ಇಡೀ ದೇಶದಲ್ಲಿಯೇ ಅತಿ ಕಡಿಮೆ ವೇತನ ಮತ್ತು ಭತ್ಯೆ ಪಡೆಯುತ್ತಿದ್ದ ದೆಹಲಿ ವಿಧಾನಸಭೆ ಸದಸ್ಯರು ಇಂದು ತಮ್ಮ ವೇತನ ಮತ್ತು ಭತ್ಯೆಯನ್ನು 66 ಪ್ರತಿಶತದಷ್ಟು ಹೆಚ್ಚಿಸಿಕೊಂಡು ಮಸೂದೆ ಪಾಸ್ ಮಾಡಿದ್ದಾರೆ.
5 ಪ್ರತ್ಯೇಕ ಬಿಲ್ಗಳಾದ ಸಚಿವರ ವೇತನ ಹೆಚ್ಚಳ, ಶಾಸಕರ ವೇತನ ಹೆಚ್ಚಳ, ಮುಖ್ಯ ಸಚೇತಕರ ವೇತನ ಹೆಚ್ಚಳ, ಸಭಾದ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರ ವೇತನ ಹೆಚ್ಚಳದ ಮಸೂದೆಗಳನ್ನು ಇಂದು ದೆಹಲಿ ವಿಧಾನಸಭೆ ಪಾಸ್ ಮಾಡಿಕೊಂಡಿದೆ.
70 ಶಾಸಕರ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷವೇ ಬಹುತೇಕ 62 ಸ್ಥಾನಗಳನ್ನು ಹೊಂದಿದೆ. ಎನ್ಡಿಎ ಮೈತ್ರಿಕೂಟ ಉಳಿದ 8 ಸ್ಥಾನಗಳನ್ನು ಹೊಂದಿದೆ. ಆ ಮೂಲಕ ಶಾಸಕರ ವೇತನ ಮತ್ತು ಭತ್ಯೆ ಹೆಚ್ಚಳದ ಮಸೂದೆ ಯಾವುದೇ ಶಾಸಕರ ವಿರೋಧವಿಲ್ಲದೇ ಪಾಸ್ ಆಗಿದೆ.
ಈ ಮೊದಲು ಪ್ರತಿ ತಿಂಗಳು 12 ಸಾವಿರ ಸಂಬಳ ಪಡೆಯುತ್ತಿದ್ದ ಶಾಸಕರು ಇದೀಗ 30 ಸಾವಿರ ಸಂಬಳ ಪಡೆಯುತ್ತಿದ್ದಾರೆ. ಆ ಮೂಲಕ ಶಾಸಕ ಸಂಬಳ ಹಾಗೂ ಭತ್ಯೆ ಸೇರಿ ಈ ಮೊದಲು ಪ್ರತಿ ತಿಂಗಳು 54 ಸಾವಿರ ಪಡೆಯುತ್ತಿದ್ದರು. ಇದೀಗ, ಇದು ಶೇ.66 ರಷ್ಟು ಹೆಚ್ಚಳಗೊಂಡು 90 ಸಾವಿರ ಸಂಬಳ ಮತ್ತು ಭತ್ಯೆಗೆ ಬಂದು ನಿಂತಿದೆ.
ಮುಖ್ಯಮಂತ್ರಿ, ಸಚಿವರು, ಸಭಾಧ್ಯಕ್ಷರು, ಪ್ರತಿಪಕ್ಷ ನಾಯಕರು ಈ ಮೊದಲು ಪ್ರತಿ ತಿಂಗಳು 72 ಸಾವಿರ ಸಂಭಳ ಮತ್ತು ಭತ್ಯೆ ಪಡೆಯುತ್ತಿದ್ದರು. ಇದೀಗ, ಇದು 1 ಲಕ್ಷ 70 ಸಾವಿರ ರೂ.ಗಳಿಗೆ ಬಂದು ನಿಂತಿದೆ.
ಆ ಮೂಲಕ 11 ವರ್ಷಗಳ ಬಳಿಕ ದೆಹಲಿ ವಿಧಾನಸಭೆ ಸದಸ್ಯರು ತಮ್ಮ ಸಂಬಳ ಮತ್ತು ಭತ್ಯೆ ಹೆಚ್ಚಿಸಿಕೊಂಡಿದ್ದಾರೆ. 2015 ರಲ್ಲಿ ದೆಹಲಿ ವಿಧಾನಸಭೆ ಸದಸ್ಯರ ಸಂಬಳವನ್ನು 2.5 ಲಕ್ಷ ಹೆಚ್ಚಳ ಮಾಡಿಕೊಳ್ಳಲು ಕೇಂದ್ರ ಗೃಹ ಇಲಾಖೆಯ ಅನುಮತಿ ಕೇಳಿತ್ತು. ಆದರೆ, ಇದಕ್ಕೆ ನಿರಾಕರಿಸಿದ್ದ ಗೃಹ ಇಲಾಖೆ ಶೇ 66 ಪ್ರತಿಶತದಷ್ಟು ಹೆಚ್ಚಳ ಮಾಡಿಕೊಳ್ಳಲು ಅನುಮತಿ ನೀಡಿತ್ತು.
ಬೆಲೆ ಏರಿಕೆ ಮತ್ತು ಶಾಸಕರ ಮಾಡಿರುವ ಕೆಲಸಗಳ ಮೇಲೆ ವೇತನ ಹೆಚ್ಚಿಸುವಂತೆ ಶಾಸಕರು ಸರ್ಕಾರಕ್ಕೆ ಒತ್ತಾಯಿಸಿದ್ದರು.
ಈ ಬಗ್ಗೆ ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಆರ್ಥಿಕ ಸಚಿವರಾದ ಮನೀಶ್ ಶಿಸೋಡಿಯಾ ಅವರು ಮಾತನಾಡಿ, ಪ್ರತಿಭಾವಂತರನ್ನು ರಾಜಕೀಯಕ್ಕೆ ಆಹ್ವಾನಿಸಲು ಇಂತಹ ಪ್ರತಿಫಲಗಳು ಇರಬೇಕು ಎಂದಿದ್ದಾರೆ.
ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ಶಾಸಕ ರಾಮ್ವೀರ್ ಸಿಂಗ್ ಬಿಧುರಿ ಅವರೂ ಈ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದೇ ವರ್ಷದ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿಯೂ ವಿಧಾನಸಭೆಯ ಸದಸ್ಯರ ಸಂಬಳ ಮತ್ತು ಭತ್ಯೆ ಹೆಚ್ಚಿಸಿಕೊಳ್ಳಲಾಗಿತ್ತು. ಶಾಸಕರ ಸಂಬಳವನ್ನು ಶೇ.60 ರಷ್ಟು ಹಾಗೂ ಮುಖ್ಯಮಂತ್ರಿ,ಸಚಿವರು, ಸಭಾಧ್ಯಕ್ಷರು,ವಿರೋಧ ಪಕ್ಷದ ನಾಯಕರು ವೇತನ ಮತ್ತು ಭತ್ಯೆಯನ್ನು ಶೇ.50 ರಷ್ಟು ಹೆಚ್ಚಿಸಿಕೊಳ್ಳಲಾಗಿತ್ತು.
ಇನ್ನು, ದೇಶದಲ್ಲಿಯೇ ತೆಲಂಗಾಣ ವಿಧಾನಸಭೆಯ ಸದಸ್ಯರು ಅತಿ ಹೆಚ್ಚು 2.5 ಲಕ್ಷ ಸಂಬಳ ಮತ್ತು ವೇತನ ಪಡೆಯುತ್ತಿದ್ದಾರೆ. ಅನಂತರದಲ್ಲಿ, ಮಹಾರಾಷ್ಟ್ರದಲ್ಲಿ 2.32 ಲಕ್ಷ, ಉತ್ತರ ಪ್ರದೇಶದಲ್ಲಿ 1.87 ಲಕ್ಷ, ಉತ್ತರಾಖಾಂಡ್ನಲ್ಲಿ 1.6 ಲಕ್ಷ, ಆಂಧ್ರಪ್ರದೇಶದಲ್ಲಿ 1.3 ಲಕ್ಷ ಹಾಗೂ ಗೋವಾದಲ್ಲಿ 1.17 ಲಕ್ಷದಂತೆ ಪ್ರತಿ ತಿಂಗಳು ಸದಸ್ಯರು ವೇತನ ಪಡೆಯುತ್ತಿದ್ದಾರೆ.