ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಯಾಗಿ 64 ವರ್ಷದ ಬುಡುಕಟ್ಟು ಸಮುದಾದ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಸಿದ್ದಾರೆ. ದೆಹಲಿಯಲ್ಲಿರುವ ಸಂಸತ್ ಭವನದಲ್ಲಿ ರಾಷ್ಟ್ರಪತಿ ಚುನಾವಣೆಯ ಚುನಾವಣಾಧಿಕಾರಿಯೂ ಆಗಿರುವ ರಾಜ್ಯಸಭೆ ಕಾರ್ಯದರ್ಶಿ ಎಂ ಸಿ ಮೋದಿಯವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳಗೊಂಡಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು ಮತ್ತು ಶಾಸಕರು ಸೂಚಕರಾಗಿ ಹಾಜರಿದ್ದರು.
ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ವಿಷಯದಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತಪ್ಪು ಮಾಡಿತೇ..? ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೆಣೆದ ಬಲೆಯಲ್ಲಿ ಕಾಂಗ್ರೆಸ್ ಸಿಲುಕಿಕೊಳ್ತೇ..? ಜುಲೈ 18ಕ್ಕೂ ಮೊದಲೇ ಎಚ್ಚೆತ್ತಕೊಳ್ಳಬಹುದೇ ಕಾಂಗ್ರೆಸ್..?
ರಾಷ್ಟ್ರಪತಿ ಚುನಾವಣೆಯನ್ನು ವಿರೋಧ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನ, ಒಗ್ಗಟ್ಟಿನ, ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡವು. ಕಾಂಗ್ರೆಸ್ ದುರ್ಬಲಗೊಳ್ಳುತ್ತಿರುವುದರ ಲಾಭ ಪಡೆದ ಮಮತಾ ಬ್ಯಾನರ್ಜಿ ತಾವಾಗಿಯೇ ವಿಪಕ್ಷಗಳ ಸಭೆ ಕರೆದು ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆ ಉಸಾಬರಿಯನ್ನು ತಾವೇ ವಹಿಸಿಕೊಂಡರು. ಈ ಮೂಲಕ ವಿರೋಧ ಪಕ್ಷಗಳ ರಾಷ್ಟ್ರೀನಾಯಕಿ ನಾನೇ ಎಂಬ ರಾಷ್ಟ್ರೀಯ ಸಂದೇಶ ರವಾನಿಸುವ ಯತ್ನ ಮಾಡಿದ್ದಾರೆ. ಆದರೆ ಬುದ್ಧಿವಂತ ಎನ್ಸಿಪಿ ನಾಯಕ ಶರದ್ ಪವಾರ್ ತಾವು ಗೆಲ್ಲಲ್ಲ ಎಂದು ಗೊತ್ತಿದ್ದೇ ಚುನಾವಣೆಯಿಂದ ಹಿಂದೆ ಸರಿದರು. ಆಮೇಲೆ ಫಾರೂಕ್ ಅಬ್ದುಲ್ಲಾ ಮತ್ತು ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿಯವರ ಹೆಸರನ್ನು ಟಿಎಂಸಿ ಪ್ರಸ್ತಾಪಿಸಿತು. ಆದರೆ ಇವರಿಬ್ಬರ ಹೆಸರನ್ನೂ ಬಹಿರಂಗವಾಗಿ ಮಹಾಮೈತ್ರಿಕೂಟದ ಭಾಗವಾಗಿರುವ ಶಿವಸೇನೆಯೇ ಪ್ರಶ್ನಿಸಿತು. ಕೊನೆಗೆ ವಿಪಕ್ಷಗಳಿಗೆ ಸಿಕ್ಕಿದ್ದು 84 ವರ್ಷದ ಬಿಜೆಪಿಯ ಮಾಜಿ ನಾಯಕ ಯಶವಂತ್ ಸಿನ್ಹಾ.
ಧರ್ಮಸಂಕಟದಲ್ಲಿ ಕಾಂಗ್ರೆಸ್:
ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಪರ್ಯಾಯ ರಾಜಕಾರಣ ಮಾಡಬೇಕಾದ ಅನಿವಾರ್ಯತೆ. ಹೀಗಾಗಿ ಎನ್ಡಿಎ ವಿರೋಧಿ ಬಣದಲ್ಲಿರುವ ಆದರೆ ಯುಪಿಎಯಲ್ಲಿ ಇರದ ವಿಪಕ್ಷಗಳ ಕೈ ಜೋಡಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್ಗಿದೆ. ಒಂದು ವೇಳೆ ಆ ಒಕ್ಕೂಟಕ್ಕೆ ಕಾಂಗ್ರೆಸ್ ಬೆಂಬಲ ಕೊಡದೇ ಹೋದರೆ ಬಿಜೆಪಿ ವಿರುದ್ಧ ಹೋರಾಟಡಲು ಕಾಂಗ್ರೆಸ್ ಸಮರ್ಥವಾಗಿಲ್ಲ ಅಥವಾ ಇಚ್ಛಾಶಕ್ತಿಯೇ ಇಲ್ಲ ಎಂದು ಇತರೆ ವಿಪಕ್ಷಗಳೇ ಪ್ರಚಾರ ಮಾಡುವ ಆತಂಕ ಕಾಂಗ್ರೆಸ್ನದ್ದು.
– 2017ರವರೆಗೂ ನಡೆದ ರಾಷ್ಟ್ರಪತಿ ಚುನಾವಣೆಯವರೆಗೂ ತಾನೇ ಅಭ್ಯರ್ಥಿಯನ್ನು ಘೋಷಿಸಿ ಅಖೈರು ಮಾಡಿ ಅವರಿಗೆ ಬೆಂಬಲ ಕೊಡುವಂತೆ ಬಿಜೆಪಿಯೇತರ ಪಕ್ಷಗಳ ಬಳಿ ಕೇಳುತ್ತಿದ್ದ ಕಾಂಗ್ರೆಸ್ ಈಗ ಆ ಸ್ಥಿತಿಯಲ್ಲಿ ಇಲ್ಲ. ಪಂಚರಾಜ್ಯಗಳ ಚುನಾವಣಾ ಸೋಲು ಕಾಂಗ್ರೆಸ್ನ ಆ ನೈತಿಕ ಧಿಃಶಕ್ತಿಯನ್ನು ಮತ್ತಷ್ಟು ಕುಗ್ಗಿಸಿದೆ.
– ಎನ್ಡಿಎಯೇತರ ಆದರೆ ಯುಪಿಎಯಲ್ಲಿ ಇಲ್ಲದ ಇತರೆ ವಿರೋಧ ಪಕ್ಷಗಳ ಜೊತೆಗೆ ಈಗ ಕೈಜೋಡಿಸದೇ ಇದ್ದರೆ ದೀರ್ಘಕಾಲದ ರಾಜಕೀಯದಲ್ಲಿ ಮಿತ್ರರನ್ನು ಸಂಪಾದಿಸುವುದು ಕಷ್ಟ ಆಗಬಹುದು. ನೀವು ಅಂದು ನಮ್ಮ ಬೆಂಬಲಕ್ಕಿರಲಿಲ್ಲ ಎಂದು ತನ್ನನ್ನು ಅಣಕಿಬಹುದು ಎಂಬ ಚಿಂತೆ ಕಾಂಗ್ರೆಸ್ನದ್ದು.
– ವಿಪಕ್ಷಗಳ ಕೂಟದಿಂದ ತಾನು ಹೊರಗೆ ಬಂದು ಉಳಿದೆಲ್ಲ ವಿಪಕ್ಷಗಳು ಒಂದಾದರೆ ಆಗ ಈಗಾಗಲೇ ಸೋತು ಸುಣ್ಣಗಾಗಿರುವ ತಾನು ಏಕಾಂಗಿಯಾಗಿ ಬಿಡಬಹುದು ಎಂಬ ಆತಂಕ ಕಾಂಗ್ರೆಸ್ಗೆ ಕಾಡಿದಂತಿದೆ.
ಕಾಂಗ್ರೆಸ್ ಗೆ ಹಿನ್ನಡೆ ಏನು..?
– ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಮುಂಬರುವ ಚುನಾವಣಾ ದೃಷ್ಟಿಯಿಂದಲೂ ಮಹತ್ವದ್ದು. 2024ರ ಲೋಕಸಭಾ ಚುನಾವಣೆ, ಈ ವರ್ಷ ಗುಜರಾತ್ನಲ್ಲಿ, ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ತೆಲಂಗಾಣ, 2024ರಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಇದೆ. ಈ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯದ ಮತಗಳು ಅತ್ಯಂತ ಮುಖ್ಯ.
– ರಾಷ್ಟ್ರಪತಿ ಆಗಿ ಆಯ್ಕೆ ಆಗಲಿರುವ ದ್ರೌಪತಿ ಮುರ್ಮು ಅತೀ ಕಿರಿಯ ಮಹಿಳಾ ರಾಷ್ಟ್ರಪತಿ ಎಂಬ ಹಿರಿಮೆ ಇದೆ. ಆದರೆ ಟಿಎಂಸಿ ನೇತೃತ್ವದಲ್ಲಿ ಆಯ್ಕೆಯಾದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ 84 ವರ್ಷ. ನಿವೃತ್ತ ರಾಜಕಾರಣದಲ್ಲಿರುವ ಸಿನ್ಹಾ ಅವರನ್ನು ಕಾಂಗ್ರೆಸ್ ಅನಿವಾರ್ಯತೆಗೆ ಕಟ್ಟುಬಿದ್ದು ಬೆಂಬಲಿಸಿದೆ.
– ರಾಷ್ಟ್ರಪತಿ ಚುನಾವಣೆಯಿಂದ ದೊಡ್ಡ ಮಟ್ಟದಲ್ಲಿ ರಾಜಕಾರಣ ಬದಲಾಗದೇ ಇದ್ದರೂ ಜನಾಭಿಪ್ರಾಯ ರೂಪುಗೊಳ್ಳಲು ಕಾರಣ ಆಗುತ್ತದೆ. ಈಗಾಗಲೇ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಇಳಿಸಿದ್ದನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳಲು ಶುರು ಮಾಡಿದೆ.
– ಯಶವಂತ್ ಸಿನ್ಹಾ ರಾಷ್ಟ್ರೀಯ ಮಟ್ಟದ ಪ್ರಭಾವಿ ರಾಜಕಾರಣಿ ಅಲ್ಲ. ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು ಮತ್ತು ಪ್ರಧಾನಿ ಮೋದಿಯವರ ವಿರುದ್ಧ ನಿರಂತರ ಟೀಕೆ ಮಾಡುತ್ತಿದ್ದರು ಎಂಬ ಕಾರಣಗಳನ್ನು ಬಿಟ್ಟರೆ ಯಶ್ವಂತ್ ಸಿನ್ಹಾ ಅಭ್ಯರ್ಥಿತನದ ಆಯ್ಕೆಗೆ ಕಾರಣಗಳೇ ಇಲ್ಲ. ಕೆಲ ತಿಂಗಳಿಂದ ಟಿಎಂಸಿ ನಾಯಕರಾಗಿದ್ದ ಕಾರಣ ಸಿನ್ಹಾ ಅವರ ಹೆಸರನ್ನು ಘೋಷಿಸಿ ಟಿಎಂಸಿ ತನ್ನ ಅಭ್ಯರ್ಥಿತನವನ್ನು ಕಾಂಗ್ರೆಸ್ ಸೇರಿದಂತೆ 11 ವಿರೋಧ ಪಕ್ಷಗಳ ಮೇಲೆ ಹೇರಿದೆ.
– ಯಶ್ವಂತ್ ಸಿನ್ಹಾ ಆಯ್ಕೆ ಬಗ್ಗೆ ವಿಪಕ್ಷಗಳೇ ಸಹಮತ ಇಲ್ಲ. ಯಶ್ವಂತ್ ಸಿನ್ಹಾ ಅವರ ತವರು ಲೋಕಸಭಾ ಕ್ಷೇತ್ರ ಜಾರ್ಖಂಡ್ನ ಹಜಾರಿಭಾಗ್. ಆದರೆ ಜಾರ್ಖಂಡ್ನಲ್ಲಿ ಕಾಂಗ್ರೆಸ್ ಜೊತೆಗೆ ಸೇರಿಕೊಂಡು ಮೈತ್ರಿ ಸರ್ಕಾರ ರಚಿಸಿರುವ ಜೆಎಎಂ ಕೂಡಾ ಯಶ್ವಂತ್ ಸಿನ್ಹಾ ಬದಲು ಮುರ್ಮು ಅವರಿಗೆ ಬೆಂಬಲ ಘೋಷಿಸಿದೆ. ಕಾರಣ ಬುಡಕಟ್ಟು ಮಹಿಳೆಯೊಬ್ಬರು ದೇಶದ ಅತ್ಯುನ್ನತ ಗಾದಿಗೆ ಹೋಗುವುದನ್ನು ವಿರೋಧಿಸಿದ್ದಾರೆ ಎಂಬ ಕಳಂಕವನ್ನು ಹೊತ್ತಕೊಳ್ಳಲು ಜಾರ್ಖಂಡ್ ಮುಕ್ತಿ ಮೋರ್ಚಾ ಸಿದ್ಧವಿಲ್ಲ. ಕಾರಣ ಗುಡ್ಡಗಾಡು ರಾಜ್ಯದಲ್ಲಿ ಬುಡಕಟ್ಟು ಮತಗಳು ದೂರ ಆಗಬಹುದು ಎಂಬ ಆತಂಕ ಜೆಎಂಎಂನದ್ದು. ಹೀಗಾಗಿ ಸಿಎಂ ಹೇಮಂತ್ ಸೊರೇನ್ ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ಕಾಂಗ್ರೆಸ್ ಜೊತೆ ಸೇರದೇ ಬಿಜೆಪಿ ಜೊತೆಗೆ ಸೇರಿದ್ದಾರೆ.
– ವಿಚಿತ್ರ ಎಂದರೆ ಒಡಿಶಾ ಮೂಲದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧಿಸುವುದಾಗಿ ಒಡಿಶಾ ಕಾಂಗ್ರೆಸ್ಸೇ ಘೋಷಿಸಿದೆ. ದೆಹಲಿಯ ಕಾಂಗ್ರೆಸ್ ನಾಯಕರು ಕೈಗೊಂಡ ನಿರ್ಧಾರವನ್ನು ಪಾಲಿಸಬೇಕಾದ ಅನಿವಾರ್ಯತೆಯಲ್ಲಿ ಒಡಿಶಾ ಕಾಂಗ್ರೆಸ್ ನಾಯಕರದ್ದು. ಕಳಿಂಗ ರಾಜ್ಯದಲ್ಲಿ ನೆಲಕಚ್ಚಿರುವ ಪಕ್ಷವನ್ನು ಕಟ್ಟಬೇಕು ಎನ್ನುವ ಹೈಕಮಾಂಡ್ ಲೆಕ್ಕಾಚಾರದ ನಡುವೆಯೇ ಇಂತಹ ನಿರ್ಧಾರಗಳು ಕಾಂಗ್ರೆಸ್ಗೆ ಮುಳುವಾಗಬಹುದು.
– ಒಡಿಶಾದಲ್ಲಿ ಆಡಳಿತದಲ್ಲಿರುವ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ತನ್ನ ರಾಜ್ಯದ ಎಲ್ಲ ಶಾಸಕರು ಮತ್ತು ಸಂಸದರಿಗೆ ಪಕ್ಷಬೇಧ ಮರೆತು ಮುರ್ಮು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದೆ. ಈ ಬಗ್ಗೆ ಸಿಎಂ ನವೀನ್ ಪಟ್ನಾಯಕ್ ಅವರೇ ಟ್ವೀಟಿಸಿದ್ದಾರೆ. ಈ ಮೂಲಕ ಒಡಿಶಾದ ಮನೆ ಮಗಳನ್ನು ರಾಷ್ಟ್ರಪತಿ ಹುದ್ದೆಗೇರಿಸುವಲ್ಲಿ ನಮ್ಮ ಪಾಲೂ ಇದೆ ಎಂಬ ಸಂದೇಶವನ್ನು ಒಡಿಶಾದ ಜನತೆಗೆ ಪಟ್ನಾಯಕ್ ರವಾನಿಸುವಲ್ಲಿ ಯಶಸ್ವಿ ಆಗಿದ್ದಾರೆ.
– ವೈಎಸ್ಆರ್ ಕಾಂಗ್ರೆಸ್ ಕೂಡಾ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಿದೆ. ನಮ್ಮ ಜೊತೆಗೆ ಸಮಾಲೋಚನೆ ನಡೆಸಿಲ್ಲ ಎಂದು ಟಿಎಂಸಿ ನೇತೃತ್ವದ ವಿಪಕ್ಷಗಳ ಅಭ್ಯರ್ಥಿಗೆ ವಿರೋಧ ವ್ಯಕ್ತಪಡಿಸಿ ಸಿನ್ಹಾ ಬದಲು ಮುರ್ಮು ಅವರಿಗೆ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಬೆಂಬಲ ಪ್ರಕಟಿಸಿದೆ.
– ರಾಷ್ಟ್ರ ಮಟ್ಟದಲ್ಲಿ ಪರ್ಯಾಯ ಒಕ್ಕೂಟವನ್ನು ರಚಿಸಿಕೊಳ್ಳಬೇಕೆಂದು ಕಳೆದ ತಿಂಗಳು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರವಲ್ಲದೇ ಎನ್ಡಿಎಯೇತರ ಮತ್ತು ಯುಪಿಎಯೇತರ ಪಕ್ಷಗಳ ನಾಯಕರನ್ನು ಭೇಟಿ ಮಾಡಿದ್ದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ಅವರ ಟಿಆರ್ಎಸ್ ವಿಪಕ್ಷಗಳ ಸಭೆಯಿಂದ ದೂರ ಉಳಿದಿದೆ.
– ಶಿರೋಮಣಿ ಅಕಾಲಿದಳ, ಆಮ್ ಆದ್ಮಿ ಪಾರ್ಟಿ ಕೂಡಾ ವಿಪಕ್ಷಗಳ ಸಭೆಯಿಂದ ದೂರ ಉಳಿದಿತ್ತು.
– ಪ್ರತಿಯೊಂದು ಪಕ್ಷವೂ ತನಗೆ ರಾಜಕೀಯವಾಗಿ ಸಾಧುವಾಗಿರುವ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರೆ ಇತ್ತ ಕಾಂಗ್ರೆಸ್ ಮಾತ್ರ ಸತತ ಸೋಲಿನ ಏಟಿನಿಂದ ದಾಕ್ಷಿಣ್ಯ ಮತ್ತು ಅನಿವಾರ್ಯತೆ ರಾಜಕಾರಣದಲ್ಲಿ ಸಿಲುಕಿಕೊಂಡಿರುವುದು ಪಕ್ಷ ಮತ್ತು ಅದರ ನಾಯಕರ ಮನೋಬಲ ಕುಗ್ಗಿದೆ ಎನ್ನುವುದರ ಸಂಕೇತ. ಹೀಗಾಗಿ ಸಿನ್ಹಾ ಅವರು ಬಿಜೆಪಿಯ ಮಾಜಿ ನಾಯಕರಾದರೂ `ಬೆಂಬಲಿಸಲೇಬೇಕಲ್ಲ’ ಎಂಬ ಖರ್ಗೆ ಅವರ ಮಾತು ದೃಢೀಕರಿಸಿದೆ.