ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳದ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಬಸ್ಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಸರ್ಕಾರದ ಆದೇಶವನ್ನು ನಾವು ಕಟ್ಟನಿಟ್ಟಾಗಿ ಪಾಲನೆ ಮಾಡುತ್ತೇವೆ ಎಂದರು.
ಬುಧವಾರ ಕೇಂದ್ರ ಆರೋಗ್ಯ ಸಚಿವರ ಜೊತೆ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆದಿದೆ. ಸಭೆಯಲ್ಲಿ ಸಲಹೆ ಪಡೆದುಕೊಂಡಿದ್ದಾರೆ. ಅದರಂತೆ ಮುಜರಾಯಿ ಇಲಾಖೆ ಹಾಗೂ ಸಾರಿಗೆ ನಿಗಮಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರೂ ಮಾಸ್ಕ್ ಧರಿಸಿ ಪ್ರಯಾಣಿಸಿ ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಇಂದು ಕೋವಿಡ್ ಸೋಂಕಿಗೆ ಓರ್ವ ವ್ಯಕ್ತಿ ಮೃತಪಟ್ಟಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಆದರೆ ಆತ ಹೃದ್ರೋಗಿ ಮತ್ತು ಕ್ಷಯರೋಗ ಪೀಡಿತನಾಗಿದ್ದ. ಆತಂಕಕ್ಕೆ ಒಳಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಸಚಿವರು ಹೇಳಿಕೆ ನೀಡಿದ್ದಾರೆ.