ಮುಸ್ಲಿಂಮರ ವಿರುದ್ಧ ಟೀಕೆಗಳನ್ನು ಮಾಡಿದ ಕೇರಳದ ಮಾಜಿ ಶಾಸಕ, ಹಿರಿಯ ರಾಜಕಾರಣಿ ಪಿ. ಸಿ. ಜಾರ್ಜ್ರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ತಿರುವನಂತಪುರಂ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ತಿರುವನಂತಪುರಂನಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಪಿ. ಸಿ. ಜಾರ್ಜ್ ಭಾಷಣ ಮಾಡಿದ್ದರು. ಮುಸ್ಲಿಂಮರು ನಡೆಸುವ ರೆಸ್ಟೋರೆಂಟ್ಗಳಿಗೆ ಮುಸ್ಲಿಂಮೇತರರು ಭೇಟಿ ನೀಡಬಾರದು ಎಂದು ಭಾಷಣದಲ್ಲಿ ಹೇಳುವ ಮೂಲಕ ವಿವಾದ ಎಬ್ಬಿಸಿದ್ದರು.
ಕೇರಳದ ಪೊಲೀಸ್ ಮಹಾನಿರ್ದೇಶಕ ಅನಿಲ್ ಕಾಂತ್ ಸೂಚನೆಯಂತೆ ತಿರುವನಂತಪುರ ಪೊಲೀಸರು ಪಿ. ಸಿ. ಜಾರ್ಜ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದರು. ಕೊಟ್ಟಾಯಂ ಜಿಲ್ಲೆಯಲ್ಲಿರುವ ನಿವಾಸದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಪಿ. ಸಿ. ಜಾರ್ಜ್ ಕೇರಳದ ಹಿರಿಯ ರಾಜಕೀಯ ನಾಯಕ 7 ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪೂಂಜರ್ ವಿಧಾನಸಭಾ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದರು. ಕೇರಳ ವಿಧಾನಸಭೆ ಚೀಫ್ ವಿಪ್ ಕೂಡಾ ಆಗಿದ್ದರು. 30 ವರ್ಷಕ್ಕೂ ಹೆಚ್ಚು ಕಾಲ ಕೇರಳದಲ್ಲಿ ರಾಜಕೀಯ ನಡೆಸಿದ್ದಾರೆ.
ಪಿ. ಸಿ. ಜಾರ್ಜ್ ವಿರುದ್ಧ ಐಪಿಸಿ ಸೆಕ್ಷನ್ 153-ಎ (ಎರಡು ಗುಂಪುಗಳ ನಡುವೆ ದ್ವೇಷ ಹರಡುವುದು) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಕೇರಳದ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಸಿಪಿಐ(ಎಂ) ಮಾಜಿ ಶಾಸಕರ ಹೇಳಿಕೆ ಖಂಡಿಸಿವೆ.
ಪಿಸಿ ಜಾರ್ಜ್ ಬೆಂಬಲಿಗರು ಠಾಣೆ ಮುಂದೆ ಜಮಾವಣೆಯಾಗುವ ನಿರೀಕ್ಷೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.