ಆಪರೇಷನ್ ದಕ್ಷಿಣ ಕಹಳೆ ಮೊಳಗಿಸಿರುವ ಬಿಜೆಪಿ ಸಂಸತ್ತಿನ ಮೇಲ್ಮನೆ ರಾಜ್ಯಸಭೆಗೆ ದಕ್ಷಿಣ ರಾಜ್ಯಗಳ ನಾಲ್ವರು ಪ್ರಮುಖರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆ, ತಮಿಳುನಾಡು ಮೂಲದ ಸಂಗೀತ ಮಾಂತ್ರಿಕ ಇಳಯರಾಜ, ಕೇರಳ ಮೂಲದ ಅಥ್ಲೀಟ್ ಪಿ ಟಿ ಉಷಾ ಮತ್ತು ಆಂಧ್ರ ಮೂಲದ ನಿರ್ಮಾಪಕ, ನಿರ್ದೇಶಕ ರಾಜಮೌಳಿ ಅವರ ತಂದೆ ಕೆ ವಿ ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.
ರಾಜ್ಯಸಭೆ ಚುನಾಯಿತ ಸಂಸದರಂತೆ ನಾಮನಿರ್ದೇಶಿತ ಸದಸ್ಯರ ಅವಧಿಯೂ 6 ವರ್ಷ.
ಸದ್ಯಕ್ಕೆ ನಾಮನಿರ್ದೇಶನಗೊಂಡಿರುವ ಸದಸ್ಯರ ಸಂಖ್ಯೆ 9. ಇನ್ನೂ 3 ಸ್ಥಾನಗಳು ಖಾಲಿ ಇವೆ.
ರಾಜ್ಯಸಭೆಗೆ ಸದಸ್ಯರ ನಾಮನಿದೇಶನ:
ರಾಜ್ಯಸಭೆಯ ಒಟ್ಟು ಬಲಾಬಲ 245. ಇದರಲ್ಲಿ 233 ಸಂಸದರು ರಾಜ್ಯಗಳ ವಿಧಾನಸಭೆಯಿಂದ ಆಯ್ಕೆಯಾದರೆ ಉಳಿದ 12 ಮಂದಿಯನ್ನು ರಾಷ್ಟçಪತಿಗಳು ನಾಮನಿರ್ದೇಶನ ಮಾಡುತ್ತಿದ್ದಾರೆ.
ನಾಮನಿರ್ದೇಶನ ಯಾಕೆ..?
ಸಂವಿಧಾನ ರಚನೆಗಾಗಿ ರೂಪುಗೊಂಡಿದ್ದ ಸಂವಿಧಾನ ರಚನಾ ಸಭೆಯಲ್ಲಿ `ಸಂಸತ್ತಿನ ಮೇಲ್ಮನೆ ರಾಜ್ಯಸಭೆಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ’ ಬಗ್ಗೆ ಚರ್ಚಿಸಲಾಗಿತ್ತು. ಚುನಾವಣೆಯಲ್ಲಿ ಆಯ್ಕೆಯಾಗದ ಆದರೆ ತಮ್ಮ ಜ್ಞಾನ ಮತ್ತು ಅನುಭವದಿಂದ ಮೇಲ್ಮನೆಯಲ್ಲಿ ಚರ್ಚೆಯ ವೇಳೆ ಲಾಭ ತಂದುಕೊಡಬಲ್ಲರು ಎಂಬುದೇ ನಾಮನಿರ್ದೇಶನದ ಹಿಂದಿನ ಉದ್ದೇಶ. ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಮುಖರನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡುವ ಮೂಲಕ ಅವರ ಜ್ಞಾನ ಮತ್ತು ಅನುಭವದ ಲಾಭ ಪಡೆಯುವ ಉದ್ದೇಶ.
ನಾಮನಿರ್ದೇಶನ ಸದಸ್ಯರ ಹಕ್ಕುಗಳೇನು..?
ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಿಗೆ ದೇಶದ ಮೊದಲ ಪ್ರಜೆ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಆದರೆ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ 543 ಲೋಕಸಭಾ ಸಂಸದರು, ಚುನಾಯಿತ 233 ರಾಜ್ಯಸಭಾ ಸಂಸದರು ಮತ್ತು ನಾಮನಿರ್ದೇಶನಗೊಳ್ಳುವ 12 ಮಂದಿ ಸದಸ್ಯರು ಮತದಾನದ ಹಕ್ಕನ್ನು ಹೊಂದಿರುತ್ತಾರೆ.
ರಾಜ್ಯಸಭೆಯ ಉಳಿದ ಚುನಾಯಿತ ಸಂಸದರಂತೆ ಸದನದಲ್ಲಿ ಮಂಡನೆ ಆಗುವ ಮಸೂದೆಗಳ ಮೇಲೆ ಚರ್ಚಿಸುವ ಮತ್ತು ಮತದಾನ ಮಾಡುವ ಹಕ್ಕು ನಾಮನಿರ್ದೇಶಿತ ಸದಸ್ಯರಿಗಿದೆ.
ಪಕ್ಷಕ್ಕೆ ಸೇರ್ಪಡೆ ಆಗಬಹುದೇ..?
ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇಲೆ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವ ಸದಸ್ಯರು ತಾವು ಬಯಸಿದ ರಾಜಕೀಯ ಪಕ್ಷ ಸೇರಲು ಅವಕಾಶವಿದೆ. ನಾಮನಿರ್ದೇಶನಗೊಂಡ ದಿನದಿಂದ ಮೊದಲ ಆರು ತಿಂಗಳೊಳಗೆ ಪಕ್ಷಕ್ಕೆ ಸೇರ್ಪಡೆಯಾಗಲು ಪಕ್ಷಾಂತರ ನಿಷೇಧ ಕಾನೂನಿನಲ್ಲಿ ಅವಕಾಶವಿದೆ. ಒಂದು ವೇಳೆ ಆರು ತಿಂಗಳ ಬಳಿಕ ನಾಮನಿರ್ದೇಶಿತ ಸಂಸದರು ಪಕ್ಷಕ್ಕೆ ಸೇರ್ಪಡೆಯಾದರೆ ಆಗ ಅವರು ಅನರ್ಹರಾಗಿ ತಮ್ಮ ಸಂಸದ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ.
ನಾಮನಿರ್ದೇಶಿತ ಸಂಸದರ ಸಂಬಳ ಎಷ್ಟು..?
ರಾಷ್ಟçಪತಿ ಚುನಾವಣೆಯಲ್ಲಿ ಮತದಾನ ಹಕ್ಕು ಇಲ್ಲ ಎನ್ನುವುದನ್ನು ಹೊರತುಪಡಿಸಿ ನಾಮನಿರ್ದೇಶಿತ ಸಂಸದರಿಗೆ ಲೋಕಸಭೆ ಮತ್ತು ರಾಜ್ಯಸಭೆಯ ಉಳಿದ ಸಂಸದರಿಗಿರುವ ಎಲ್ಲ ರೀತಿಯ ಹಕ್ಕು ಮತ್ತು ಸೌಲಭ್ಯಗಳಿವೆ.
# ಪ್ರತಿ ತಿಂಗಳ ಸಂಬಳ: 1 ಲಕ್ಷ ರೂಪಾಯಿ.
# ದಿನ ಭತ್ಯೆ: 2 ಸಾವಿರ ರೂಪಾಯಿ
# ಪ್ರಯಾಣ ಭತ್ಯೆ: ಸಂಸದರಾಗಿ ತಮ್ಮ ಕರ್ತವ್ಯದ ನಿರ್ವಹಣೆಗಾಗಿ ಸದಸ್ಯರು ವಿಮಾನ, ರೈಲು ಮತ್ತು ರಸ್ತೆ ಮಾರ್ಗ ಮೂಲಕ ಮಾಡುವ ಪ್ರಯಾಣ ವೆಚ್ಚವನ್ನು ಭರಿಸಲಾಗುತ್ತದೆ. ರಸ್ತೆ ಮಾರ್ಗದ ಮೂಲಕ ಪ್ರಯಾಣಿಸಿದರೆ ಆಗ ಕಿಲೋ ಮೀಟರ್ಗೆ 16 ರೂಪಾಯಿ ನೀಡಲಾಗುತ್ತದೆ.
# ಉಚಿತ ಸರ್ಕಾರಿ ನಿವಾಸ, ವಿದ್ಯುತ್, ನೀರು, ದೂರವಾಣಿ ಸಂಪರ್ಕ
# ಪಿಂಚಣಿ: ಒಂದು ಬಾರಿ ಸಂಸದರಾಗಿ ಮಾಜಿಗಳಾದರೆ ಆಗ ಪ್ರತಿ ತಿಂಗಳು 25 ಸಾವಿರ ರೂಪಾಯಿ ಪಿಂಚಣಿ. ಒಂದು ವೇಳೆ ಒಂದಕ್ಕಿಂತ ಹೆಚ್ಚು ಬಾರಿ ಸಂಸದರಾದರೆ ಆಗ ಮಾಸಿಕ 27 ಸಾವಿರ ರೂಪಾಯಿಗಳ ಜೊತೆಗೆ ಹೆಚ್ಚುವರಿ 2 ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತದೆ.
ಮಾಜಿ ಸಂಸದರಿಗೆ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಇರುತ್ತದೆ.
ಆಸ್ತಿ ಘೋಷಣೆ ಕಡ್ಡಾಯ:
ರಾಜ್ಯಸಭೆಯ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ 90 ದಿನದೊಳಗೆ ಹೊಸ ಸದಸ್ಯರು ತಮ್ಮ ಬಳಿ ಇರುವ ಸ್ಥಿರಾಸ್ತಿ, ಚರಾಸ್ತಿ, ಬ್ಯಾಂಕ್ ಠೇವಣಿ, ಅಡಮಾನ-ಸಾಲಗಳು ಒಳಗೊಂಡಂತೆ ಸಂಪೂರ್ಣ ಆಸ್ತಿ ವಿವರನ್ನು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸುವುದು ಕಡ್ಡಾಯವಾಗಿದೆ.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ:
ನಾಮನಿರ್ದೇಶನಗೊಂಡ ಸಂಸದರಿಗೂ ಪ್ರತಿ ವರ್ಷ 5 ಕೋಟಿ ರೂಪಾಯಿ ಮೊತ್ತದ ಪ್ರದೇಶಾಭಿವೃದ್ಧಿ ನಿಧಿ ಸಿಗುತ್ತದೆ. ಇವರು ದೇಶದಲ್ಲಿ ತಾವು ಬಯಸಿದ ಯಾವುದೇ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ತಮ್ಮ ಅನುದಾನ ನೀಡಬಹುದಾಗಿದೆ. ಐದು ವರ್ಷದ ಅವಧಿಯಲ್ಲಿ 25 ಕೋಟಿ ರೂಪಾಯಿ ಅನುದಾನ ಸಿಗುತ್ತದೆ.
ಹಾಜರಾತಿ:
ನಾಮನಿರ್ದೇಶನಗೊಂಡ ಸದಸ್ಯರು ರಾಜ್ಯಸಭೆಯ ಕಲಾಪಕ್ಕೆ ಹಾಜರಾಗಲೇಬೇಕು. ಭಾರತ ರತ್ನ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 348 ದಿನಗಳ ಕಲಾಪದಲ್ಲಿ ರಾಜ್ಯಸಭೆಗೆ ಹಾಜರಾಗಿದ್ದು 23 ದಿನಗಳು ಮಾತ್ರ. ಕೇಳಿದ ಪ್ರಶ್ನೆ 22 ಮಾತ್ರ. ನಟಿ ರೇಖಾ ಕೇವಲ 18 ದಿನವಷ್ಟೇ ಕಲಾಪ ಹಾಜರಾಗಿದ್ದರು ಮತ್ತು ಒಂದೇ ಒಂದು ಪ್ರಶ್ನೆಯನ್ನೂ ಸದನದಲ್ಲಿ ಕೇಳಿರಲಿಲ್ಲ. ಸಚಿನ್ ತೆಂಡೂಲ್ಕರ್ ಸಂಬಳ ಮತ್ತು ಭತ್ಯೆಯ ರೂಪದಲ್ಲಿ 58 ಲಕ್ಷ ರೂಪಾಯಿ ಪಡೆದಿದ್ದರೆ, ನಟಿ ರೇಖಾ 65 ಲಕ್ಷ ರೂಪಾಯಿ ಪಡೆದಿದ್ದರು.