`ಪಿಎಸ್ಐ ನೇಮಕಾತಿ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ತಮ್ಮ ಇಲಾಖೆ ಹಗರಣಗಳ ವಿಚಾರಗಳ ಬಗ್ಗೆ ಯಾರು ಧ್ವನಿ ಎತ್ತಬಾರದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಎಂ.ಬಿ. ಪಾಟೀಲ್ ಅವರ ನಿವಾಸಕ್ಕೆ ಸಚಿವ ಅಶ್ವತ್ ನಾರಾಯಣ್ ಅವರ ಭೇಟಿ ಕುರಿತು ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಮಂಗಳವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ಅವರು ಸಹಜವಾಗಿಯೇ ಇದೊಂದು ಖಾಸಗಿ ಭೇಟಿ. ನಾವು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಸಲಹೆ ಪಡೆಯಲು ಎಂ ಬಿ ಪಾಟೀಲರ ಮನೆಗೆ ಹೋಗಿದ್ದೆ ಎಂಬ ಸಬೂಬು ನೀಡುತ್ತಾರೆ. ಈಗ ಈ ವಿಚಾರವಾಗಿ ಚರ್ಚೆ ಮಾಡುವುದು ಬೇಡ. ಈ ವಿಚಾರವಾಗಿ ಅವರನ್ನೇ ಕೇಳಿ’ ಎಂದರು.
ಆದರೆ `ಅಶ್ವತ್ಥ್ ನಾರಾಯಣ್ ತಮ್ಮನ್ನು ಭೇಟಿ ಆಗಿದ್ದರು’ ಎಂದು ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರು ನೀಡಿರುವ ಹೇಳಿಕೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ನಿರಾಕರಿಸಿದ್ದಾರೆ.
`ಅಶ್ವತ್ಥ್ ನಾರಾಯಣ್ ನನ್ನನ್ನು ಭೇಟಿ ಆಗಿಲ್ಲ. ಒಂದು ವೇಳೆ ಭೇಟಿ ಆದರೂ ತಪ್ಪೇನು..? ಸಿದ್ದರಾಮಯ್ಯ ಅವರ ಮನೆಗೆ ಬೇರೆ ಪಕ್ಷಗಳ ನಾಯಕರು ಬರಲ್ವಾ..? ಬೇರೆ ಪಕ್ಷಗಳ ನಾಯಕರ ಮನೆಗೆ ಸಿದ್ದರಾಮಯ್ಯ ಹೋಗಲ್ವಾ..? ರಾಜಕಾರಣವೇ ಬೇರೆ’ ಎಂದು ಹೇಳುವ ಮೂಲಕ ಡಿಕೆಶಿಗೆ ಎಂಬಿಪಾ ತಿರುಗೇಟು ನೀಡಿದ್ದಾರೆ.