ಲೇಖಕರು: ಬಸವರಾಜ ಕಹಳೆ
ದೇವಾಲಯಗಳು ಮಾಟದ ಮನೆಗಳು
ಧರ್ಮದ ಗುರುಗಳು ಮಾಂತ್ರಿಕರು
– ಡಾ. ಸಿದ್ದಲಿಂಗಯ್ಯ
ಇಂಥ ಮಾಂತ್ರಿಕ, ಮಾಯಾವಿಗಳ ಪ್ರಾಣ ದೂರದ ದ್ವೀಪದ ಮಧ್ಯೆ ಇರೋ ಗುಹೆಯಲ್ಲಿ ಇರುತ್ತದೆ. ಹೀಗೆ ಶುರುವಾಗುವ ಆರ್ಎಸ್ಎಸ್ ಆಳ ಮತ್ತು ಅಗಲ ಎನ್ನುವ ದೇವನೂರು ಮಹಾದೇವರ ಪುಸ್ತಕ ಏಕೆ ಓದಬೇಕು ಗೊತ್ತಾ? ನಮ್ಮ ಭವಿಷ್ಯಕ್ಕಾಗಿ, ನಮ್ಮ ಉಳಿವಿಗಾಗಿ. ಅಷ್ಟೇ ಏಕೆ? ಛಿದ್ರಗೊಳಿಸೋ ದೆವ್ವವನ್ನು ಮೆಟ್ಟಿಸಿಕೊಂಡು ನಮ್ಮದೇ ಮನೆಯ ಹುಡುಗರ, ನಮ್ಮದೇ ಸಮಾಜ, ಸಮುದಾಯಗಳ ಮಾನಸಿಕ ಆರೋಗ್ಯ ಕಾಪಾಡುವುದಕ್ಕಾಗಿ.
ಬಹುಮುಖ್ಯವಾಗಿ ನಮ್ಮ ಸುತ್ತಲಿನ ಬಹುಪಾಲು ಜನರನ್ನ, ಸಮಾಜಗಳನ್ನು, ಸಮುದಾಯಗಳನ್ನು, ತನ್ನ ವಶಕ್ಕೆ ಪಡೆದಂತೆ ಭ್ರಮಿಸುತ್ತಿರುವ ಮಾಂತ್ರಿಕ, ಮಾಯಾವಿಯ ಅಸಲಿಯತ್ತು ಅರ್ಥ ಮಾಡಿಕೊಳ್ಳಲು ಈ ಪುಸ್ತಕ ಓದಬೇಕು. ಅಸ್ವಸ್ಥಗೊಂಡ ನಮ್ಮ ಸಮಾಜಕ್ಕೆ ಔಷಧಿ ನೀಡಬೇಕಾದ ತುರ್ತು ಪರಿಸ್ಥಿತಿ ಎದುರಾದ ಸಂದರ್ಭವಿದು.
ಹಾಗಾಗಿಯೇ ಆರ್ಎಸ್ಎಸ್ ಆಳ ಮತ್ತು ಅಗಲ ಎನ್ನುವ ಯೂಸರ್ ಗೈಡ್ ಮೂಲಕ ಮಾಯಾವಿ, ಮಾಂತ್ರಿಕರ ವಶದಲ್ಲಿ ಬಿದ್ದು ಒದ್ದಾಡುತ್ತಿರುವ ಮಂದಿಯ ಮಾನಸಿಕ ಆರೋಗ್ಯಕ್ಕೆ ಪ್ರಥಮ ಚಿಕಿತ್ಸೆ ನೀಡುವ ಕೆಲಸ ಮಾಡಬೇಕಿದೆ. ಯಾಕಂದ್ರೆ, ಇಲ್ಲಿ ಬಹುಬೇಗ ಮಾಂತ್ರಿಕರ ವಶೀಕರಣಕ್ಕೆ ಬಲಿಯಾದವರು ಡಾ. ಸಿದ್ದಲಿಂಗಯ್ಯನವರ
ದೇವಾಲಯಗಳು ಮಾಟದ ಮನೆಗಳು
ಧರ್ಮದ ಗುರುಗಳು ಮಾಂತ್ರಿಕರು
ಪುಣ್ಯಕ್ಷೇತ್ರಗಳೆಲ್ಲವೂ ರೋಗಗಳ ನೆಲೆ
ಮುಗ್ಧರು, ಮೂಢರು ಯಾತ್ರಿಕರು
ಅನ್ನೋ ಕೊನೆಯ ಸಾಲಿನಲ್ಲಿ ಬರುವ ನಮ್ಮದೇ ಕರುಳ ಬಳ್ಳಿಯ ನೆಂಟರಿಷ್ಟರು.
ಮುಖ್ಯವಾಗಿ ಈ ಪುಸ್ತಕ ಓದುವ ಮುನ್ನ ಮೊದಲ ಅಧ್ಯಾಯವನ್ನು ಒಂದಲ್ಲ, ಎರಡಲ್ಲ, ಮೂರು ಸಲ ಓದಿದರೂ ತಪ್ಪಾಗೋದಿಲ್ಲ. ಯಾಕಂದ್ರೆ, ಆರ್ಎಸ್ಎಸ್ ಪ್ರಾಣ ಎಲ್ಲೆಲ್ಲಿದೆ? ಅನ್ನುವ ಮೂಲ ಮರ್ಮವೇ ಅರಿಯದೇ ಮಾಂತ್ರಿಕ ಮಾಮನ ಮರ್ಮವೂ ಅರಿಯೋದಿಲ್ಲ.
ಆರ್ಎಸ್ಎಸ್ ಪಿತಾಮಹಾ ಗೋಲ್ವಾಲ್ಕರ್ ಪ್ರಕಾರ ದೇವರು ಎಂದರೇ ಬ್ರಾಹ್ಮಣನ ಆದೇಶಕ್ಕೆ, ಕ್ಷತ್ರಿಯನ ಆಳ್ವಿಕೆಗೆ, ವೈಶ್ಯನ ವ್ಯಾಪಾರಕ್ಕೆ ತಕ್ಕಂತೆ ಶಿರ ಬಗ್ಗಿಸಿ ಸರ್ವಕಾಲಕ್ಕೂ ಸೇವೆಯನ್ನಷ್ಟೇ ಮಾಡುವ ಜೀತ ಸಂಸ್ಕೃತಿಯ ಶೂದ್ರ ವ್ಯವಸ್ಥೆಯನ್ನು ಪರಿಪಾಲಿಸೋ ಜನಾಂಗ. ಅಂದರೇ ಚಾತುವರ್ಣ ವ್ಯವಸ್ಥೆಯನ್ನು ಚಾಚೂತಪ್ಪದೇ ಪಾಲಿಸುವುದೇ ದೇವರು ಅಂತ.
ಇನ್ನು, ಈ ಮಾಂತ್ರಿಕರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ಬದಲಿಸಲೇಬೇಕಾದ ಸಂವಿಧಾನ. ಅಷ್ಟೇ ಅಲ್ಲ, ಗೋಲ್ವಾಲ್ಕರ್ ಅನ್ನೋ ಪುಣಾತ್ಮರ ಪ್ರಕಾರ ಭಾರತದ ಸಂವಿಧಾನ ತಿರುಪೆ ಎತ್ತಿ ತಂದ ಊಟವೆಂಬಂತೆ ತಮ್ಮ ಚಿಂತನಗಂಗಾ ಮಹಾಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿಯೂ ಮಹಾದೇವರ ಪುಸ್ತಕದಲ್ಲಿ ಕಾಣಬಹುದು.
ವಿಶ್ವೇಶ್ವರಭಟ್ಟರು ನುಡಿದಂತೆ ನಿಜಕ್ಕೂ ಮಣ್ಣಂಗಟ್ಟಿ ಅನ್ನೋದು ಇದರಲ್ಲಿದೆಯೇ? ಅಂತ ನೋಡಿದ್ರೆ ಅಲ್ಲಿ ಕಾಣಿಸೋದು ಏನು ಗೊತ್ತಾ ಗೆಳೆಯರೇ (ಇದು ಸದ್ಯಕ್ಕೆ ನಮ್ಮ ಕಾಪಿರೈಟ್ಸ್ ವ್ಯಾಪ್ತಿಗೆ ಬರುವ ಪದವಲ್ಲ) ಹಾಗೂ ಕಸಿನ್ ಬ್ರದರ್ಸ್ ಅಂಡ್ ಸಿಸ್ಟರ್ಸ್? ಅದುವೇ ದಾಖಲೆ ಎಂಬ ಸುಳ್ಳೋ ಪಳ್ಳೋ ಹೇಳಬೇಕು ಎನ್ನುವ ಈಶ್ವರಪ್ಪನವರಂಥಾ ಬ್ರ್ಯಾಂಡುಗಳನ್ನು ಸೃಷ್ಟಿಸಿದ ಮಾಂತ್ರಿಕನ ಅಸಲಿ ದಾಖಲೆ.
ಹೀಗೆಲ್ಲಾ ದಾಖಲೆಗಳು ಮಾತಾಡುತ್ತವೆ ಅನ್ನೋ ಅಧ್ಯಾಯ ನಿಜಕ್ಕೂ ಈಶ್ವರಪ್ಪನವರಂಥಾ ಶೂದ್ರರನ್ನ ತಮಗೆ ಬೇಕಾದ ಹಾಗೆ ಬಗ್ಗಿಸಿಕೊಂಡ ರೊಬೋಟ್ ಪ್ರೋಗ್ರಾಂ ಬರೆದ ಮಾಂತ್ರಿಕ ಧೈರ್ಯ, ಸ್ಥೆರ್ಯದ ಅನಾವರಣಗೊಳಿಸುತ್ತದೆ.
ಚಾತುವರ್ಣ ನನ್ನಿಂದಲೇ ಸೃಷ್ಟಿಯಾಯಿತು ಅಂತ ಶ್ರೀಕೃಷ್ಣನೆಂಬ ಗೊಲ್ಲ ಹೇಳಿದ ಅನ್ನೋದಕ್ಕೂ ದಾಖಲೆ ಇದೆ. ಆ ದಾಖಲೆಯೇ ಭಗವದ್ಗೀತೆ. ಈ ಗೀತೆಯ ಅಸಲಿ ಕರ್ತೃ ಶಂಕರಾಚಾರ್ಯರು ಅನ್ನೋ ಸತ್ಯವನ್ನು ವಿವೇಕಾನಂದರು ಹೇಳಿದ್ದಾರೆ ಅನ್ನೋ ಸತ್ಯದ ಆಳ ಅಗಲವನ್ನೂ ನೀವು ಓದಬೇಕಿದೆ.
ದಿ ಗ್ರೇಟ್ ಪ್ರತಾಪ್ ಸಿಂಹ ಪ್ರಕಾರ ದೇವನೂರು ಮಹಾದೇವ ಅವರು ಒಂದು ಪಕ್ಷದ ಕಾರ್ಯಕರ್ತನಂತೆಯೋ, ವಕ್ತಾರನಂತೆಯೋ ಇಲ್ಲಿ ಈ ಪುಸ್ತಕ ಬರೆದಿಲ್ಲ. ಇಲ್ಲಿ, ಇಂದಿರಾ ಗಾಂಧಿಯನ್ನೂ ವಿರ್ಮಶಿಸಿದ್ದಾರೆ. ಇಲ್ಲಿ, ಜಯಪ್ರಕಾಶ್ ನಾರಾಯಣರಿಗೆ ಮೋಸ ಮಾಡಿದ, ದ್ವಿಸದಸ್ಯತ್ವ ಹೊಂದಿದ್ದ, ಎರಡು ನಾಲಿಗೆಯ ನಾಯಕರ ಬಗ್ಗೆಯೂ ವಿರ್ಮಶಿಸಿದ್ದಾರೆ. ಆರ್ಎಸ್ಎಸ್ ಸಂಘಟನೆಯ ಟ್ರೆöÊನಿಂಗ್ ಎಂದರೇ ಆದೇಶ ಪಾಲಿಸೋ ರೋಬೋಟ್ಗಳ ತಯಾರಿಯಷ್ಟೇ. ವಿವೇಚನೆಗೆ, ಆಯ್ಕೆಗೆ ಇಲ್ಲಿ ಅವಕಾಶಗಳೇ ಇರೋದಿಲ್ಲ ಅನ್ನೋದನ್ನ ಖುದ್ದು ಗೋಲ್ವಾಲ್ಕರ್ ಬಾಯ್ಬಿಟ್ಟ ಸಾಕ್ಷ್ಯವೂ ಇದೆ.
ಹಿಟ್ಲರ್ನಂತೆ ಇಲ್ಲೂ ಕೂಡ ಆರ್ಯನ್ ತಳಿ ವಿಜ್ಞಾನದ ಬಗ್ಗೆ ಅವನನ್ನೂ ಮೀರಿಸಿ ಮಾತಾಡಿ ವಿವಾದಕ್ಕೆ ಗುರಿಯಾದ ಗೋಲ್ವಾಲ್ಕರ್ ಜಾಣತನದ ವಿರಾಟ್ ದರ್ಶನವನ್ನೂ ಕಾಣಬಹುದು. ಹಿಂದೂ ಧರ್ಮದಂತೆಯೇ ಬೌದ್ಧ, ಜೈನ, ಸಿಖ್, ಲಿಂಗಾಯತ ಧರ್ಮಗಳು ಧರ್ಮಗಳೇ ಅಲ್ಲ ಅನ್ನೋ ಪರಮೋಚ್ಛ ಮಾಂತ್ರಿಕ ಮರ್ಮವನ್ನೂ ಸಾರುವ ಸಂಗತಿಗಳೂ ಪುಸ್ತಕದಲ್ಲಿವೆ. ಗೋಲ್ವಾಲ್ಕರ್ರ ನಂಬೂದರಿ ಬ್ರಾಹ್ಮಣರಿಂದಲೇ ಶೂದ್ರ ಹೆಣ್ಣು ಮೊದಲ ಮಗು ಪಡೀಬೇಕು ಅನ್ನೋ ಸರ್ವಶ್ರೇಷ್ಟ ತಳಿ ವಿಜ್ಞಾನದ ಸೂತ್ರದಿಂದ ಹಿಡಿದು ಸರ್ವಜ್ಞ ಸಾಮ್ರಾಟ ಶ್ರೀ ಚಕ್ರತೀರ್ಥರ ಸಂಕರ ತತ್ವದ ವಿಚಾರಗಳನ್ನೂ ಪುಟ್ಟ ಪುಸ್ತಕ ನಾಜೂಕಾಗಿ ಹೇಳಿದೆ.
ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಸರ್ಕಾರ ಅಧಿಕೃತವಾಗಿ ದಲಿತರು ಹುಚ್ಚರು ಅನ್ನೋ ಅತ್ಯುನ್ನತ ನಿರ್ಧಾರಕ್ಕೆ ಬಂದಿರುವ ಸಂಗತಿ ಎದ್ದು ಕಾಣುತ್ತದೆ. ಆ ಸಂಗತಿ ತಿಳಿಯದೆಯೇ ಜೈ ಭೀಮ್ ಜೈ ಶ್ರೀರಾಮ್ ಅನ್ನೋ ಮಂದಿಗೆ ಆರ್ಎಸ್ಎಸ್ ಮಾಂತ್ರಿಕರ ವಶೀಕರಣದಿಂದ ಹೊರ ಬರುವ ದಾರಿಗಳನ್ನೂ ಇಲ್ಲಿ ತಿಳಿಸಲಾಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಮಾಟಗಾರರಿಂದ ತಪ್ಪಿಸಿಕೊಳ್ಳೋದಕ್ಕೆ ನಾಳೆ ಬಾ ಅನ್ನೋ ಸರಳ ಸೂತ್ರವನ್ನೂ ಇಲ್ಲಿರಿಸಲಾಗಿದೆ. ಶೂದ್ರರೊಳಗಿನ ತಾನೇ ಶ್ರೇಷ್ಟ ಎಂಬ ಮಡಿರೋಗ ಮೊದಲು ವಾಸಿಯಾಗಬೇಕು. ಅಸಲಿ ಮಾಂತ್ರಿಕನ ಎದುರೂ ತಾನೇ ನಾಯಕನೆಂಬ ಶಕುನಿತ್ವದ ಸ್ವಯಂ ಖೆಡ್ಡಕ್ಕೆ ಬೀಳಬಾರದು. ಅಲ್ಪತನಕ್ಕೆ ಬದಲಾಗಿ ವಿಶಾಲ ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನದ ಪ್ರಸ್ತಾವನೆಯ ಉಳಿವಿಗಾಗಿ, ನಿಜ ಭಾರತದ ಪ್ರಾಣವಾದ ಬಹುತ್ವವನ್ನು ಉಳಿಸುವುದಕ್ಕಾಗಿ ಎಲ್ಲರೂ ದೇವನೂರರ ಆರ್ಎಸ್ಎಸ್ ಆಳ ಮತ್ತು ಅಗಲ ಕೃತಿಯನ್ನು ಓದಲೇಬೇಕಿದೆ.
ಛಿದ್ರತೆಯೇ ದೆವ್ವ; ಐಕ್ಯತ್ವವೇ ದೈವ
– ದೇವನೂರು ಮಹಾದೇವ