ಹೊಸ ಸಂಸತ್ನಲ್ಲಿ ಮುಗಿಯಿತು ಪಟ್ಟಾಭಿಷೇಕ.. ದಾರ್ಷ್ಟ್ಯದ ರಾಜನೀಗ ಜನರ ದನಿಯನ್ನು ಬೀದಿ ಬೀದಿಗಳಲ್ಲಿ ಹತ್ತಿಕ್ಕುತ್ತಿದ್ದಾನೆ – ರಾಹುಲ್ ಗಾಂಧಿ
ಹೊಸ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ಮೋದಿಯ ಪಟ್ಟಾಭೀಷೇಕದಂತೆ ಇತ್ತು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ,ಇದಾದ ಸ್ವಲ್ಪ ಹೊತ್ತಿಗೆ ಮತ್ತೊಂದು ಟ್ವೀಟ್ ಮಾಡಿದರು.ಮುಗಿಯಿತು ಪಟ್ಟಾಭಿಷೇಕ.. ದಾರ್ಷ್ಟ್ಯ ರಾಜನೀಗ ಜನರ ದನಿಯನ್ನು ಹತ್ತಿಕ್ಕುತ್ತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಏಳು ಎಫ್ಐಆರ್ ದಾಖಲಾದರೂ, ದೆಹಲಿ ಪೊಲೀಸರು ಆತನನ್ನು ಬಂಧಿಸುವುದು ಇರಲಿ.. ಕನಿಷ್ಠ ವಿಚಾರಣೆಯನ್ನು ಕೂಡ ನಡೆಸಿಲ್ಲ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮೌನವಹಿಸುವ ಮೂಲಕ ತಮ್ಮ ಸಂಸದನ ಬೆಂಬಲಕ್ಕೆ ನಿಂತಿದೆ. ದೇಶಕ್ಕಾಗಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಬೆವರು ಹರಿಸಿ ಕೀರ್ತಿ ಪತಾಕೆಗಳನ್ನು ಹಾರಿಸಿದ್ದ ಕುಸ್ತಿಪಟುಗಳನ್ನು ಬೀದಿಗೆ ತಳ್ಳಿದೆ. ಹೆಜ್ಜೆ ಹೆಜ್ಜೆಗೂ ಅವರಿಗೆ ಅಪಮಾನ ಮಾಡುತ್ತಿದೆ. ಅವರ ದನಿ, ಅಳಲು, ಆಕ್ರೋಶ ಅರಣ್ಯರೋದನವಾಗಿದೆ.
ನೂತನ ಸಂಸತ್ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅದೇ ಆರೋಪಿ ಬ್ರಿಜ್ಭೂಷಣ್ ಸಿಂಗ್ ರಾಜರೋಷವಾಗಿ ಪಾಲ್ಗೊಂಡಿದ್ದರು. ದಿಉ ಕುಸ್ತಿಪಟುಗಳ ಸಿಟ್ಟನ್ನು ರಟ್ಟೆಗೆ ತರಿಸಿತ್ತು. ನೂತನ ಸಂಸತ್ಗೆ ಮುತ್ತಿಗೆ ಹಾಕಲು ತೆರಳುತ್ತಿದ್ದವರನ್ನು ದೆಹಲಿ ಪೊಲೀಸರು ಅಮಾನವೀಯವಾಗಿ ಹತ್ತಿಕ್ಕಿದ್ದರು. ಒಲಿಂಪಿಕ್ ಕ್ರೀಡಾಪಟುಗಳು ಎಂಬುದನ್ನು ಕೂಡ ನೋಡದೇ ಅತ್ಯಂತ ದಾರುಣವಾಗಿ ಎಳೆದಾಡಿದ ದೆಹಲಿ ಪೊಲೀಸರು, ಬಲವಂತವಾಗಿ ಪೊಲೀಸ್ ಜೀಪ್ನಲ್ಲಿ ಹಾಕಿದ್ದರು.
ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಆಕ್ರೋಶ ಭುಗಿಲೆದ್ದಿತು. ಈ ಸಮಯದಲ್ಲಿಯೇ ಎಐಸಿಸಿ ಅಗ್ರನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಹೊಸ ಸಂಸತ್ನಲ್ಲಿ ಮುಗಿಯಿತು ಪಟ್ಟಾಭಿಷೇಕ.. ದಾರ್ಷ್ಟ್ಯದ ರಾಜನೀಗ ಜನರ ದನಿಯನ್ನು ಬೀದಿ ಬೀದಿಗಳಲ್ಲಿ ಹತ್ತಿಕ್ಕುತ್ತಿದ್ದಾನೆ ಎಂದು ಆಕ್ರೋಶ ಹೊರಹಾಕಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು,
ಮೋದೀಜಿ ಗಮನಿಸಿ,..ಪ್ರಜಾಪ್ರಭುತ್ವ ಎನ್ನುವುದು ಜನರ ದನಿ.. ಕಟ್ಟಡಗಳಲ್ಲ.. ಮೊದಲು ಹೊಸ ಸಂಸತ್ ಕಟ್ಟಡ ಉದ್ಘಾಟನೆ ಮಾಡುವ ರಾಷ್ಟ್ರಪತಿಗಳ ಹಕ್ಕುಗಳನ್ನೇ ಕಿತ್ತುಕೊಂಡಿರಿ.. ನಂತರ ದೆಹಲಿಯ ಬೀದಿಗಳಲ್ಲಿ ಮಹಿಳಾ ಕ್ರೀಡಾಪಟುಗಳನ್ನು ನಿಮ್ಮ ಬಲದ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡಿದಿರಿ, ಅವರ ಮೇಲೆ ಹಲ್ಲೆ ಮಾಡಿಸಿದಿರಿ.. ಆರ್ಎಸ್ಎಸ್ ಮತ್ತು ಬಿಜೆಪಿಯವರು ದೇಶದ ಮುಂದೆ ಪದೇ ಪದೇ ಮೂರು ಸುಳ್ಳುಗಳನ್ನು ಹೇಳುತ್ತಿದ್ದಾರೆ. 1 ಪ್ರಜಾಪ್ರಭುತ್ವ. 2 ರಾಷ್ಟ್ರೀಯತೆ. 3 ಬೇಟಿ ಬಚಾವೋ.. ಆದರೇ, ಈ ಮೂರು ಕೂಡ ದೇಶದಲ್ಲಿ ಅಸ್ತಿತ್ವದಲ್ಲಿ ಇಲ್ಲ.
ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.