ADVERTISEMENT
ರಾತ್ರಿ 11 ಗಂಟೆಯ ಬಳಿಕ ನಡೆದುಕೊಂಡು ಹೋಗುತ್ತಿದ್ದರು ಎಂಬ ಕಾರಣಕ್ಕೆ ಗಂಡ-ಹೆಂಡತಿಗೆ 1 ಸಾವಿರ ರೂಪಾಯಿ ದಂಡ ಹಾಕಿದ್ದ ಬೆಂಗಳೂರಿನ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಹೆಡ್ಕಾನ್ಸ್ಸ್ಟೇಬಲ್ ರಾಜೇಶ್ ಮತ್ತು ಕಾನ್ಸ್ಸ್ಟೇಬಲ್ ನಾಗೇಶ್ ಅವರನ್ನು ಅಮಾನತು ಮಾಡಿರುವ ಈಶಾನ್ಯ ವಲಯದ ಎಸಿಪಿ ಅನೂಪ್ ಶೆಟ್ಟಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
ಪೊಲೀಸರು ಕೊಟ್ಟ ಕಿರುಕುಳದ ಬಗ್ಗೆ ಕಾರ್ತಿಕ್ ಪತ್ರಿ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದರು.
ರಾತ್ರಿ 12.30ಕ್ಕೆ ನಾವು ನಮ್ಮ ಸ್ನೇಹಿತನ ಹುಟ್ಟುಹಬ್ಬದ ಕೇಕ್ ಕಟ್ ಮಾಡಿ ಅಪಾರ್ಟ್ಮೆಂಟ್ಗೆ (ಮಾನ್ಯತಾ ಟೆಕ್ ಪಾರ್ಕ್ ಬಳಿ) ವಾಪಸ್ ಬರುತ್ತಿದ್ದಾಗ ಮನೆಯ ಬಳಿ ನಮ್ಮನ್ನು ತಡೆದ ಪೊಲೀಸರು ವಿಚಾರಣೆ ನಡೆಸಿದರು. ನಮ್ಮ ಐಡಿ ಕಾರ್ಡ್ ತೋರಿಸುವಂತೆ ಹೇಳಿ ಫೋನ್ ಕಿತ್ಕೊಂಡ್ರು. ಅದೃಷ್ಟವಶಾತ್ ನಮ್ಮ ಬಳಿ ಆಧಾರ್ ಕಾರ್ಡ್ ಇತ್ತು. ನಮ್ಮಿಬ್ಬರ ಸಂಬಂಧ, ನಮ್ಮ ಕೆಲಸ ಸ್ಥಳ, ನಮ್ಮ ತಂದೆ-ತಾಯಿ ಬಗ್ಗೆಯೆಲ್ಲ ಕೇಳಿದರು.
ಆ ಇಬ್ಬರು ಪೊಲೀಸರಲ್ಲಿ ಒಬ್ಬರು ಚಲನ್ ತೆಗೆದುಕೊಂಡು ಆಧಾರ್ ಕಾರ್ಡ್ ನಂಬರ್ನ್ನು ಬರೆದುಕೊಂಡರು. ರಶೀದಿ ಯಾಕೆ ಬರೆಯುತ್ತಿದ್ದೀರಿ ಎಂದು ಕೇಳಿದಾಗ ರಾತ್ರಿ 11 ಗಂಟೆ ಆದ್ಮೇಲೆ ಬೀದಿಗಳಲ್ಲಿ ಯಾರೂ ಓಡಾಡುವಂತಿಲ್ಲ, ಅದಕ್ಕೆ ದಂಡ ಹಾಕ್ತಿದ್ದೀವಿ ಎಂದು ಆರಂಭದಲ್ಲಿ ಮೂರು ಸಾವಿರ ರೂಪಾಯಿ ದಂಡ ಕಟ್ಟುವಂತೆ ಹೇಳಿದರು, ಕೊನೆಗೆ 1 ಸಾವಿರ ರೂಪಾಯಿ ದಂಡ ಕಟ್ಟಿಸಿಕೊಂಡರು.
ಮತ್ತೆ ಮತ್ತೆ ರೌಂಡ್ ಹೊಡೆಯುತ್ತೇವೆ, ಒಂದು ವೇಳೆ ನೀವು ಮತ್ತೆ ತಿರುಗಾಡಿದ್ದು ಕಂಡುಬಂದ್ರೆ ಬಲವಾದ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದರು
ಎಂದು ಪತ್ರಿ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು.
ಈ ದೂರು ಆಧರಿಸಿ ಇಬ್ಬರೂ ಪೊಲೀಸರನ್ನು ಅಮಾನತು ಮಾಡಲಾಗಿದೆ.
ತನ್ನ ಪೊಲೀಸರ ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ಪೊಲೀಸ್ ಹೇಳಿದೆ.
ADVERTISEMENT