ಲೋಕಸಭಾ ಚುನಾವಣೆಗೆ ಸಿದ್ಧತೆ ಚುರುಕುಗೊಳಿಸಿರುವ ಕಾಂಗ್ರೆಸ್ ಚುನಾವಣಾ ವೆಚ್ಚಕ್ಕಾಗಿ ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸುವ ಅಭಿಯಾನ ಆರಂಭಿಸಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ದೇಣಿಗೆ ನೀಡುವ ಮೂಲಕ ಇವತ್ತು ಅಭಿಯಾನಕ್ಕೆ ಚಾಲನೆ ನೀಡಿದರು.
ಉತ್ತಮ ಭಾರತಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ದೇಶಕ್ಕಾಗಿ ದೇಣಿಗೆ ಎಂದು ಹೆಸರಿಡಲಾಗಿದೆ. 1918-20ರ ಅವಧಿಯಲ್ಲಿ ಮಹಾತ್ಮಗಾಂಧಿಯವರು ಕೂಡಾ ತಿಲಕ್ ಸ್ವರಾಜ್ ನಿಧಿ ಹೆಸರಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ನಿಧಿ ಸಂಗ್ರಹಿಸಿದ್ದರು. ಮಹಾತ್ಮನಿಂದಲೇ ಪ್ರೇರಣೆಗೊಂಡು ಕಾಂಗ್ರೆಸ್ ಈಗ ದೇಣಿಗೆಯನ್ನು ಆರಂಭಿಸಿದೆ.
ಲೋಕಸಭಾ ಚುನಾವಣಾ ಉದ್ದೇಶಕ್ಕಾಗಿ ದೇಣಿಗೆ ಸಂಗ್ರಹಿಸ್ತಿರುವ ಹಿನ್ನೆಲೆಯಲ್ಲಿ ದೇಣಿಗೆ ಸಂಗ್ರಹದ ಲೋಗೋದಲ್ಲಿ ಚುನಾವಣಾ ಚಿಹ್ನೆಯನ್ನು ಮೂರು ಬಣ್ಣಗಳಲ್ಲಿ ತೋರಿಸಲಾಗಿದೆ.
ಪಕ್ಷಕ್ಕೆ 138 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಣಿಗೆಯ ಮೊದಲ ಮೂರು ಮೊತ್ತವನ್ನು 138 ರೂ., 1,380 ರೂ., 13,800 ರೂಪಾಯಿ ಎಂದು ಕಾಂಗ್ರೆಸ್ ನಿಗದಿಪಡಿಸಿದೆ. ಇದನ್ನು ಹೊರತುಪಡಿಸಿ ಬೇರೆ ಮೊತ್ತವನ್ನೂ ದೇಣಿಗೆಯಾಗಿ ನೀಡಬಹುದು.
ಎರಡು ವೆಬ್ಸೈಟ್ಗಳ ಮೂಲಕ ದೇಣಿಗೆ ನೀಡಬಹುದಾಗಿ. 1) https://donateinc.net/ 2) https://www.inc.in/
ದೇಣಿಗೆ ನೀಡುವವರ ವಯಸ್ಸು 18 ವರ್ಷ ತುಂಬಿರಬೇಕು. ದೇಣಿಗೆ ನೀಡಿದ ಬಳಿಕ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಖರ್ಗೆ ಅವರ ಸಹಿಯುಳ್ಳ ಪ್ರಮಾಣಪತ್ರವನ್ನು ನೀಡಲಾಗುತ್ತದೆ.