆ.
ಒಂದು ಕುಟುಂಬ, ಒಂದೇ ಟಿಕೇಟ್ ನಿಯಮಕ್ಕೆ ಹಲವು ಷರತ್ತುಗಳು ಅನ್ವಯವಾಗುತ್ತವೆ. ಪಕ್ಷಕ್ಕಾಗಿ ಕನಿಷ್ಠ ಐದು ವರ್ಷಗಳ ಕಾಲ ದುಡಿದ ಕಾಂಗ್ರೆಸ್ ನಾಯಕರ ಪುತ್ರರು, ಪುತ್ರಿಯರು ಮತ್ತು ಇತರ ಸಂಬಂಧಿಕರಿಗೆ ಟಿಕೇಟ್ ನೀಡಬಹುದಾಗಿದೆ.
ಪಕ್ಷದ ಅಧ್ಯಕ್ಷರಿಗೆ ಸಾಂಸ್ಥಿಕ ಹಾಗೂ ರಾಜಕೀಯ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಣ್ಣ ರಾಜಕೀಯ ಸಲಹಾ ಸಮಿತಿಯನ್ನು ಸ್ಥಾಪಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅನುಮೋದನೆ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ, ಸಿಡಬ್ಲ್ಯೂಸಿ ಸಂಸದೀಯ ಮಂಡಳಿಯ ಕಾರ್ಯವಿಧಾನವನ್ನು ಜಾರಿಗೆ ತರುವ ಯೋಜನೆಯನ್ನು ತಿರಸ್ಕರಿಸಿದೆ.
ಅದೇ ರೀತಿ ಎಲ್ಲ ರಾಜ್ಯಗಳಲ್ಲೂ ರಾಜಕೀಯ ವ್ಯವಹಾರಗಳ ಸಮಿತಿ ರಚನೆ. ರಾಷ್ಟ್ರೀಯ ಮಟ್ಟದ ತರಬೇತಿ ಸಂಸ್ಥೆಯನ್ನು ಆರಂಭಿಸುವುದು ಮತ್ತು ಚುನಾವಣಾ ನಿರ್ವಹಣೆಗಾಗಿ ವಿಶೇಷ ಸಂಸ್ಥೆಯ ರಚನೆ ಮಾಡಲು ಸಿಡಬ್ಲ್ಯೂಸಿ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.