ಕಾರಿನೊಳಗೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಡೋರ್ ಲಾಕ್ ಆದ ಪರಿಣಾಮ ಮೂವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ಶನಿವಾರ ನಡೆದ ಬಗ್ಗೆ ವರದಿಯಾಗಿದೆ.
ಮೃತ ಮಕ್ಕಳನ್ನು ನಿತೀಶ್ (7), ಆತನ ಸಹೋದರಿ ನಿತೀಶಾ (5) ಮತ್ತು ಕಪಿಚಂದ್ (4) ಎಂದು ಗುರುತಿಸಲಾಗಿದೆ. ನಿತೀಶ್ ಮತ್ತು ನಿತೀಶಾ ಇಬ್ಬರೂ ನಾಗರಾಜ ಎಂಬುವರ ಮಕ್ಕಳು ಹಾಗೂ ಕಪಿಚಂದ್ ಸುಧಾಕರ್ ಎಂಬುವರ ಮಗ ಎಂದು ಹೇಳಲಾಗಿದೆ.
ತಿರುನೆಲ್ವೇಲಿ ಜಿಲ್ಲೆಯ ಪಾನಕುಡಿ ಸಮೀಪದ ವಸತಿ ಪ್ರದೇಶದಲ್ಲಿ ಇವರು ಕಾರಿನಲ್ಲಿ ಆಟವಾಡುತ್ತಿದ್ದರು. ನಾಗರಾಜ ಅವರ ಸಹೋದರ ಮಣಿಕಂದನ್ ಅವರ ಕಾರಿನಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾರಿನ ಡೋರ್ ಲಾಕ್ ಆಗಿದೆ. ಇದರಿಂದ ಮಕ್ಕಳಿಗೆ ಹೊರ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಮೂವರೂ ಮಕ್ಕಳು ಹೊರಬರಲಾರದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮಕ್ಕಳು ತುಂಬಾ ಸಮಯವಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಡಿದಾಗ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಕಾರಿನ ಬಳಿ ತೆರಳಿ ನೋಡಿದಾಗ ಮಕ್ಕಳು ಸಾವಿಗೀಡಾಗಿರುವುದು ಕಂಡುಬಂದಿದೆ. ಪಣಕುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.