ಸಿಎಂ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಆಗಿದ್ದು ಕೇವಲ 11 ದಿನ. 11 ದಿನದಲ್ಲೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಮೇ 29ರಂದು ಸೋಮವಾರ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಕೆಶಿವಕುಮಾರ್ ಅವರು ಬೆಂಗಳೂರಿನ ರಾಜಾಜಿನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್ (NPS)ಗೆ ಭೇಟಿ ನೀಡಿದ್ದರು. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲೇ ಮಾಹಿತಿ ಹಂಚಿಕೊಂಡಿದ್ದರು.
ರಾಜಾಜಿನಗರದಲ್ಲಿರುವ NPS ಶಾಲೆಗೆ ಭೇಟಿ ನೀಡಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಶಿಕ್ಷಣ ತಜ್ಞರಾದ ಶ್ರೀ ಗೋಪಾಲಕೃಷ್ಣ ಅವರನ್ನು ಭೇಟಿಯಾದೆ. ರಾಜ್ಯದಲ್ಲಿ ಪಂಚಾಯ್ತಿ ಮಟ್ಟದಲ್ಲಿ ನವೋದಯ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಿದ್ದು ಈ ಸಂಬಂಧ ಗೋಪಾಲಕೃಷ್ಣ ಅವರೊಂದಿಗೆ ಚರ್ಚಿಸಿ, ಸಲಹೆಗಳನ್ನು ಪಡೆದೆ.
ಎಂದು ಡಿಕೆಶಿ ಅವರು ಹೇಳಿದ್ದರು.
ಡಿಕೆಶಿ ಭೇಟಿ ನೀಡಿದ್ದ ಶಾಲೆ ವಿರುದ್ಧ ಅಕ್ರಮ ಆರೋಪ:
ಬೆಂಗಳೂರಿನ ಪ್ರತಿಷ್ಠಿತ ಎನ್ಪಿಎಸ್ ಶಾಲೆಗಳ ವಿರುದ್ಧ 2016ರಲ್ಲೇ (ಆಗ ಸಿಎಂ ಸಿದ್ದರಾಮಯ್ಯನವರ ಸರ್ಕಾರವೇ ಇತ್ತು) ನಕಲಿ ದಾಖಲೆ ಸಲ್ಲಿಸಿ ಅಕ್ರಮ ಎಸಗಿದ ಆರೋಪ ಸಂಬಂಧ ವರದಿ ಸಲ್ಲಿಕೆಯಾಗಿತ್ತು.
ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಶಾಲೆ ಎಂದು ಹೇಳಿ ಶಿಕ್ಷಣ ಹಕ್ಕು ಕಾಯ್ದೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಎರಡು ಬಾರಿ ಎನ್ಪಿಎಸ್ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದರ ಬಗ್ಗೆ ವರದಿ ಸಲ್ಲಿಕೆಯಾಗಿತ್ತು.
ಸುಪ್ರೀಂಕೋರ್ಟ್ ತೀರ್ಪು:
2012ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಅನುದಾನಿತ ರಹಿತ ಅಲ್ಪಸಂಖ್ಯಾತ ಖಾಸಗಿ ಶಾಲೆಗಳಿಗೆ ಆರ್ಟಿಇ ಅಡಿಯಲ್ಲಿ ಮಕ್ಕಳ ದಾಖಲಾತಿಯಿಂದ ವಿನಾಯಿತಿ ನೀಡಿತ್ತು.
ಎರಡು ಬಾರಿ ನಕಲಿ ದಾಖಲೆ ಸಲ್ಲಿಕೆ ಆರೋಪ, FIR ದಾಖಲು:
ಸಾರ್ವತ್ರಿಕ ಶಿಕ್ಷಣ ನಿರ್ದೇಶನಾಲಯ ಸಲ್ಲಿಸಿದ್ದ ವರದಿ ಪ್ರಕಾರ 2015-16ರ ಅವಧಿಯಲ್ಲಿ ಎನ್ಪಿಎಸ್ ಸಮೂಹಕ್ಕೆ ಸೇರಿದ ರಾಜಾಜಿನಗರ ಮತ್ತು ಬಸವೇಶ್ವರನಗರದಲ್ಲಿರುವ ಶಾಲೆಗಳು ನಕಲಿ ದಾಖಲೆಗಳನ್ನು ಸಲ್ಲಿಸಿದ್ದರು. ಇದಾದ ಬಳಿಕ 2016-17ರಲ್ಲೂ ಎನ್ಪಿಎಸ್ನ ಆರು ಶಾಲೆಗಳು ಇದೇ ರೀತಿಯಾದ ನಕಲಿ ದಾಖಲೆಗಳನ್ನು ಸಲ್ಲಿಸಿ ಆರ್ಟಿಇ ಕಾನೂನಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದವು.
ಈ ಅಕ್ರಮ ಸಂಬಂಧ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗ ನೀಡಿದ್ದ ದೂರಿನಡಿ ಎನ್ಪಿಎಸ್ ಶಾಲೆಯ ಸಂಸ್ಥಾಪಕ ಗೋಪಾಲಕೃಷ್ಣ ಅವರ ವಿರುದ್ಧ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡಾ ದಾಖಲಾಗಿತ್ತು.
ಡಿಕೆಶಿ ಭೇಟಿ ಬಗ್ಗೆ ಪ್ರಶ್ನೆ:
Voice Of Parents Association ಎಂಬ ಹೆಸರಲ್ಲಿರುವ ಟ್ವಿಟ್ಟರ್ ಖಾತೆಯಲ್ಲಿ ಡಿಕೆಶಿವಕುಮಾರ್ ಅವರು ಎನ್ಪಿಎಸ್ಗೆ ನೀಡಿರುವ ಭೇಟಿ ಬಗ್ಗೆ ಪ್ರಶ್ನಿಸಲಾಗಿದೆ. ಎನ್ಪಿಎಸ್ ವಿರುದ್ಧ ದಾಖಲೆ ಅಕ್ರಮದ ಬಗ್ಗೆ ಈ ಹಿಂದೆ ಆಗಿರುವ ವರದಿಗಳನ್ನು ಲಗತ್ತಿಸಿ ಡಿಕೆಶಿ ಅವರನ್ನು ಪ್ರಶ್ನಿಸಲಾಗಿದೆ.
ಜೊತೆಗೆ ಇದೇ ಟ್ವಿಟ್ಟರ್ ಖಾತೆಯಲ್ಲಿ ಎನ್ಪಿಎಸ್ನ ಬನಶಂಕರಿ ಶಾಲೆ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಆ ಟ್ವಿಟ್ಟರ್ ಪೋಸ್ಟ್ ಪ್ರಕಾರ
ಎನ್ಪಿಎಸ್ ಬನಶಂಕರಿ ಶಾಲೆಯಲ್ಲಿ ಕಂತಿನ ರೂಪದಲ್ಲಿ ಪೋಷಕರಿಗೆ ಶುಲ್ಕ ಪಾವತಿಸಲು ಅನುಮತಿ ನೀಡುತ್ತಿಲ್ಲ, ಶಾಲೆಯ ಶುಲ್ಕದ ಬಗ್ಗೆ ವಿವರ ನೀಡುತ್ತಿಲ್ಲ, ಶುಲ್ಕ ಸ್ವರೂಪದ ಬಗ್ಗೆ ಶಾಲೆಯ ಬೋರ್ಡ್ನಲ್ಲಿ ಬಹಿರಂಗವಾಗಿ ಪ್ರದರ್ಶಿಸಿಲ್ಲ ಮತ್ತು ಶಾಲೆಯಿಂದಲೇ ಮಕ್ಕಳು ಪಠ್ಯಪುಸಕ್ತ ಮತ್ತು ನೋಟ್ಬುಕ್ ಖರೀದಿ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ
ಎಂದು ಆರೋಪ ಮಾಡಲಾಗಿದೆ.
ADVERTISEMENT
ADVERTISEMENT