ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮರು ದಿನವೇ ರಾಜ್ಯ ಗುತ್ತಿಗೆದಾರರ ಸಂಘ ಬಿಜೆಪಿ ಸರ್ಕಾರದ ಪ್ರಮುಖ ಮತ್ತು ಪ್ರಭಾವಿ ಮಂತ್ರಿಗಳ ವಿರುದ್ಧ ದಿಢೀರ್ ಸುದ್ದಿಗೋಷ್ಠಿ ನಡೆಸಿ ಭ್ರಷ್ಟಾಚಾರದ ಸ್ಫೋಟಕ ಮತ್ತು ಆರೋಪ ಮಾಡಿದೆ.
`ಆರೋಗ್ಯ ಸಚಿವ ಸುಧಾಕರ್ ಅವರೇ ಲಂಚ ತೆಗೆದುಕೊಳ್ಳುತ್ತಾರೆ. ಪ್ರತಿ ಟೆಂಡರ್ಗೆ ಆರೋಗ್ಯ ಸಚಿವರೇ ಹಣ ಪಡೆಯುತ್ತಾರೆ‘ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ.
`ಟೆಂಡರ್ ಅನುಮೋದನೆಗೆ ಶೇಕಡಾ 5ರಷ್ಟು ಕಮಿಷನ್ ಕೊಡಲೇಬೇಕು. ಸಚಿವರಿಂದಲೇ ಭ್ರಷ್ಟಾಚಾರ ಶುರು ಆಗಿದೆ. ಟೆಂಡರ್ಗಳನ್ನು ಅಡಗಿಸಿಡಲಾಗುತ್ತದೆ. ಇಂಥವರಿಗೆ ಟೆಂಡರ್ ಕೊಡ್ಬೇಕು ಅಂತ ಮಂತ್ರಿಗಳು ಪತ್ರ ಕೊಡ್ತಾರೆ. ಸುಧಾಕರ್ ಅವರಿಗೆ ಶೇಕಡಾ 5ರಷ್ಟು ಕಮಿಷನ್ ಕೊಟ್ಟರೆ ಟೆಂಡರ್ಗೆ ಅನುಮೋದನೆ ಕೊಡ್ತಾರೆ, ಇಲ್ಲಾಂದ್ರೆ ಟೆಂಡರ್ ಕೊಡಲ್ಲ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಲ್ಲಿ ಮಾತಾಡಿದ ಅವರು, `ಆರೋಗ್ಯ ಇಲಾಖೆಯಲ್ಲಿ ಶೇಕಡಾ 60ರಷ್ಟು ಕಾಮಗಾರಿಯನ್ನು ಸಚಿವ ಸುಧಾಕರ್ ಅವರ ಕುಟುಂಬದವರೇ ಮಾಡ್ತಾರೆ. ಸುಧಾಕರ್ ಅವರ ಹೆಂಡತಿ ಹೆಸರಲ್ಲಿ ಚೆಕ್ಗಳನ್ನು ಕೊಡಲಾಗಿದೆ. ಭ್ರಷ್ಟಾಚಾರದ ಬಗ್ಗೆ ಆಡಿಯೋ ರೆಕಾರ್ಡ್, ಹಣ ಕೊಟ್ಟಿರುವ ದಾಖಲೆಗಳೂ ಇವೆ. ಸುಧಾಕರ್ ಮಾನನಷ್ಟ ಮೊಕದ್ದಮೆ ಹೂಡಿದ್ರೆ ಆ ಕೇಸ್ನ್ನು ನಾವು ಎದುರಿಸ್ತೀವಿ’ ಎಂದು ಬೆಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಕೆಂಪಣ್ಣ ಹೇಳಿದ್ದಾರೆ.
ವೈದ್ಯರಾಗಿರುವ ಶಾಸಕರ ಮಗನ ಹೆಸರಲ್ಲಿ ಟೆಂಡರ್ ನೀಡಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ.